(ವಿಶೇಷ ವರದಿ: ಯೋಗೀಶ್ ಕುಂಭಾಸಿ)
ಕುಂದಾಪುರ: ಕುಂದಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಾರ್ದಳ್ಳಿ-ಮಂಡಳ್ಳಿ ಗ್ರಾ.ಪಂ. ಜನ್ನಾಡಿ ಮತ್ತು ಮಣಿಗೇರೆ ಎಂಬಲ್ಲಿ ಮೂಲನಿವಾಸಿಗಳಾದ ಕೊರಗ ಸಮುದಾಯದವು ಕಳೆದ ಕೆಲವು ವರ್ಷಗಳಿಂದ ಸೂರಿಲ್ಲದೆ ಸೊರಗಿತ್ತು. ತಮಗೊಂದು ಮನೆ ಬೇಕು ಎಂಬ ಕಾಲನಿ ಮಂದಿಯ ಕನಸು ಇದೀಗಾ ನನಸಾಗಿದ್ದು 14 ಸುಸಜ್ಜಿತ ಮನೆಗಳು ನಿರ್ಮಾಣಗೊಂಡು ಲೋಕಾರ್ಪಣೆಗೊಂಡಿದೆ.
ಟ್ರಸ್ಟ್ ಮೂಲಕ 14 ಮನೆಗಳ ನಿರ್ಮಾಣ:
ಹಲವಾರು ವರ್ಷಗಳಿಂದ ಮನೆಯಿಲ್ಲದೆ ಬದುಕುತ್ತಿದ್ದ ಕೊರಗ ನಿವಾಸಿಗಳ ಬದುಕು ಅತಂತ್ರವಾಗಿತ್ತು. ಜೋಪಡಿ ಆಸರೆಯಲ್ಲಿದ್ದ ನಿವಾಸಿಗಳಿಗೆ ಸರಕಾರದಿಂದ ಮನೆ ಮಂಜೂರಾದರೂ ಕೂಡ ಬಡತನದ ಕಾರಣದಿಂದ ಮನೆ ಕಟ್ಟಲಾಗಿರಲಿಲ್ಲ. ಇವರ ದುಸ್ಥಿತಿ ಬಗ್ಗೆ ಗ್ರಾಪಂ ಸದಸ್ಯ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಅವರು ಉದ್ಯಮಿ ಎಚ್.ಎಸ್. ಶೆಟ್ಟಿಯವರ ಗಮನಕ್ಕೆ ತಂದಿದ್ದು ಹಾಲಾಡಿ ಕುದ್ರುಮನೆ ಶ್ರೀನಿವಾಸ ಶೆಟ್ಟಿಯವರು ತಮ್ಮ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ಮೂಲಕ ಮನೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದ್ದರು. ತಾವೇ ಖುದ್ದು ಸ್ಥಳ ಪರಿಶೀಲನೆ ನಡೆಸಿ ಕಷ್ಟವನ್ನು ಅರಿತು ಮಾರ್ಚ್ ತಿಂಗಳಿನಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರಿಂದ ಭೂಮಿ ಪೂಜೆ ಮಾಡಿಸಿದ್ದರು. ಇದೀಗಾ ಜನ್ನಾಡಿ ಕೊರಗ ಕಾಲನಿಯಲ್ಲಿ 10 ಹಾಗೂ ಸಮೀಪದ ಮಣಿಗೇರೆ ಕಾಲನಿಯಲ್ಲಿ 4 ಮನೆಗಳನ್ನು ಸುಸಜ್ಜಿತವಾಗಿ ನಿರ್ಮಿಸಲಾಗಿದೆ.
ತಲಾ 14 ಲಕ್ಷ ವೆಚ್ಚದ 14 ಸುಸಜ್ಜಿತ ಮನೆ:
ಜನ್ನಾಡಿ ಮತ್ತು ಮಣಿಗೇರಿಯಲ್ಲಿ ನಿರ್ಮಾಣಗೊಂಡ 14 ಮನೆಗಳಿಗೆ ತಲಾ 14 ಲಕ್ಷ ರೂ. ವೆಚ್ಚ ತಗುಲಿದೆ. ಪ್ರತಿ ಮನೆಯೂ 605 ಚದರ ಅಡಿಯ ಆರ್.ಸಿ.ಸಿ. ಮನೆಯಾಗಿದ್ದು 2 ಬೆಡ್ ರೂಂ, 1 ಹಾಲ್, ಕಿಚನ್, ಸಿಟೌಟ್ ಹಾಗೂ ಶೌಚಾಲಯವನ್ನು ಹೊಂದಿದೆ. ಹಾಗೂ ನೀರಿನ ಟ್ಯಾಂಕ್ ಅಳವಡಿಸಲಾಗಿದೆ. ಭೂಮಿ ಪೂಜೆ ನಡೆಸಿದ 5 ತಿಂಗಳಿನಲ್ಲಿ ಸುಸಜ್ಜಿತ ಮನೆ ನಿರ್ಮಿಸಿ ಫಲಾನುಭವಿಗಳಿಗೆ ಹಸ್ತಾಂತರಿಸಲಾಗಿದೆ.
ಕೊರಗರಿಗಾಗಿ 100 ಮನೆ ನಿರ್ಮಾಣದ ಗುರಿ:
ಸಮಾಜದಲ್ಲಿ ಮುಗ್ದರಾಗಿ ಬಾಳುವ ಕೊರಗರು ಮುಖ್ಯವಾಹಿನಿಗೆ ಬರಬೇಕೆಂಬುದು ನನ್ನ ಆಶಯ. ಕೊರಗ ಸಮುದಾಯ ಅನ್ಯಾಯಕ್ಕೊಳಗಾದ ದಲಿತರು. ಜಿಲ್ಲೆಯಲ್ಲಿ ಕೊರಗ ಸಮುದಾಯದವರಿಗೆ 100 ಮನೆ ನಿರ್ಮಿಸಿಕೊಡುವ ಆಶಯ ಹೊಂದಿದ್ದೇವೆ. ಸುಮಾರು 50 ವರ್ಷಗಳಿಂದ ಪರಿಚಿತರಾದ ಜನ್ನಾಡಿಯ ಕೊರಗ ಬಾಂಧವರಿಗೆ 14 ಮನೆಗಳನ್ನು ಈಗಾಗಾಲೇ ಮಾಡಿದ್ದೇವೆ. ಅಮಾಸೆಬೈಲು, ಶಂಕರನಾರಾಯಣ ಕೊರಗ ಕಾಲನಿಯಲ್ಲಿ ಮನೆ ನಿರ್ಮಾಣದ ಬೇಡಿಕೆಯಿದ್ದು ಜಿಲ್ಲೆಯ ವಿವಿದೆಡೆ ಒಟ್ಟು 86 ಉಚಿತ ಮನೆ ನಿರ್ಮಿಸಿ ಕೊಡಲಾಗುತ್ತದೆ.
-ಡಾ. ಎಚ್.ಎಸ್. ಶೆಟ್ಟಿ (ಅಧ್ಯಕ್ಷರು, ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೆಬಲ್ ಟ್ರಸ್ಟ್, ಬೆಂಗಳೂರು)50 ವರ್ಷದಿಂದ ಇಲ್ಲಿ ನೆಲೆಸಿದ್ದೇವೆ. ಮನೆಗಳು ಸಂಪೂರ್ಣ ಶಿಥಿಲಗೊಂಡಿದ್ದು ವಾಸಿಸಲು ಕಷ್ಟವಾಗಿತ್ತು. ಹರಿಪ್ರಸಾದ್ ಶೆಟ್ಟಿಯವರು ನಮ್ಮ ಕಷ್ಟವನ್ನು ಎಚ್.ಎಸ್. ಶೆಟ್ಟಿಯವರಿಗೆ ಮನವರಿಕೆ ಮಾಡಿದ್ದು ಟ್ರಸ್ಟ್ ಮೂಲಕ 14 ಮನೆ ನಿರ್ಮಿಸಿಕೊಟ್ಟಿದ್ದು 14 ಕುಟುಂಬ ನೆಮ್ಮದಿಯ ಬದುಕು ಸಾಗಿಸಲು ಅನುಕೂಲವಾಗಿದೆ.
-ಚಂದು ಕೊರಗ ಜನ್ನಾಡಿ (ಮನೆ ಪಡೆದವರು)ಕೊರಗ ಸಮುದಾಯದಲ್ಲಿ ಮನೆ ಕಟ್ಟಿಸಲಾಗದ ಹಲವಷ್ಟು ಜನರಿದ್ದಾರೆ. ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೆಬಲ್ ಟ್ರಸ್ಟ್ ಮೂಲಕ ಡಾ. ಎಚ್.ಎಸ್ ಶೆಟ್ಟಿಯವರು 14 ಮನೆಗಳನ್ನು ನಿರ್ಮಿಸಿಕೊಟ್ಟು ಶ್ಲಾಘನೀಯ ಕಾರ್ಯ ಮಾಡಿದ್ದಾರೆ. ಸಮುದಾಯದ ಪರ ಅವರ ಕಾಳಜಿ ಮಾದರಿಯಾಗಿದೆ.
– ಸುಶೀಲಾ ನಾಡ (ಅಧ್ಯಕ್ಷರು, ಕೊರಗಾಭಿವೃದ್ಧಿ ಸಂಸ್ಥೆಗಳು ಕರ್ನಾಟಕ ಮತ್ತು ಕೇರಳ ರಾಜ್ಯ)
Comments are closed.