ಬೆಂಗಳೂರು,ನವೆಂಬರ್. 16 : ಮಂಡ್ಯ ಕ್ಷೇತ್ರದ ಸಂಸದೆ ಸುಮಲತಾ ಅಂಬರೀಷ್ ತಮ್ಮ ಕ್ಷೇತ್ರದಲ್ಲಿ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಸಂಸದ ಪ್ರತಾಪಸಿಂಹ ಮೊಬೈಲ್ ನಲ್ಲಿ ಮಾತನಾಡುತ್ತಿದ್ದ ವಿಚಾರ ವೈರಲ್ ಆಗಿರುವ ಬೆನ್ನಲ್ಲೇ ಪ್ರತಾಪಸಿಂಹ ಹೇಳಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಸಂಸದೆ ಸುಮಲತಾ ತಿರುಗೇಟು ನೀಡಿದ್ದಾರೆ.
ಇಂದು ಸುಮಲತಾ ಅಂಬರೀಷ್ ಅವರು ಮುಖ್ಯಮಂತ್ರಿಗಳ ನಿವಾಸ ಕಾವೇರಿಗೆ ಭೇಟಿ ನೀಡಿದ್ದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದ ಪ್ರತಾಪ್‌ಸಿಂಹ ಅವರು ಮಾತಾನಾಡುವಾಗ ಅರಿತುಕೊಂಡು ಮಾತನಾಡಬೇಕು, ಪೇಟೆ ರೌಡಿಯ ತರಹ ಮಾತನಾಡಬಾರದು. ಮೈಸೂರು ಕ್ಷೇತ್ರದಲ್ಲಿ ಏನೆಲ್ಲಾ ಅಭಿವೃದ್ಧಿ ಆಗಿದೆ ಎಂದು ನನಗೆ ಗೊತ್ತಿದೆ ಎಂದು ಹೇಳಿದರು.
ಮೈಸೂರು ಸಂಸದ ಪ್ರತಾಪ ಸಿಂಹ ಮತ್ತು ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ನಡುವೆ ಪರೋಕ್ಷ ಸಮರ ಶುರುವಾಗಿದ್ದು, ಪ್ರತಾಪ ಸಿಂಹ ಅವರು ಅಧಿಕಾರಿಯೊಬ್ಬರೊಂದಿಗೆ ಮಾತನಾಡುವ ವೇಳೆ ಸುಮಲತಾ ಅವರ ಕಾರ್ಯವೈಖರಿಯನ್ನು ಟೀಕಿಸಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಸುಮಲತಾ ಅಂಬರೀಷ್ ಸೋಮವಾರ ಈ ಬಗ್ಗೆ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.
ನನ್ನ ಪತಿ ಅಂಬರೀಷ್ ಇರುವಾಗ ಯಾರಿಗೂ ಈ ರೀತಿ ಮಾತಾಡಲು ಧೈರ್ಯ ಇರಲಿಲ್ಲ. ಈಗ ಎಲ್ಲರೂ ಮಾತಾಡ್ತಿದ್ದಾರೆ, ಇರಲಿ ನಾನು ನನ್ನ ಜನರಿಗೆ ಉತ್ತರದಾಯಿತ್ವವೇ ಹೊರತು ಪಕ್ಕದ ಕ್ಷೇತ್ರದ ಎಂಪಿಗೆ ಅಲ್ಲ ಎಂದು ಹೇಳಿದ್ದಾರೆ.
ಪ್ರತಾಪ್ ಸಿಂಹಗೆ ನನ್ನ ಬಗ್ಗೆ ಮಾತಾಡಲು ಅರ್ಹತೆಯೂ ಇಲ್ಲ, ಹಕ್ಕೂ ಇಲ್ಲ. ಮೈಸೂರಲ್ಲೇ ಮಾಡಬೇಕಾಗಿರುವ ಕೆಲಸ ಸಾಕಷ್ಟು ಇವೆ. ಎರಡು ಸಲ ಸಂಸದರಾಗಿರೋರು ಪ್ರತಾಪ್ ಸಿಂಹ ಬಳಸಿದ ಭಾಷೆ ಸಂಸದ ಸ್ಥಾನಕ್ಕೆ ಗೌರವ ತರುವಂಥದ್ದಲ್ಲ. ಪ್ರತಾಪ್ ಸಿಂಹ ಜವಾಬ್ದಾರಿ ಅರಿತು ಮಾತಾಡಲಿ ಎಂದು ಸುಮಲತಾ ಅಂಬರೀಷ್ ತಿರುಗೇಟು ನೀಡಿದ್ದಾರೆ.
ಪಕ್ಕದ ಕ್ಷೇತ್ರದ ಸಂಸದರಿಗೆ ನನ್ನ ಕ್ಷೇತ್ರದ ಬಗ್ಗೆ ಮಾತಾಡುವ ಹಕ್ಕು ಇಲ್ಲ. ಅಂಬರೀಷ್ ಅಭಿಮಾನಿಗಳು, ನನ್ನ ಮತದಾರರು ಯಾವ ರೀತಿ ಪ್ರತಿಕ್ರಿಯಿಸುತ್ತಿದ್ದಾರೆ ಅಂತಾ ಗೊತ್ತಿದೆ. ಸಂಸದರಾಗಿ ಮತ್ತೊಬ್ಬ ಸಂಸದರ ಬಗ್ಗೆ ಈ ರೀತಿಯ ಹೇಳಿಕೆ ಸರಿಯಲ್ಲ. ಸಂಸದರ ಭಾಷೆಯನ್ನು ಅವರು ಬಳಸಿದ್ದರೆ ನಾನು ರಿಯಾಕ್ಟ್ ಮಾಡಬಹುದು. ಒಬ್ಬ ಪೇಟೆ ರೌಡಿ ತರ ಮಾತಾಡೋದಾದರೆ ನನ್ನ ರಿಯಾಕ್ಷನ್ಗೆ ಅವರಿಗೆ ಅರ್ಹತೆ ಇಲ್ಲ ಎಂದಿದ್ದಾರೆ.
ನಾನು ಬರೀ ಮಂಡ್ಯ ಎಂಪಿ ಅಲ್ಲ ಬದಲಿಗೆ ನಾನು ಮೈಸೂರಿನ ಒಂದು ಭಾಗದ ಎಂಪಿ ಕೂಡಾ. ಅಲ್ಲದೆ ಕೆ.ಆರ್. ನಗರ ನನ್ನ ಕ್ಷೇತ್ರಕ್ಕೆ ಸೇರುತ್ತದೆ. ಕೊಡಗು ಭಾಗಗಳಲ್ಲಿ ರಸ್ತೆಗಳು ಕೊಚ್ಚಿ ಹೋಗಿರುವುದು ನಮಗೂ ದೂರು ಬಂದಿದೆ. ಅಲ್ಲಿಯ ಜನ ರಸ್ತೆಗಳು ಕೊಚ್ಚಿಕೊಂಡು ಹೋಗಿವೆ. ಅಲ್ಲಿನ ಜನ ಸಮಸ್ಯೆಗಳನ್ನು ಬಂದು ನಮಗೂ ಹೇಳ್ತಾರೆ. ಆದ್ರೆ ನಾನು ಸಂಸದರ ಬಗ್ಗೆ ಎಂದೂ ಮಾತನಾಡಿಲ್ಲ ಎಂದು ತಿರುಗೇಟು ನೀಡಿದರು.
ನನ್ನ ವಿರುದ್ಧ ಹೇಳಿಕೆಗೆ ಜನ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಉತ್ತರ ಕೊಡ್ತಿದ್ದಾರೆ. ಇದನ್ನ ಅರ್ಥ ಮಾಡಿಕೊಂಡು ಪ್ರತಾಪಸಿಂಹ ಹೇಳಿಕೆ ಕೊಡ್ಲಿ ಎಂದು ಸುಮಲತಾ ಅಂಬರೀಷ್ ಅವರು ಸಿಂಹ ಅವರಿಗೆ ಎಚ್ಚರಿಕೆ ನೀಡಿದ್ದಾರೆ.
Comments are closed.