ಕರಾವಳಿ

ಬೈಂದೂರು ನಾಡ ಕೋಣ್ಕಿ ದರ್ಲೆಗುಡ್ಡೆ ಕೊರಗ ಕಾಲನಿಯಲ್ಲಿ ನೀರಿಗೆ ತತ್ವಾರ! | ಸಾರ್ವಜನಿಕ ಕುಡಿಯುವ ನೀರಿನ ಬಾವಿಗೆ ಅಳವಡಿಸಿದ ಪಂಪ್ ಸೆಟ್ ನಾದುರಸ್ಥಿ!

Pinterest LinkedIn Tumblr

(ವಿಶೇಷ ವರದಿ: ಯೋಗೀಶ್ ಕುಂಭಾಸಿ)

ಕುಂದಾಪುರ: ಕೊರಗ ಸಮುದಾಯಕ್ಕೆ ಸೌಕರ್ಯಗಳನ್ನು ಕಲ್ಪಿಸುತ್ತೇವೆ. ಮೂಲನಿವಾಸಿಗಳ ಉತ್ತಮ ಜೀವನಕ್ಕೆ ಎಲ್ಲಾ ವ್ಯವಸ್ಥೆ ಮಾಡುತ್ತೇವೆ ಎಂಬುದು ಕೇವಲ ಕಡತ ಹಾಗೂ ಭಾಷಣಕ್ಕೆ ಮಾತ್ರ ಸೀಮಿತವಾಗಿದೆ ಎಂಬುದಕ್ಕೆ ಇಲ್ಲೊಂದು ಜ್ವಲಂತ ಉದಾಹರಣೆಯಿದೆ. ಬೈಂದೂರು ವಿಧಾನಸಭಾ ಕ್ಷೇತ್ರದ ನಾಡ ಗ್ರಾಮಪಂಚಾಯತ್ ವ್ಯಾಪ್ತಿಯ ಕೋಣ್ಕಿ ದರ್ಲೆಗುಡ್ಡೆ ಕೊರಗರ ಕಾಲನಿಯಲ್ಲಿರುವ ಬಾವಿಯ ಪಂಪ್ ಸೆಟ್ ಕೆಟ್ಟು ನಾಲ್ಕೈದು ತಿಂಗಳಾದರೂ ದುರಸ್ಥಿ ಮಾಡಿಲ್ಲ.

ಇಲ್ಲಿನ ಕೊರಗ ಕಾಲನಿಯಲ್ಲಿ ಸುಮಾರು 28 ವರ್ಷಗಳಿಂದ 5 ಕೊರಗ ಕುಟುಂಬಗಳು ವಾಸಿಸುತ್ತಿದೆ. ಹಿರಿಯ ನಾಗರಿಕರು ಐದಾರು ಶಾಲೆಗೆ ಹೋಗುವ ವಿದ್ಯಾರ್ಥಿಗಳ ಸಹಿತ ಹೊನ್ನಮ್ಮ, ಕುಸುಮಾ, ಬೇಬಿ, ಮಹೇಶ ಹಾಗೂ‌ ಮಂಜು ಎನ್ನುವರ 5 ಕುಟುಂಬ ಪ್ರತ್ಯೇಕ 5 ಮನೆಗಳಲ್ಲಿ ವಾಸವಿದ್ದು 25-30 ನಿವಾಸಿಗಳಿದ್ದಾರೆ. ಇಲ್ಲಿನ ನಿವಾಸಿಗಳ ಅನುಕೂಲಕ್ಕೆ ಕಳೆದ 17 ವರ್ಷಗಳ ಹಿಂದೆ ಸಾರ್ವಜನಿಕ ಕುಡಿಯುವ ನೀರಿನ ಬಾವಿಯನ್ನು ಐಟಿಡಿಪಿ ಮೂಲಕ ರಚಿಸಿ ಪ್ರತ್ಯೇಕ ಮೂರು ನೀರು ಟ್ಯಾಂಕ್ ಮಾಡಲಾಗಿತ್ತು. ಒಂದಷ್ಟು ವರ್ಷ ಅದೇ ನೀರನ್ನು ಕುಡಿಯುತ್ತಿದ್ದು ನಂತರದ ದಿನಗಳಲ್ಲಿ ಬಾವಿ ನಿರ್ವಹಣೆ ಕೊರತೆಯಿಂದಲೋ ನೀರು ಕುಡಿಯಲು ಯೋಗ್ಯವಲ್ಲದ ಕಾರಣ ಕೊರಗ ನಿವಾಸಿಗಳು ತಮ್ಮದೇ ಹಣದಲ್ಲಿ ಇನ್ನೊಂದು ಬಾವಿ ರಚಿಸಿಕೊಂಡು ಕುಡಿಯುವ ನೀರಿಗಾಗಿ ಉಪಯೋಗಿಸುತ್ತಿದ್ದರು. ಒಂದೊಂದು ಮನೆಯಿಂದ ಕುಡಿಯುವ ನೀರಿಗಾಗಿ ಬಹಳಷ್ಟು ದೂರ (ಕೆಲವು ಮನೆ 500 ಮೀ.ಗೂ ಅಧಿಕ) ಸಾಗಿ ಈ ಬಾವಿಯಿಂದ ನೀರು ಸೇದಿ ನಡೆದು ಮನೆಗೆ ಸಾಗಬೇಕು.

ಸರಕಾರಿ ಬಾವಿಯ ನೀರು ತೋಟ,ಗಿಡ-ಮರಗಳು ಹಾಗೂ ಗೃಹದ ನಿತ್ಯ ಬಳಕೆಗೆ ಅನುಕೂಲವಾಗುತ್ತಿತ್ತು. ಈ ಬಾವಿಯಿಂದ ಪಂಪ್ ಸೆಟ್ ಮುಖಾಂತರ ನೀರು ಟ್ಯಾಂಕ್ ಗೆ ಬರುತ್ತಿದ್ದು ನೀರನ್ನು ಮನೆಯವರು ಬಳಸುತ್ತಿದ್ದರು. ಆದರೆ ಪಂಪ್ ಸೆಟ್ ಕೆಟ್ಟು ನಾಲ್ಕೈದು ತಿಂಗಳಾಗಿದ್ದು ಅದನ್ನು ಸಂಬಂದಪಟ್ಟವರು ದುರಸ್ಥಿ ಮಾಡಿಸದ ಕಾರಣ ನೀರು ಪೂರೈಕೆ ವ್ಯತ್ಯಯವಾಗಿದೆ. ಇನ್ನು ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ ಅಳವಡಿಸಿದ ನಳ್ಳಿಯಲ್ಲಿ ವಾರಕ್ಕೆರಡು ಬಾರಿ ನೀರು ಬಂದರೂ ಕೂಡ ಕುಡಿಯಲು ಯೋಗ್ಯವಿಲ್ಲ. ಪ್ರೆಬವರಿ ಬಳಿಕವಂತೂ ಉಪ್ಪು ನೀರು ಬರುತ್ತದೆ ಎಂಬ ದೂರು ಕೇಳಿಬಂದಿದೆ.

ಶಿಥಿಲಗೊಂಡಿದೆ ಸೂರು!
ದರ್ಲೆಗುಡ್ಡೆ ಕೊರಗ ಕಾಲನಿಯ ನಿವಾಸಿ ಹೊನ್ನಮ್ಮ ಎನ್ನುವರ ಇಬ್ಬರು ಹೆಣ್ಣುಮಕ್ಕಳ ಪೈಕಿ ಮೊದಲ ಮಗಳು ಎಮ್.ಎಸ್.ಡಬ್ಲ್ಯೂ ಮುಗಿಸಿದ್ದು ಇನ್ನೊಬ್ಬ ಪುತ್ರಿ ಬಿಕಾಂ ಓದುತ್ತಿದ್ದಾರೆ. ಮನೆಯಲ್ಲಿ ಪತಿ ಸಹಿತ ಆರು ಮಂದಿ ವಾಸವಿದ್ದು ಇಟ್ಟಿಗೆ ಗೋಡೆಯಲ್ಲಿ ಕಟ್ಟಿದ ಮನೆ ಶಿಥೀಲಗೊಂಡಿದೆ. ಕೂಲಿ ಹಾಗೂ ಬುಟ್ಟಿ ತಯಾರಿಕೆ ಕಸುಬು ಮಾಡುವ ಹಿರಿಯರು ಶಿಥಿಲಗೊಂಡ ಮನೆ ರಿಪೇರಿಗೆ ಈಗಾಗಾಲೇ ಬಹಳಷ್ಟು ಹಣ ವ್ಯಯಿಸಿದ್ದಾರೆ. ಮನೆ ಕಟ್ಟಲು ಹಾಕಿದ ತಳಪಾಯ ಗೋಡೆ ಹಂತಕ್ಕೆ ಬಂದು ಅರ್ಧಕ್ಕೆ ಕೆಲಸ ನಿಂತು ಹಲವಾರು ವರ್ಷವಾಗಿದೆ.

ಕಳೆದ 28 ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದೇವೆ. ಕುಡಿಯುವ ನೀರು ಸಹಿತ ನಿತ್ಯ ಬಳಕೆ ನೀರಿಗೆ ಬಹಳಷ್ಟು ಸಮಸ್ಯೆಯಿದೆ. ಒಂದು ಬಾವಿ ಐದು ಮನೆಗೆ ಕುಡಿಯುವ ನೀರಿಗೆ ಆಸರೆಯಾಗಿದೆ. ಬೇಸಿಗೆಯಲ್ಲಿ ನೀರು ಕಡಿಮೆಯಾಗುತ್ತದೆ. ನಳ್ಳಿಯಲ್ಲಿ ಬರುವ ನೀರು ಫೆಬ್ರವರಿ ಬಳಿಕ ಉಪ್ಪಾಗಿದ್ದು ಕುಡಿಯಲು ಆಗಲ್ಲ.
-ಹೊನ್ನಮ್ಮ (ಸ್ಥಳೀಯ ಕೊರಗ ನಿವಾಸಿ)

ಕೋಣ್ಕಿ ದರ್ಲೆಗುಡ್ಡೆ ಕೊರಗ ಕಾಲನಿಯಲ್ಲಿ ಸಾರ್ವಜನಿಕ ಕುಡಿಯುವ ನೀರಿನ ಬಾವಿ ರಚಿಸಿ ಐಟಿಡಿಪಿ ಇಲಾಖೆಯ 5 ಲಕ್ಷ ರೂ. ಅನುದಾನದಲ್ಲಿ ಟ್ಯಾಂಕ್‌ ನಿರ್ಮಾಣ ಹಾಗೂ ಮೋಟಾರು ಪಂಪ್ ಅಳವಡಿಕೆ ನಡೆದಿತ್ತು. ಸದ್ಯ ಬಾವಿ ನಿರ್ವಹಣೆಯಿಲ್ಲ. ಅಳವಡಿಸಿದ ಪಂಪು ಹಾಳಾಗಿದೆ. ದುರಸ್ಥಿ ಮಾಡಲು ಸಂಬಂದಪಟ್ಟವರು ಇಚ್ಚಾಶಕ್ತಿ ತೋರುತ್ತಿಲ್ಲ. ಕೂಡಲೇ ಅದನ್ನು ದುರಸ್ಥಿಗೊಳಿಸಬೇಕು. ಹಾಗೆಯೇ 5 ಕೊರಗ ಮನೆಗಳಿರುವ ಈ ಕಾಲನಿಗೆ ದಾರಿ ದೀಪ ಸೌಕರ್ಯ ಕಲ್ಪಿಸಬೇಕು. ಈ ಬಗ್ಗೆ ಎಸ್ಸಿ-ಎಸ್ಟಿ ವಿಶೇಷ ಗ್ರಾಮಸಭೆಯಲ್ಲಿ ಮನವಿ ನೀಡಿದ್ದೇವೆ.
– ಸುಶೀಲಾ ನಾಡ (ಅಧ್ಯಕ್ಷರು, ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ (ರಿ.) ಕರ್ನಾಟಕ ಮತ್ತು ಕೇರಳ)

Comments are closed.