ಕರಾವಳಿ

ಬೈಂದೂರಿನಲ್ಲಿ ಪ್ರವಾಸಿಗರನ್ನು ಸೆಳೆಯುತ್ತಿದೆ ‘ಸ್ಕೂ‌ಬಾ ಡೈವಿಂಗ್’; ಕಡಲೊಳಗಿನ ವೈವಿಧ್ಯಮಯ ಸಸ್ಯರಾಶಿ, ಜೀವ ಪ್ರಪಂಚ ಕಣ್ತುಂಬಿಕೊಳ್ಳಲು ವಿಫುಲ ಅವಕಾಶ

Pinterest LinkedIn Tumblr

(ವಿಶೇಷ ವರದಿ- ಯೋಗೀಶ್ ಕುಂಭಾಶಿ)

ಕುಂದಾಪುರ: ಕರ್ನಾಟ ಕರಾವಳಿ ಪ್ರದೇಶವು ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿದೆ. ಇಲ್ಲಿನ ಮೂರು ಜಿಲ್ಲೆಗಳ ವೈವಿಧ್ಯಮಯ ತಾಣಗಳು ದೇಶ-ವಿದೇಶಗಳಿಂದ ಜನರನ್ನು ತನ್ನತ್ತ ಕೈಬೀಸಿ ಕರೆಯುತ್ತದೆ. ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಕುಂದಾಪುರ-ಬೈಂದೂರು ನಡುವೆ ನಾಯ್ಕನಕಲ್ಲು ಎಂಬಲ್ಲಿ ಸ್ಕೂಬಾ ಡೈವಿಂಗ್ ಆರಂಭವಾಗಿದ್ದು ಜಲಸಾಹಸಿಗರಿಂದ ಉತ್ತಮ ಸ್ಪಂದನೆ ಸಿಗುತ್ತಿದೆ.

ಕರಾವಳಿ ಕರ್ನಾಟಕದಲ್ಲಿ ಮೂರನೇ ತಾಣ..!
ಕರಾವಳಿ ಕರ್ನಾಟಕ ವ್ಯಾಪ್ತಿಯಲ್ಲಿ ಮೊದಲಿಗೆ ನೇತ್ರಾಣಿಯಲ್ಲಿ ಸ್ಕೂಬಾ ಡೈವಿಂಗ್ ಇತ್ತು. ತದನಂತರ ಕಾಪುವಿನಲ್ಲಿ ಆರಂಭವಾಗಿದ್ದು ಇದೀಗಾ ಕರಾವಳಿಯ ಮೂರನೇ ಸ್ಕೂಬಾ ಡೈವಿಂಗ್ ತಾಣವಾಗಿ ಕುಂದಾಪುರ- ಬೈಂದೂರು ನಡುವಿನ ನಾಯ್ಕನಕಲ್ಲುವಿನಲ್ಲಿ ಆರಂಭವಾಗುವ ಮೂಲಕ ಉಡುಪಿ ಜಿಲ್ಲೆಯ ಸ್ಕೂಬಾ ಡೈವಿಂಗ್ ತಾಣಕ್ಕೆ ಮತ್ತೊಂದು ಪ್ರದೇಶ ಸೇರ್ಪಡೆಗೊಂಡಿದೆ. ಜಿಲ್ಲೆಯ ಪ್ರವಾಸೋದ್ಯಮ ಉತ್ತೇಜನಕ್ಕೆ ಇದೊಂದು ಹೊಸಮೈಲಿಗಲ್ಲು. ಸ್ಕೂಬಾ ಡೈವಿಂಗ್ ನಡೆಸಲು ಮೆರಿಡಿಯನ್ ಅಡ್ವೆಂಚರ್ ಕುಂದಾಪುರ ಸಂಸ್ಥೆ ಗುತ್ತಿಗೆ ಪಡೆದಿದೆ.

ಕುಂದಾಪುರ ಕೋಡಿಯಿಂದ ಪಯಣ ಆರಂಭ:
ಕುಂದಾಪುರದ ಕೋಡಿ ಬೀಚಿನಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ ಕುಂದಾಪುರ ಹಾಗೂ ಬೈಂದೂರು ನಡುವಿನ ಸೋಮೇಶ್ವರ ಸಮೀಪದ ನಾಯ್ಕನಕಲ್ಲು ಎಂಬಲ್ಲಿ ಸ್ಕೂಬಾ ಡೈವಿಂಗ್ ಆರಂಭವಾಗಿದೆ. ಕೋಡಿ ಮಾತ್ರವಲ್ಲದೆ ಸೋಮೇಶ್ವರ ಬೀಚ್‌ನಲ್ಲಿಯೂ ಮುಂದಿನ ದಿನಗಳಲ್ಲಿ ಪಿಕಪ್ ಪಾಯಿಂಟ್ ಮಾಡಲಾಗುತ್ತದೆ. ಈ ಸ್ಥಳಗಳಿಂದ ಸ್ಕೂಬಾ ಡೈವಿಂಗ್ ಮಾಡಲು ಆಸಕ್ತಿಯಿರುವವರನ್ನು ಕರೆದುಕೊಂಡು ಬೋಟ್ ಮೂಲಕ ನಾಯ್ಕನಕಲ್ಲಿಗೆ ಕರೆದುಕೊಂಡು ಹೋಗಲಾಗುತ್ತದೆ. ಕೋಡಿ ಸೀವಾಕ್ ಬಳಿ ಮುಖ್ಯ ಪಿಕಪ್ ಪಾಯಿಂಟ್ ಇದ್ದು, ಅಲ್ಲಿಂದ ಬೆಳಗ್ಗೆ 8 ಗಂಟೆಯಿಂದ ಕರೆದುಕೊಂಡು ಹೋಗಲಾಗುತ್ತದೆ. ಅಲ್ಲಿಂದ ಸುಮಾರು 20ಕಿ.ಮೀ. ದೂರ ಅಂದರೆ ಒಂದೂವರೆ ತಾಸು ಸಮುದ್ರದಲ್ಲಿ ಬೋಟ್ ಸಂಚಾರವಿದೆ.

ಸ್ಕೂಬಾ ಡೈವಿಂಗ್ ವಿಶೇಷತೆಗಳು:
ಇತ್ತೀಚೆಗೆ ಆರಂಭಗೊಂಡ ಸ್ಕೂಬಾ ಡೈವಿಂಗ್ ಹೊಸ ಜಲ ಸಾಹಸ ಕ್ರೀಡೆ ಮೂಲಕ ಈಜು ಗೊತ್ತಿಲ್ಲದವರು ಸಹ ಕಡಲ ಒಡಲಿನಲ್ಲಿರುವ ವಿವಿಧ ರೀತಿಯ ಕಲ್ಲುಗಳು, ವೈವಿಧ್ಯಮಯ ಸಸ್ಯ, ಜಲಚರಗಳು, ಜೀವಿ ಪ್ರಪಂಚದ ವೈಶಿಷ್ಟ್ಯವನ್ನು ಕಣ್ತುಂಬಿಕೊಳ್ಳಲು ಸಾಧ್ಯವಿದೆ. 10 ವರ್ಷ ಮೇಲ್ಪಟ್ಟ 45 ವರ್ಷದೊಳಗಿನವರು ಸ್ಕೂಬಾ ಡೈವಿಂಗ್ ನಡೆಸಬಹುದಾಗಿದ್ದು, ಆರು ಮಂದಿ ನುರಿತ ತರಬೇತುದಾರರು ಲಭ್ಯವಿದ್ದಾರೆ. ಡೈವಿಂಗ್ ಮಾಡಲು ಅಗತ್ಯವಿರುವ ಜೀವರಕ್ಷಕ, ಆಮ್ಲಜನಕದ ಸಿಲಿಂಡರ್, ಮೀನು ಪಾದ ಸಹಿತವಾಗಿ ಎಲ್ಲ ಉಪಕರಣಗಳು ಲಭ್ಯವಿವೆ.‌ 45 ವರ್ಷ ಮೇಲ್ಪಟ್ಟ ಆಸಕ್ತಿಯುಳ್ಳ ಆರೋಗ್ಯವಂತ ನಾಗರಿಕರಿಗೂ ಸ್ಕೂಬಾ ಡೈವ್ ಮಾಡಲು ಅವಕಾಶವಿದೆ.

ಡಾಲ್ಫಿನ್, ವೈವಿಧ್ಯಮಯ ಜಲಚರಗಳ ದರ್ಶನ:
ಕೋಡಿಯಿಂದ ಬೋಟ್ ಮೂಲಕ ತೆರಳುವ ಒಂದೂವರೆ ಗಂಟೆ ಅವಧಿಯಲ್ಲಿ ಅಲ್ಲಲ್ಲಿ ಡಾಲ್ಫಿನ್ ಕಾಣ ಸಿಗುತ್ತವೆ. ಪ್ರಸಿದ್ಧ ಮರವಂತೆ ಬೀಚ್ ನೋಡುವ ಅವಕಾಶ ಸಿಗಲಿದೆ. ನಾಯ್ಕನಕಲ್ಲುವಿನಲ್ಲಿ ಬೃಹತ್ ಬಂಡೆಯಿದ್ದು, ಅಲ್ಲಿಂದ ಸ್ಕೂಬಾ ಡೈವಿಂಗ್ ನಡೆಯಲಿದೆ. ಕಡಲ ಒಡಲಲ್ಲಿರುವ ಬ್ಲೂ ಫಿಶ್, ಗ್ರೀನ್ ಫಿಶ್, ಸ್ಟ್ರೈಪ್ ಫಿಶ್, ಪ್ಯಾರೆಟ್ ಫಿಶ್, ಬರಾಕುಡಾ, ಬಟರ್‌ಫ್ಲೈ ಫಿಶ್, ಫ್ರಾಗ್ ಫಿಶ್, ಟ್ರಿಗರ್ ಫಿಶ್, ಕಟಲ್ ಫಿಶ್, ಲಯನ್ ಫಿಶ್, ಸ್ನಾಪರ್‍ಸ್, ಬ್ಯಾನರ್ ಫಿಶ್, ಯೆಲ್ಲೊ ಟೈಲ್ ಸ್ನಾಪರ್‍ಸ್ ಮೊದಲಾದ ಅಪರೂಪದ ವೈವಿಧ್ಯಮಯ ಕಡಲ ಜೀವಿಗಳನ್ನು ಹಾಗೂ ಆಕರ್ಷಕ ಕಲ್ಲು, ಸಸ್ಯಗಳನ್ನು ನೋಡಬಹುದು.

ಕೈಗೆಟುಕುವ ದರದಲ್ಲಿ ಉತ್ತಮ ಸೇವೆ
ಡಿಸ್ಕವರ್ ಸ್ಕೂಬಾ ಡೈವಿಂಗ್ ಹಾಗೂ ಫನ್ ಡೈವಿಂಗ್ ಈ ಎರಡು ವಿದಗಳಿದೆ. ಈಜು ಬಾರದ ಸಾಮಾನ್ಯರು ಕೂಡ ಡಿಸ್ಕವರ್ ಸ್ಕೂಬಾ ಡೈವಿಂಗ್ ಮಾಡಬಹುದಾಗಿದ್ದು ಇವರಿಗೆ 8-12 ಮೀಟರ್ ಆಳಕ್ಕೆ ಕರೆದೊಯ್ಯಲಾಗುತ್ತದೆ. ಪ್ರವಾಸಿಗರಿಗೆ 25 ರಿಂದ 30 ನಿಮಿಷಗಳ ಕಾಲ ಸ್ಕೂಬಾ ಡೈವಿಂಗ್ ಮಾಡಲು ಅವಕಾಶವಿದ್ದು ನುರಿತ ತರಬೇತುದಾರರು ಇವರೊಂದಿಗೆ ಇರಲಿದ್ದಾರೆ. ಪ್ರಸ್ತುತ ಒಬ್ಬರಿಗೆ 3,499 ರೂ. ನಿಗದಿಪಡಿಸಲಾಗಿದೆ. ಬೇರೆಬೇರೆ ಸಮಯ ಈ ದರದಲ್ಲಿ ಕೊಂಚ ಏರಿಳಿತ ಇರಲಿದೆ. ಬೋಟ್ ರೈಡಿಂಗ್ ಜೊತೆಗೆ ಸ್ನೋರ್ಕ್ಲಿಂಗ್ ಇರಲಿದೆ. ಉಚಿತ ಸ್ನಾಕ್ಸ್, ಅಂಡರ್ ವಾಟರ್ ಫೋಟೋಗ್ರಫಿ ಉಚಿತವಾಗಿರಲಿದೆ. ಹೆಚ್ಚಿನ ಮಾಹಿತಿಗಾಗಿ: 8050275566.

ಬೇರೆಡೆ ಸ್ಕೂಬಾ ಡೈವಿಂಗ್ ಹೋಗಿ ಅನುಭವ ಪಡೆದಿದ್ದು ಕುಂದಾಪುರದಲ್ಲಿ ಈ ಸೇವೆ ಸಿಗಬೇಕೆಂಬ ನಿಟ್ಟಿನಲ್ಲಿ 6 ತಿಂಗಳ ಕಾಲ ಈ ಬಗ್ಗೆ ಅಧ್ಯಯನ ನಡೆಸಿ ಸ್ಥಳ ಗುರುತಿಸಿ ಪ್ರವಾಸೋಧ್ಯಮ, ವಿವಿಧ ಇಲಾಖೆಗಳಿಂದ ಅನುಮತಿ ಪಡೆದು ಆರಂಭಿಸಲಾಗಿದೆ. ಒಂದು ತಿಂಗಳಲ್ಲಿ ಉಡುಪಿ, ಬೆಂಗಳೂರು, ಮುಂಬೈ, ಕೇರಳ, ಗೋವಾ, ಬೈಂದೂರು, ಕುಂದಾಪುರದ 250ಕ್ಕೂ ಅಧಿಕ ಪ್ರವಾಸಿಗರು ಸ್ಕೂಬಾ ಡೈವಿಂಗ್ ಮಾಡಿದ್ದಾರೆ. ಡಾಲ್ಫಿನ್ ಮೀನುಗಳನ್ನು ಕಣ್ತುಂಬಿಕೊಳ್ಳಲು ಕೋಡಿ-ನಾಯ್ಕನಕಲ್ಲು ಮಧ್ಯೆ ಬೋಟ್ ಯಾನದಲ್ಲಿ ಸಾಧ್ಯ. ಸಾಗರದಾಳದಲ್ಲಿ ಅಪರೂಪದ ಹವಳಗಳು ಬೆಳೆಯುವ ಹಂತದಲ್ಲಿದ್ದು ಅದನ್ನು ರಕ್ಷಿಸಿದರೆ ಮುಂದಿನ ದಿನ ಕೋರಲ್ಸ್ ಗಾರ್ಡನ್ ಆಗುತ್ತದೆ.
– ವಿಶಾಖ ಹೆಬ್ಬಾರ್ ಕೊಲ್ಲೂರು, ನಿಖಿಲ್ (ಮೆರಿಡಿಯನ್ ಅಡ್ವೆಂಚರ್‌ ಕುಂದಾಪುರ ಸಂಸ್ಥೆಯ ಆಡಳಿತ ಪಾಲುದಾರರು)

ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಸಾಹಸಪ್ರಿಯರಿಗೆ, ಪ್ರವಾಸಿಗರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಬೈಂದೂರು ಸಮೀಪದ ನಾಯ್ಕನಕಲ್ಲು ಎಂಬಲ್ಲಿ ಸ್ಕೂಬಾ ಡೈವಿಂಗ್‌ ಆರಂಭವಾಗಿದೆ. ಜಿಲ್ಲಾಧಿಕಾರಿ ನೇತೃತ್ವದಲ್ಲಿ ಎಲ್ಲಾ ರೀತಿಯ ಪ್ರಾಯೋಗಿಕ ಪರೀಕ್ಷೆ ನಡೆಸಿದ್ದು ಅನುಮತಿ ನೀಡಲಾಗಿದೆ. ಸ್ಕೂಬಾ ಡೈವಿಂಗ್ ಗೆ ಪ್ರವಾಸಿಗರ ಪ್ರತಿಕ್ರಿಯೆ ಉತ್ತಮವಾಗಿದೆ.
– ಕುಮಾರ ಸಿ.ಯು., ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶರು, ಉಡುಪಿ

Comments are closed.