ಮಂಡ್ಯ: ಈ ಲೋಕಸಭೆ ಚುನಾವಣೆಯಲ್ಲಿ ಇಡಿ ಇಂಡಿಯಾದ ಕಣ್ಣು ಮಂಡ್ಯದ ಮೇಲಿತ್ತು. ಮಂಡ್ಯ ಲೋಕಸಭಾ ರಣಕಣದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಷ್ ಕಣಕ್ಕಿಳಿದಿದ್ದು ಇಡೀ ಕ್ಷೇತ್ರ ಹಣಾಹಣಿಯ ಕಣವಾಗಿದ್ದು ಎಲ್ಲರ ಕುತೂಹಲಕ್ಕೆ ಕಾರಣವಾಗಿದ್ದು ಇಂದು ನಡೆದ ಫಲಿತಾಂಶದಲ್ಲಿ ಸುಮಲತಾ ಗೆಲವಿನ ಮೂಲಕ ಎಲ್ಲಾ ಕುತೂಹಲಕ್ಕೆ ತೆರೆಬಿದ್ದಿದೆ.
ಮುಖ್ಯಮಂತ್ರಿ ಪುತ್ರನೇ ಅಭ್ಯರ್ಥಿಯಾದ ನಂತರ ಇಡೀ ಸರಕಾರವೇ ಮಂಡ್ಯದಲ್ಲಿ ಪ್ರಚಾರಕ್ಕೆ ನಿಂತಿತು. ಖುದ್ದು ಎಚ್‌ಡಿ ಕುಮಾರಸ್ವಾಮಿ ಇಡೀ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡು ಪ್ರಚಾರ ನಡೆಸಿದರು. ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತ ಸುಮಲತಾ ಅಂಬರೀಷ್ ಸುಮಾರು 90 ಸಾವಿರಕ್ಕೂ ಅಧಿಕ ಮತಗಳ ಅಂತರದಲ್ಲಿ ಜಯ ಗಳಿಸಿದ್ದು ನಿಜಕ್ಕೂ ಪ್ರಶಂಸನೀಯ ವಿಚಾರವಾಗಿದೆ.
ಕೆಲ ತಿಂಗಳ ಹಿಂದಷ್ಟೇ ನಿಧನರಾದ ಅಂಬರೀಷ್ ಪತ್ನಿ ಸುಮಲತಾ ಚುನಾವಣಾ ಕಣಕ್ಕಿಳಿದಾಗ ಬೆಂಬಲವಾಗಿ ನಿಂತವರು ನಟರಾದ ರಾಕ್‌ಲೈನ್ ವೆಂಕಟೇಶ್, ದರ್ಶನ್ ಮತ್ತು ಯಶ್. ಜೋಡೆತ್ತುಗಳ ಹೆಸರಿನಲ್ಲಿ ಯಶ್ ಹಾಗೂ ದರ್ಶನ್ ರಣಕಣದಲ್ಲಿ ಪ್ರಚಾರಕ್ಕಿಳಿದಿದ್ದರು. ಮೈಸೂರಿನಲ್ಲಿ ಚುನಾವಣೆ ಪ್ರಚಾರ ಮಾಡಿದ ಪ್ರಧಾನಿ ನರೇಂದ್ರ ಮೋದಿ, ತಮ್ಮ ಭಾಷಣದಲ್ಲಿ ಅಂಬರೀಷ್ ಮತ್ತು ಸುಮಲತಾ ಹೆಸರನ್ನು ಪ್ರಸ್ತಾಪಿಸಿದ್ದು ಕೂಡ ಸುಮಲತಾ ಗೆಲವಿಗೆ ಮತ್ತೊಂದಷ್ಟು ಸಹಕಾರವಾಗಿದೆ ಎನ್ನಲಾಗಿದೆ.
Comments are closed.