(ಚಿತ್ರ, ವರದಿ- ಯೋಗೀಶ್ ಕುಂಭಾಶಿ)
ಕುಂದಾಪುರ: ಕುಂದಾಪುರ ಜನರಿಗೆ ಎರಡೆರಡು ಹಬ್ಬದ ಸಂಭ್ರಮ. ಒಂದೆಡೆ ಕುಂದೇಶ್ವರ ದೀಪೋತ್ಸವದ ಗೌಜಿಯಾದರೆ ಮತ್ತೊಂದೆಡೆ ಕಾರ್ಟೂನು ಹಬ್ಬದ ಮೆರುಗು ಕುಂದಾಪುರದಲ್ಲಿ ಹೆಚ್ಚಿದೆ. ಕರ್ನಾಟಕದ ಹೆಸರಾಂತ ವ್ಯಂಗ್ಯಚಿತ್ರ ಕಲಾವಿದ ಸತೀಶ್ ಆಚಾರ್ಯ ಅವರು ಕಳೆದ 10 ವರ್ಷಗಳಿಂದ ಆಯೋಜಿಸುತ್ತಿರುವ ‘ಕಾರ್ಟೂನ್ ಹಬ್ಬ’ವು ಡಿ.9- ಡಿ.12 ರವರೆಗೆ ಕುಂದಾಪುರದ ರೋಟರಿ ಕಲಾ ಮಂದಿರದಲ್ಲಿ (ಬೋರ್ಡ್ ಹೈಸ್ಕೂಲ್ ಆವರಣ) ವಿದ್ಯುಕ್ತವಾಗಿ ಆರಂಭಗೊಂಡಿದ್ದು ಜನರನ್ನು ಸೆಳೆಯುತ್ತಿದೆ.
ಕಾರ್ಯಕ್ರಮದ ವಿಶೇಷತೆ:
ನಾಲ್ಕು ದಿನಗಳ ಈ ಕಾರ್ಯಕ್ರಮವು ತರಹೇವಾರಿಯಾಗಿದೆ. ಉದ್ಘಾಟನೆಯಂದು ನಡೆದ ವಿದ್ಯಾರ್ಥಿಗಳು, ಪೋಷಕರಿಗಾಗಿ ಕಾರ್ಟೂನು ಸ್ಪರ್ಧೆಯಲ್ಲಿ 200ಕ್ಕೂ ಅಧಿಕ ಮಂದಿ ಭಾಗವಹಿಸಿದರು.
ರವಿವಾರ ಬೆಳಿಗ್ಗೆ ಖ್ಯಾತ ವ್ಯಂಗ್ಯಚಿತ್ರಕಾರರಿಂದ ಲೈವ್ ಎಡಿಟೋರಿಯಲ್ ಕಾರ್ಟೂನು ರಚನೆ ಹಾಗೂ ಮಾತುಕತೆ ನಡೆದಿದ್ದು ಸೌತ್ ಫರ್ಸ್ಟ್ ಕಾರ್ಯಕಾರಿಣಿ ಸಂಪಾದಕಿ ಅನುಷಾ ರವಿ ಸೂದ್ ವಿಶೇಷ ಅತಿಥಿ, ಸೂತ್ರಧಾರರಾಗಿದ್ದರು. ಸಂಜೆ ವಿದ್ಯಾರ್ಥಿಗಳ ಕಾರ್ಟೂನು ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಉಳಿದಂತೆ ಎರಡು ದಿನಗಳ ಕಾಲ ಚಿತ್ರ ಬಿಡಿಸೋಕೆ ಓಪನ್ ಕ್ಯಾನ್ವಾಸ್, ವ್ಯಂಗ್ಯಚಿತ್ರ ಪ್ರದರ್ಶನ, ಜೊತೆಗೆ ಕ್ಯಾರಿಕೇಚರ್ ಬಿಡಿಸಿ, ಡೈಲಾಗ್ ಬರೆದು ನಗದು ಬಹುಮಾನ ಗೆಲ್ಲುವ ಅವಕಾಶವಿದೆ. ಸಾಮಾಜಿಕ ಸಂದೇಶಗಳ ಸೆಲ್ಫಿ ಪಾಯಿಂಟ್ ಗಳು, ಮುಕ್ತ ಕಾರ್ಟೂನು ಕಾರ್ಯಾಗಾರ ಮತ್ತು ಕಾರ್ಟೂನಿಸ್ಟರರ ಜೊತೆ ಮಾತುಕತೆಯಿರಲಿದೆ. ಜೊತೆಗೆ ಚಿತ್ರನಿಧಿ – ದಾನಿಗಳ ಕ್ಯಾರಿಕೇಚರ್ ಬಿಡಿಸಿ ಚ್ಯಾರಿಟಿಗಾಗಿ ನಿಧಿ ಸಂಗ್ರಹ ನಡೆಯಲಿದೆ. ಈ ವೇಳೆ ಕಾರ್ಟೂನು ಪುಸ್ತಕಗಳನ್ನು ಮಾರಾಟ ಮಾಡಲಾಗುತ್ತದೆ.
10 ವರ್ಷಗಳ ಕಾರ್ಟೂನ್ ಹಬ್ಬದ ಜರ್ನಿ:
ಯುವ ಸಮುದಾಯದಲ್ಲಿ ನ್ಯೂಸ್ ಹಾಗೂ ಕಾರ್ಟೂನು ಬಗ್ಗೆಗಿನ ಆಸಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಖ್ಯಾತ ಕಾರ್ಟೂನಿಸ್ಟ್ ಸತೀಶ್ ಆಚಾರ್ಯ ಕಂಡುಕೊಂಡಿದ್ದು ಕಾರ್ಟೂನು ಹಬ್ಬದ ಪರಿಕಲ್ಪನೆ. ಕಳೆದ 2014ರಲ್ಲಿ ಆರಂಭಗೊಂಡ ಹಬ್ಬ ಸತತ ಹತ್ತು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. ಸತೀಶ್ ಆಚಾರ್ಯ ಅವರಿಗೆ ಮನೆಯವರು, ಸಮಾನ ಮನಸ್ಕ ಒಂದಷ್ಟು ಮಂದಿ ಕಾರ್ಟೂನಿಸ್ಟರು, ಸ್ನೇಹಿತರು ಸಾಥ್ ನೀಡುತ್ತಿದ್ದಾರೆ. ಪ್ರತಿವರ್ಷ ಕುಂದೇಶ್ವರ ದೀಪೋತ್ಸವ ಸಂದರ್ಭದ ಕಾರ್ಟೂನು ಹಬ್ಬ ಹಲವರ ಫೇವರೇಟ್ ಕಾರ್ಯಕ್ರಮ. ಕಾರ್ಟೂನು ಹಬ್ಬ ನೋಡಲು ವಿವಿದೆಡೆಯಿಂದ ಗಣ್ಯರು, ಜನರು ಆಗಮಿಸುತ್ತಾರೆ.
ಕಾರ್ಟೂನಿಷ್ಟರ ಕಾರ್ಯಕ್ರಮ..
ವ್ಯಂಗ್ಯಚಿತ್ರಗಳು ಹಾಸ್ಯದ ಮೂಲಕ ಹಲವು ಸಂದೇಶ ನೀಡುವ ಜೊತೆಗೆ ಪಾಠಗಳನ್ನು ಕಲಿಸುತ್ತದೆ. ರಾಜಕೀಯ ಪ್ರಜ್ಞೆಯನ್ನು ವಿಸ್ತರಿಸುತ್ತಿವೆ. ಅಲ್ಲದೆ ಜಾಗತಿಕ ಮಟ್ಟದಲ್ಲಿ ವ್ಯಂಗ್ಯ ಚಿತ್ರಕಲಾವಿದರನ್ನು ಬೆಸೆಯುವುವುದರ ಜೊತೆಗೆ ಮಕ್ಕಳಲ್ಲಿ, ಯುವ ಜನಾಂಗದಲ್ಲಿ ಕಾರ್ಟೂನ್ ಪ್ರಜ್ಞೆ ಹೆಚ್ಚಿಸುವ ಪ್ರಯತ್ನ ಸತೀಶ್ ಆಚಾರ್ಯ ಅವರದ್ದು. ವ್ಯಂಗ್ಯಚಿತ್ರಕಾರರಾದ ಪಂಜು ಗಂಗೊಳ್ಳಿ, ಕೇಶವ ಸಸಿಹಿತ್ಲು, ರಾಮಕೃಷ್ಣ ಹೇರ್ಳೆ, ಚಂದ್ರ ಗಂಗೊಳ್ಳಿ, ಚಂದ್ರಶೇಖರ ಶೆಟ್ಟಿ, ರಕ್ಷತ್ ಸಸಿಹಿತ್ಲು, ಅನನ್ಯಾ ಶೆಟ್ಟಿ, ಕಲೈಕಾರ್, ಸುಬ್ರಮಣ್ಯ ಅವರ ತರಹೇವಾರಿ ಕಾರ್ಟೂನುಗಳು ಇಲ್ಲಿ ಪ್ರದರ್ಶನವಾಗುತ್ತಿದೆ. ಸತೀಶ್ ಆಚಾರ್ಯರು ಮಾಡಿದ ಸೈಬರ್ ಕ್ರೈಮ್, ಸಾಮಾಜಿಕ ಜಾಲತಾಣಗಳ ಮೋಸದಿಂದ ದೂರಾಗಿ ಎಂಬ ಶಿರ್ಷಿಕೆಯ ಒಂದಷ್ಟು ಕಾರ್ಟೂನುಗಳು ಪ್ರಸ್ತುತ ಕಾಲಘಟ್ಟಕ್ಕೆ ಹತ್ತಿರವಾಗಿದೆ. ವಿದ್ಯಾರ್ಥಿಗಳು ರಚಿಸಿದ ವಿರಾಟ್ ಕೊಯ್ಲಿಯ ವಿವಿಧ ಕಾರ್ಟೂನ್ ಹೈಲೆಟ್ ಆಗಿದೆ.
ಸಾಹಿತ್ಯ ಹಬ್ಬಗಳಾಗುತ್ತವೆ. ಸಂಗೀತ, ನಾಟಕ ಮತ್ತಿತರ ಕಲಾಪ್ರಕಾರಗಳ ಹಬ್ಬಗಳೂ ನಡೆಯುವುದು ಹೊಸದಲ್ಲ. ಕಾರ್ಟೂನು ಹಬ್ಬ ಮಾಡಬಹುದೆಂಬುದನ್ನು ತೋರಿಸಿದವರು ಸತೀಶ್ ಆಚಾರ್ಯ. ಕಾರ್ಟೂನನ್ನು ನೋಡುವ ಬಗೆ, ಮೆಚ್ಚುವ ಗುಣಗಳು ಕೂಡಾ ಕಾರ್ಟೂನು ರಚಿಸುವ ಕಲೆಯಂತೆ ಕಲಿಯಬೇಕಾದ ಗುಣಗಳು. ಕಳೆದ ಹತ್ತು ವರ್ಷಗಳಲ್ಲಿ ಕಾರ್ಟೂನು ಹಬ್ಬ ಸಾಧಿಸಿದ್ದು ಬಹಳ. ದೇಶದ ಹೆಸರಾಂತ ಕಾರ್ಟೂನಿಸ್ಟರು ಇಲ್ಲಿ ಬಂದು ಮಾತಾಡಿ, ಅನುಭವಗಳನ್ನು ಹಂಚಿಕೊಂಡಿದ್ದಾರೆ, ಕಾರ್ಟೂನುಗಳನ್ನು ಸ್ಥಳದಲ್ಲೇ ರಚಿಸಿ ಸಾವಿರಾರು ಯುವಕ- ಯುವತಿಯರಿಗೆ ಕಾರ್ಟೂನು ರಚಿಸಲು ಸ್ಪೂರ್ತಿ ನೀಡಿದ್ದಾರೆ.
ವಿಡಂಬನೆ, ಹಾಸ್ಯ, ಮೊನಚುಗೆರೆಗಳ ಮೂಲಕ ಜಗತ್ತನ್ನು ಗ್ರಹಿಸುವ, ಜನಾಭಿಪ್ರಾಯವನ್ನು ರೂಪಿಸುವ, ಅಧಿಕಾರವನ್ನು ಪ್ರಶ್ನಿಸುವ ಕಾರ್ಟೂನುಗಳು ಪ್ರತಿದಿನವನ್ನೂ ಪ್ರಜಾಪ್ರಭುತ್ವದ ಹಬ್ಬವನ್ನಾಗಿಸುತ್ತವೆ. ಕಾರ್ಟೂನು ಹಬ್ಬ ಅದನ್ನೇ ಸಂಭ್ರಮಿಸುತ್ತಾ ಬಂದಿದೆ.
-ಉದಯ ಗಾಂವಕಾರ, ಟೀಚರ್ ಪತ್ರಿಕೆ ಸಂಪಾದಕರುಸಮಾಜದ ಆಗುಹೋಗುಗಳನ್ನು, ತಪ್ಪು-ಒಪ್ಪುಗಳನ್ನು ಚಿತ್ರಗಳ ಮೂಲಕ ವ್ಯಕ್ತಪಡಿಸುವ ವ್ಯಂಗ್ಯಚಿತ್ರಕಲೆ ವಿಶಿಷ್ಟ ಮಾಧ್ಯಮ. ಮಕ್ಕಳಲ್ಲಿ ಹಾಗೂ ಯುವಪೀಳಿಗೆಯಲ್ಲಿ ಕಲೆಯ ಬಗೆಗಿನ ಆಸಕ್ತಿಯನ್ನು ಹೆಚ್ಚಿಸುವುದು ಮತ್ತು ಚಿಂತನೆಯನ್ನು ಬೆಳೆಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಕಳೆದ 10-15 ವರ್ಷದಿಂದ ಯುವ ಕಾರ್ಟೂನಿಸ್ಟರು ಬರುತ್ತಿಲ್ಲ. ಅವರೆಲ್ಲರಿಗೆ ಸ್ಫೂರ್ತಿ ನೀಡುವ ನಿಟ್ಟಿನಲ್ಲಿ ಕಾರ್ಟೂನ್ ಹಬ್ಬ ಆಯೋಜಿಸಿ ಅದರಡಿ ವಿವಿಧ ಕಾರ್ಯಗಾರ ಹಮ್ಮಿಕೊಳ್ಳಲಾಗುತ್ತಿದೆ. ಇತ್ತೀಚೆಗೆ ನಿಧನರಾದ ಪತ್ರಕರ್ತ ಡಾ. ಶೇಖರ್ ಅಜೆಕಾರ್ ಅವರ ಕುಟುಂಬಕ್ಕೆ ಕ್ಯಾರಿಕೇಚರ್ ಮೂಲಕ ನಿಧಿ ಸಂಗ್ರಹ ಮಾಡಿಕೊಡುವುದು ಈ ಬಾರಿ ಕಾರ್ಟೂನು ಹಬ್ಬದ ಸದುದ್ಧೇಶ. ಒಂದಷ್ಟು ಸವಾಲುಗಳಿದ್ದರೂ ಕೂಡ ಇಚ್ಚಾಶಕ್ತಿಯೊಂದಿಗೆ ಕಳೆದ 10 ವರ್ಷದಿಂದ ಈ ಹಬ್ಬ ಮಾಡುತ್ತಿದ್ದೇವೆ.
– ಸತೀಶ್ ಆಚಾರ್ಯ (ವೃತ್ತಿಪರ ವ್ಯಂಗ್ಯ ಚಿತ್ರಕಾರ & ಕಾರ್ಟೂನು ಹಬ್ಬದ ಸಂಘಟಕರು)
Comments are closed.