ಉಡುಪಿ: ಮಹಿಳಾ ಉದ್ಯಮಿಗಳು ತಯಾರಿಸುವ ಉತ್ಪನ್ನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸುವ ಮೂಲಕ ಮಹಿಳಾ ಉದ್ಯಮಗಳ ಬೆಳವಣಿಗೆಗೆ ಪ್ರೋತ್ಸಾಹ ನೀಡಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಹೇಳಿದ್ದಾರೆ. ಅವರು ಗುರುವಾರ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ ಜಿಲ್ಲೆ ಇವರ ಆಶ್ರಯದಲ್ಲಿ, ಉಡುಪಿ ರಥಬೀದಿ ಆವರಣದ ಭಂಡಾರಕೇರಿ ಮಠದ ಮುಂಭಾಗದಲ್ಲಿ ಆಯೋಜಿಸಿರುವ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಸದಸ್ಯರು ಮತ್ತು ಮಹಿಳಾ ಉದ್ಯಮಿಗಳು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಸಮಾಜ ಮತ್ತು ಕುಟುಂಬದ ಬೆಳವಣಿಗೆಯಲ್ಲಿ ಮಹಿಳೆಯರ ಕೊಡುಗೆ ಗಣನೀಯವಾಗಿದ್ದು, ಮಹಿಳೆಯರು ಆರಂಭಿಸುವ ಉದ್ದಿಮೆಗಳಿಗೆ ಮತ್ತು ಅವರು ತಯಾರಿಸುವ ವಸ್ತುಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವ ಮೂಲಕ ಅವರಿಗೆ ಪ್ರೋತ್ಸಾಹ ನೀಡಬೇಕು, ಪರ್ಯಾಯದ ಅವಧಿಯಲ್ಲಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡುವ ಸಾರ್ವಜನಿಕರು ಹಾಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ, ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಸದಸ್ಯರು ಮತ್ತು ಮಹಿಳಾ ಉದ್ಯಮಿಗಳು ತಯಾರಿಸಿದ ಉತ್ಪನ್ನಗಳನ್ನು ಖರೀದಿಸುವ ಮೂಲಕ, ಮಹಿಳೆಯರು ಉದ್ಯಮ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೇರಲು ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು. ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ ಮಾತನಾಡಿ, ಯುವ ಶಕ್ತಿಯನ್ನು ನಡೆಸಲು ಮಹಿಳಾ ಶಕ್ತಿಬೇಕು. ಇಂತಹ ಸ್ವ-ಉದ್ಯೋಗಗಳು ಮಹಿಳೆಯರ ಚಾತುರ್ಯತೆಯನ್ನು ಪ್ರತಿಬಿಂಬಿಸುತ್ತದೆ. ಮಹಿಳೆ ಆರ್ಥಿಕವಾಗಿ, ಸಾಮಾಜಿಕವಾಗಿ, ಸಬಲೀಕರಣವಾಗಬೇಕು ಎಂದರು.
ಉಡುಪಿ ತಾಲೂಕು ಪಂಚಾಯತ್ ಅಧ್ಯಕ್ಷೆ ನೀತಾ ಗುರುರಾಜ್ ಮಾತನಾಡಿ, ಮಹಿಳೆಯರು ನಾಲ್ಕು ಗೋಡೆಗಳ ಮಧ್ಯದಿಂದ ಹೊರಬಂದಿದ್ದಾರೆ ಅಂದರೆ ಅದಕ್ಕೆ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳು ಸಾಕ್ಷಿ. ಇಂತಹ ಸಂಘಗಳು ಮಹಿಳೆಯರ ಸಬಲೀಕರಣಕ್ಕೆ ಮತ್ತು ಸ್ವಾತಂತ್ರವಾಗಿ ಬದುಕಲು ಅವಕಾಶ ಮಾಡಿಕೊಟ್ಟಿದೆ. ಮಹಿಳೆಯರ ಏಳಿಗೆಗೆ ಪ್ರೋತ್ಸಾಹಿಸಿ ಅವರಿಗೆ ಇನ್ನೂ ಹೆಚ್ಚು ಅವಕಾಶಗಳು ಸಿಗುವಂತಾಗಲಿ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಶೇಷಪ್ಪ ಸ್ವಾಗತಿಸಿದರು, ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ವಂದಿಸಿದರು. ಮಹಿಳಾ ಅಭಿವೃದ್ಧಿ ನಿಗಮದ ಅವಿನಾಶ್ ನಿರೂಪಿಸಿದರು.
ಜನವರಿ 16 ರಿಂದ 18 ರ ವರೆಗೆ 3 ದಿನಗಳ ಕಾಲ ನಡೆಯುವ ಈ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಸ್ತ್ರೀಶಕ್ತಿ ಸಂಘದ ಸದಸ್ಯರು ತಯಾರಿಸಿದ ವಸ್ತುಗಳು, ಉದ್ಯೋಗಿನಿ ಯೋಜನೆಯಡಿ ನೆರವು ಪಡೆದ ಫಲಾನುಭವಿಗಳು ಆರಂಭಿಸಿರುವ ಉದ್ದಿಮೆಗಳ ಉತ್ಪನ್ನಗಳು, ಮಹಿಳೆಯರು ಮನೆಯಲ್ಲಿ ತಯಾರಿಸುವ ವಸ್ತುಗಳು, ದಿನನಿತ್ಯದ ಬಳಕೆಯ ವಸ್ತುಗಳು, ಕರಕುಶಲ ವಸ್ತುಗಳು, ಬಟ್ಟೆ ಮತ್ತು ಪೇಪರ್ನಿಂದ ತಯಾರಿಸಿದ ಬ್ಯಾಗ್ಗಳು, ಆಹಾರ ಉತ್ನನ್ನಗಳು ಸೇರಿದಂತೆ ಸುಮಾರು 30 ಕ್ಕೂ ಹೆಚ್ಚು ವೈವಿಧ್ಯಮಯ ಮಳಿಗೆಗಳಿವೆ.
Comments are closed.