ಕುಂದಾಪುರ: ಉತ್ತಮ ಶಿಕ್ಷಣವನ್ನು ಪಡೆದು ನಮ್ಮ ಆಚಾರ ವಿಚಾರಗಳನ್ನು ಉಳಿಸಿಕೊಂಡಾಗ ನಾವು ಕತ್ತಲೆಯಿಂದ ಅಭಿವೃದ್ಧಿಯ ಕಡೆಗೆ ಸಾಗಲು ಸಾಧ್ಯವಿದೆ. ತುಳಿತಕ್ಕೆ ಒಳಗಾದ ಸಮುದಾಯ ಸಮಾಜದ ಮುಖ್ಯವಾಹಿನಿಗೆ ಬರುವ ಅನಿವಾರ್ಯತೆಯಿದೆ. ಸರಕಾರ, ಜನಪ್ರತಿನಿಧಿಗಳು ಕೊರಗ ಸಮುದಾಯದವರ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಉಡುಪಿ ಮಾಜಿ ಶಾಸಕ ಕೆ. ರಘುಪತಿ ಭಟ್ ಹೇಳಿದರು.
ಮಕ್ಕಳ ಮನೆ ಕುಂಭಾಶಿ, ಕೊರಗ ಸಂಘಟನೆಗಳ ಸಹಯೋಗದೊಂದಿಗೆ ನ.9ರಂದು ಇಲ್ಲಿನ ಮಕ್ಕಳ ಮನೆಯಲ್ಲಿ ನಡೆದ ‘ಬೊಲ್ಪು-2024 ಕತ್ತಲೆಯಿಂದ ಅಭಿವೃದ್ಧಿಯ ಕಡೆಗೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕೆಲವು ವರ್ಷಗಳ ಹಿಂದೆ ಕೊರಗ ಸಮುದಾಯದವರು ಕೆಟ್ಟ ಪರಿಸ್ಥಿತಿಯನ್ನು ಅನುಭವಿಸಿದ್ದು ಇದೀಗ ಸಮುದಾಯ ಮತ್ತು ಮುಖಂಡರು ಜಾಗೃತರಾಗಿ ಸಮುದಾಯದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದರೆ ಖಂಡಿತವಾಗಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಮಕ್ಕಳ ಮನೆ ಅನ್ನುವ ಶೀರ್ಷಿಕೆಯಲ್ಲಿ ಕೆಲಸ ಮಾಡುತ್ತಿರುವ ಈ ವ್ಯವಸ್ಥೆಯು ಮುಂದಿನ ಪೀಳಿಗೆಯ ಅಭಿವೃದ್ಧಿಗೆ ಪೂರಕವಾಗಿದೆ. ಹಿಂದುಳಿದ ಸಮುದಾಯಕ್ಕೆ ಶಿಕ್ಷಣವೇ ಒಂದು ಆಸ್ತಿ ಶಿಕ್ಷಣದ ಜೊತೆಗೇ ನಮ್ಮ ಆಚಾರ ವಿಚಾರ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಧನಾತ್ಮಕವಾದ ಚಿಂತನೆಯನ್ನು ಮೈಗೂಡಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ ಎಂದರು.
ಈ ಸಂದರ್ಭದಲ್ಲಿ ತಮ್ಮ ಅಧಿಕಾರದ ಸಮಯದಲ್ಲಿ ಕೊರಗ ಸಮುದಾಯದವರಿಗೆ ಉತ್ತಮವಾಗಿ ಸ್ಪಂದಿಸಿದ ಉಡುಪಿ ನಿವೃತ್ತ ಪೌರಾಯುಕ್ತ ರಾಯಪ್ಪ ಅವರನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ವ್ಯವಸಾಯ ಸೇವಾ ಸಹಕಾರಿ ಸಂಘ ಪಡುಕೋಣೆಯ ಅಧ್ಯಕ್ಷ ರಾಜು ಪಡುಕೋಣೆ, ಕುಂಭಾಶಿ ಗ್ರಾ.ಪಂ ಅಧ್ಯಕ್ಷ ಆನಂದ ಪೂಜಾರಿ, ಕೊರಗ ಮುಖಂಡ ಮಂಜುನಾಥ್, ನೃತ್ಯದ ತೀರ್ಪುಗಾರರಾಗಿದ್ದ ಶ್ರೀದೇವಿ, ಸುಚಿತ್ರಾ, ಚಂದ್ರಶೇಖರ್ ಬೀಜಾಡಿ, ಕೊರಗ ಮುಖಂಡರಾದ ಗಣೇಶ್ ಬಾರ್ಕೂರು, ಗಣೇಶ್ ಕುಂದಾಪುರ, ಲಕ್ಷ್ಮಣ್ ಬೈಂದೂರು, ಶೇಖರ್ ಮರವಂತೆ ಉಪಸ್ಥಿತರಿದ್ದರು.
ಅಶ್ವಿನಿ ಬಾರ್ಕೂರು ಕಾರ್ಯಕ್ರಮ ನಿರೂಪಿಸಿ, ಗಣೇಶ್ ಬಾರ್ಕೂರು ಸ್ವಾಗತಿಸಿ, ಗಣೇಶ್ ಕುಂದಾಪುರ ಪ್ರಾಸ್ತಾವಿಕ ಮಾತನಾಡಿ, ನಿರಂಜಿನಿ ಕೋಟ ವಂದಿಸಿದರು.
ಸಂಭ್ರಮದ ಆಚರಣೆ
ಕೊರಗ ಸಮುದಾಯದ ಸಾಂಸ್ಕೃತಿಕ ಪರಿಕರಗಳಾದ ಚೆಂಡೆ, ಡೋಲು, ಕತ್ತಿ, ಬಿದಿರಿನಿಂದ ರಚಿಸಿದ ಗೆರಸಿ, ಸಿಬ್ಲು, ಹೆಡಿಗೆ, ಬುಟ್ಟಿ ಸೇರಿದಂತೆ ವಿವಿಧ ವಸ್ತುಗಳಿಗೆ ಸಂಪ್ರದಾಯದಂತೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸಂಭ್ರಮದ ದೀಪಾವಳಿಯನ್ನು ಆಚರಿಸಲಾಯಿತು. ಮಕ್ಕಳ ಮನೆಯ ದೀಪಾವಳಿ ಕಾರ್ಯಕ್ರಮದಲ್ಲಿ ಆಯ್ದ 6 ತಂಡಗಳಿಂದ ನೃತ್ಯ ಸ್ಪರ್ಧೆಯನ್ನು ನಡೆಸಲಾಯಿತು. ಪ್ರಥಮ ಕೋಟ ತಂಡ, ದ್ವಿತೀಯ ಹೇರೂರು, ತೃತೀಯ ಸಾಲಿಗ್ರಾಮ ತಂಡ ಬಹುಮಾನಗಳನ್ನು ಪಡೆದಿತು. ದೊಂದಿ ಬೆಳಕಿನಲ್ಲಿ ಭೋಜನ ವ್ಯವಸ್ಥೆಯನ್ನು ಮಾಡಲಾಗಿತ್ತು.
Comments are closed.