ಭಂಡಾರ್ಕಾರ್ಸ್ ಕಾಲೇಜಿನ ಅಂತಿಮ ಬಿಎ ವಿದ್ಯಾರ್ಥಿ ಸಯ್ಯದ್ ಶಯಾನ್ ಅವರಿಂದ ನಿರ್ಮಾಣ
(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: “ಸ್ವಚತೆ..ಸ್ವಚ್ಚತೆ..ಸ್ವಚ್ಚತೆ.. ಹೇಳುದಕ್ಕೆ ಎಲ್ಲಾ ಹೇಳ್ತಾರೆ. ಆದ್ರೆ ಕಸ ಡಬ್ಬಿಯಲ್ಲಿ ಹಾಕೊದಕ್ಕೆ ಮಾತ್ರ ಉದಾಸೀನ. ಇಡೀ ಊರಲ್ಲಿ ಕಸದ ಡಬ್ಬಿ ಇಟ್ರು ಕಸ ಮಾತ್ರ ಡಬ್ಬಿಗೆ ಹಾಕ್ಲಿಕ್ಕೆ ಆಗುದಿಲ್ಲ….ಅಲ್ವಾ?”- ಎನ್ನುತ್ತಾ ತನ್ನ ನಯವಾದ ಧ್ವನಿಯಲ್ಲಿ ಮಾತನಾಡುತ್ತಾ ಓಡಾಡುತ್ತಾ ಇದ್ದರೆ ಆ ಕಸದ ಡಬ್ಬಿಯನ್ನು ನೋಡಲು ಒಂದಷ್ಟು ಮಂದಿ ಮುಗಿಬೀಳುತ್ತಾರೆ. ಡಸ್ಟ್ ಬಿನ್ ಮಾತಾನಾಡುವುದು ಸರಿಯಾಗಿಯೇ ಇದೆ ಎಂದು ತಲೆಯಾಡಿಸುತ್ತಾರೆ ಮತ್ತೊಂದಷ್ಟು ಮಂದಿ. ಹೀಗೆ ಮಾತಾಡುವ ಡಸ್ಟ್ ಬಿನ್ ಕಂಡು ಹಿಡಿಯುವ ಮೂಲಕ ಜನರಲ್ಲಿ ಕಸ ತ್ಯಾಜ್ಯದ ಬಗ್ಗೆ ಜಾಗೃತಿ, ಅರಿವು ಮೂಡಿಸುವ ನಿಟ್ಟಿನಲ್ಲಿ ಅಂತಿಮ ಕಲಾ ವಿಭಾಗದ ವಿದ್ಯಾರ್ಥಿ ಪ್ರತಿಫಲಾಪೇಕ್ಷೆಯಿಲ್ಲದೆ ಸಾಮಾಜಿಕ ಕಳಕಳಿ ಪ್ರದರ್ಶಿಸುತ್ತಿದ್ದಾರೆ.
ಬೈಂದೂರು ತಾಲೂಕಿನ ನಾವುಂದ ಅರೆಹೊಳೆ ಗ್ರಾಮದ ಕಂತಿಹೊಂಡ ನಿವಾಸಿ, ಪ್ರಸ್ತುತ ಕುಂದಾಪುರ ಭಂಡಾರ್ಕರ್ಸ್ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜಿನ ಅಂತಿಮ ಬಿಎ ವಿಭಾಗದ ವಿದ್ಯಾರ್ಥಿ ಸಯ್ಯದ್ ಶಯಾನ್ (24) ಎನ್ನುವರು ಮನೆ ನಿರ್ಮಾಣದಲ್ಲಿ ಶಿಲೆಕಲ್ಲು ಕೆಲಸ ಮಾಡುವ ಖಾದರ್ ಸಾಹೇಬ್, ಗೃಹಿಣಿ ಜಮೀಲಾ ದಂಪತಿಗಳ ಪುತ್ರ.
ಬಾಲ್ಯದಿಂದಲೂ ಆಸಕ್ತಿ: ಒಂದನೇ ತರಗತಿಯಿಂದ ಪಿಯುಸಿ ತನಕ ಸರಕಾರಿ ಶಾಲೆ-ಕಾಲೇಜಿನಲ್ಲಿ ವಿದ್ಯಾಭ್ಯಾಸ. ಬಾಲ್ಯದಲ್ಲಿಯೇ ಇಲೆಕ್ಟ್ರಾನಿಕ್ ವಸ್ತು, ಯಂತ್ರಗಳ ಬಗ್ಗೆ ಕುತೂಹಲ. ಇಂತಹ ವಸ್ತುಗಳನ್ನಿಟ್ಟುಕೊಂಡು ಏನಾದರೂ ಸಾಧಿಸುವ ಹಂಬಲ. ಶಾಲೆಗಳಲ್ಲಿನ ಪ್ರಾಜೆಕ್ಟ್ ವಸ್ತುಗಳನ್ನು ತಾನೇ ತಯಾರಿಸುವ ಚತುರತೆ. ಇಂದು ಕಲಾ ವಿಭಾಗದ ವಿದ್ಯಾರ್ಥಿ ವಿಜ್ಞಾನ ವಿಚಾರದ ಮಾಡೆಲ್ ತಯಾರಿಸಿ ಭೇಷ್ ಎಂದು ಕರೆಸಿಕೊಳ್ಳಲು ಈತನ ಇಚ್ಚಾಶಕ್ತಿ ಹಾಗೂ ಸಾಮಾಜಿಕ ಬದ್ಧತೆ ಕಾರಣ. ಇವರ ಕೆಲಸಕ್ಕೆ ಪೋಷಕರು, ಮನೆಯವರು, ಕಾಲೇಜಿನವರ ಸಹಕಾರ ಹಾಗೂ ಪ್ರೋತ್ಸಾಹವಿದೆ.
ಶ್ರಮಜೀವಿ ಶಯಾನ್…ಓದಿನೊಂದಿಗೆ ಪಾರ್ಟ್ ಟೈಂ ಕೆಲಸ..!
ಸಯ್ಯದ್ ಶಯಾನ್ ಬಹಳ ಕಷ್ಟಜೀವಿ. ನಿತ್ಯ ಕಾಲೇಜಿಗೆ ಹೋಗಿ ಬಂದು ಬಳಿಕ ಪಾರ್ಟ್ ಟೈಂ ಕೆಲಸಕ್ಕೆ ಹೋಗುತ್ತಾರೆ. ರಾತ್ರಿ ತನಕ ಕೆಲಸ ಮಾಡಿ ಬಂದು ಬಳಿಕ ಮನೆಯ ತನ್ನ ಪುಟ್ಟ ಕೊಠಡಿಯಲ್ಲಿ ಆಸಕ್ತಿದಾಯಕ ಕ್ಷೇತ್ರವಾದ ಮಾಡೆಲ್ ತಯಾರಿಕೆಯಲ್ಲಿ ಮಗ್ನರಾಗುತ್ತಾರೆ. ಮೊದಲಿಗೆ ತ್ರಾಸಿ ಸಮುದ್ರದ ಬಳಿ ಹಾಗೂ ಹಬ್ಬಗಳಲ್ಲಿ ಸ್ವೀಟ್ ಕಾರ್ನ್ ಮಾರುತ್ತಿದ್ದ ಶಯಾನ್ ಇದೀಗಾ ವೆಲ್ಡಿಂಗ್, ಫೈಬರ್ ಸೀಲಿಂಗ್ ನಿರ್ಮಾಣ, ಸಿಸಿ ಟಿವಿ ನಿರ್ವಹಣೆ ಹಾಗೂ ಇಲೆಕ್ಟ್ರೀಶಿಯನ್ ಆಗಿ ಬಿಡುವಿನ ವೇಳೆ ಕೆಲಸ ಮಾಡುತ್ತಾರೆ. ಬರುವ ಆದಾಯದಲ್ಲಿ ಸ್ವಲ್ಪ ಮೊತ್ತ ಮನೆ ನಿರ್ವಹಣೆಗೆ ನೀಡಿ, ಉಳಿದ ಹಣವನ್ನು ವಿದ್ಯಾಭ್ಯಾಸ ಹಾಗೂ ತನ್ನ ಆಸಕ್ತಿ ಕ್ಷೇತ್ರಕ್ಕೆ ಮೀಸಲಿಟ್ಟಿದ್ದಾರೆ.
ಏನಿದು ‘ರೋಬೋಟಿಕ್ ಡಸ್ಟ್ ಬಿನ್’..!
ಬದಲಾದ ಕಾಲಘಟ್ಟದಲ್ಲಿ ಕಸ-ತ್ಯಾಜ್ಯದ ಸಮಸ್ಯೆ ಎಲ್ಲೆಡೆ ವಿಪರೀತವಾಗಿದೆ. ಜನರಲ್ಲಿ ಈ ಬಗ್ಗೆ ಜಾಗೃತಿ ಹಾಗೂ ಅರಿವು ಮೂಡಿಸುವ ಕಾರ್ಯವೂ ಆಗಬೇಕಿದೆ. ಈ ನಿಟ್ಟಿನಲ್ಲಿ ಆಧುನಿಕತೆ ಸ್ಪರ್ಷದೊಂದಿಗೆ ನಿರ್ಮಿಸಿದ ‘ರೋಬೋಟಿಕ್ ಡಸ್ಟ್ ಬಿನ್’ ಕಾರ್ಯ ಎಲ್ಲರನ್ನೂ ತನ್ನತ್ತ ಆಕರ್ಷಿಸುತ್ತದೆ. ಅತ್ತಿತ್ತಾ ಓಡಾಡುತ್ತಾ ಕಸದ ವಿಚಾರದಲ್ಲಿ ಮಾತಾಡುತ್ತಾ ಜನಜಾಗೃತಿ ಮೂಡಿಸುವುದರ ಜೊತೆಗೆ ಎರಡು ಕಣ್ಣುಗಳ ಚಲನ-ವಲನ ಈ ಮಾಡರ್ನ್ ಯಂತ್ರದ ವಿಶೇಷತೆಗಳು. ಈ ಯಂತ್ರ ಸಿದ್ದಪಡಿಸಲು 120 ಲೀ. ಸಾಮರ್ಥ್ಯದ ಡಸ್ಟ್ ಬಿನ್ ಬಳಸಿದ್ದು ಚಲನೆಗಾಗಿ ಸ್ಕ್ವೇರ್ ಗೇರ್ ಮೋಟಾರ್, ಗಾಲಿ ಚಕ್ರ ಅಳವಡಿಸಲಾಗಿದೆ. ಚಲನೆ, ಕಣ್ಣುಗಳ ಮಿಸುಕಾಟ, ಧ್ವನಿಗಾಗಿ ರಿಮೋಟ್ ಕಂಟ್ರೋಲ್, ಬ್ರಷ್ ಇಲೆಕ್ಟ್ರಾನಿಕ್ ಸ್ಪೀಡ್ ಕಂಟ್ರೋಲರ್, ಸರ್ವೋ ಮೋಟಾರ್, ಲಿಥಿಯಂ ಅಯಾನ್ ಬ್ಯಾಟರಿ, ಲಿಪ್ಪೋ ಬ್ಯಾಟರಿ, ಬ್ಲೂಟೂತ್, ಮೈಕ್, ಸ್ಪೀಕರ್ ಅಳವಡಿಸಲಾಗಿದೆ. ಈ ಕಸದ ಬುಟ್ಟಿ ರೇಡಿಯೋ ಪ್ರಿಕ್ವೆನ್ಸಿಯನ್ನು ಮೂಲಕ ಕಾರ್ಯ ನಿರ್ವಹಿಸುತ್ತದೆ. ಓರ್ವ ಮನುಷ್ಯನ ನಿಯಂತ್ರಣದಲ್ಲಿ ಈ ಯಂತ್ರವನ್ನು ನಿರ್ವಹಿಸಬಹುದು.ಅಂದಾಜು 60 ಸಾವಿರಕ್ಕೂ ಅಧಿಕ ವೆಚ್ಚವಾಗಿದ್ದು ಪಾರ್ಟ್ ಟೈಂ ಕೆಲಸದಲ್ಲಿ ಬಂದ ಹಣ ಉಪಯೋಗಿಸಿದ್ದಾರೆ.
ಯಂತ್ರದ ವೈಶಿಷ್ಟ್ಯವೇನು..?
• ಜನ ಸೇರಿರುವ ಕಡೆ ಹೋಗಿ ಜನರಿಗೆ ಅವರದ್ದೇ ಶೈಲಿಯಲ್ಲಿ ಮನರಂಜನೆ ಕೊಡುತ್ತಾ ಮಾತಿನ ಕೊನೆಯಲ್ಲಿ ಜನರಿಗೆ ಕಸವನ್ನು ಕಸದ ಬುಟ್ಟಿಗೆ ಹಾಕಲು ಪ್ರೇರೇಪಿಸುತ್ತದೆ.• ಈ ಯಾಂತ್ರಿಕ ಕಸದ ಬುಟ್ಟಿಯು ಮನುಷ್ಯರ ತರಹ ಮುಖದ ಹಾವ ಭಾವಗಳನ್ನು ತೋರಿಸುತ್ತದೆ ಹಾಗೂ ಮಾತನಾಡುತ್ತದೆ.
ಕಸವನ್ನು ಕಸದ ಬುಟ್ಟಿಗೆ ಹಾಕಬೇಕು ಎನ್ನುವ ಅಲ್ಪ ಜ್ಞಾನವು ನಾಪತ್ತೆಯಾಗಿದೆ. ಈ ಸಮಸ್ಯೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಈ ಯಂತ್ರ ಸಿದ್ದಪಡಿಲಾಗಿದೆ. ಸಾಮಾಜಿಕ ಕಳಕಳಿಯಿಂದ ಈ ಕೆಲಸ ಮಾಡುತ್ತಿರುವೆ. ಮಲ್ಪೆ ಬೀಚ್ ಹಾಗೂ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಈಗಾಗಲೇ ಈ ಯಂತ್ರದ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಗಿದೆ. ಜನರಿಗೆ ಕಸದ ಬುಟ್ಟಿಯನ್ನು ಉಪಯೋಗಿಸಿ ಎಂದು ಪ್ರೇರೇಪಿಸುವುದು ಈ ವಿಶಿಷ್ಟ ಯಂತ್ರದ ಕೆಲಸ. ಮುಂದಿನ ದಿನದಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಈ ಯಂತ್ರದ ಪ್ರಾತ್ಯಕ್ಷಿಕೆಯನ್ನು ನೀಡುವ ಚಿಂತನೆಯಿದೆ. ಮನೆಯವರು, ಕಾಲೇಜಿನವರ ಪ್ರೋತ್ಸಾಹವಿದೆ. ಮುಂದಿನ ದಿನಗಳಲ್ಲಿ ‘ರೋವರ್ ಯಂತ್ರ’ ಸಿದ್ದಪಡಿಸಿ ಬೀಚ್ ಕ್ಲೀನಿಂಗ್ ಮೊದಲಾದ ಕೆಲಸಕ್ಕೆ ಬಳಸುವಂತೆ ಮಾಡುವ ಯೋಚನೆಯಿದೆ.
– ಸಯ್ಯದ್ ಶಯಾನ್ಶಯಾನ್ ಕ್ರಿಯಾಶೀಲ ವ್ಯಕ್ತಿತ್ವದ ವಿದ್ಯಾರ್ಥಿ. ನಿತ್ಯ ಕಾಲೇಜಿನ ಪಾಠ ಪ್ರವಚನದಲ್ಲಿ ತೊಡಗಿಸಿಕೊಳ್ಳುವ ಜೊತೆಗೆ ಸಾಮಾಜಿಕ ಬದ್ದತೆ ಕಾರ್ಯ ಮಾಡುತ್ತಿರುವುದು ಹೆಮ್ಮೆ ವಿಚಾರ. ತ್ಯಾಜ್ಯ-ಕಸದ ಸಮಸ್ಯೆ ಈಗ ಪಿಡುಗಾಗಿದ್ದು, ವಿದ್ಯಾರ್ಥಿಗಳ ಸಹಿತ ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈತ ಕೆಲಸ ಮಾಡುತ್ತಿರುವ ಪರಿಕಲ್ಪನೆ ಮೆಚ್ಚುವಂತದ್ದು. ಇದು ಯಶಸ್ವಿಯಾಗಲಿ.
– ಕೆ. ಗೋಪಾಲ್ (ಸಹಪ್ರಾಧ್ಯಾಪಕರು), ಇತಿಹಾಸ ವಿಭಾಗದ ಮುಖ್ಯಸ್ಥರು- ಭಂಡಾರ್ಕಾರ್ಸ್ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜು ಕುಂದಾಪುರ
Comments are closed.