ಉಡುಪಿ: ಕೆಲ ತಿಂಗಳ ಹಿಂದೆ ಜಿಲ್ಲೆಯ ಬಾರ್ಕೂರು ಸಮೀಪದ ಚೌಳಿಕೆರೆಗೆ ಕಾರೊಂದು ಬಿದ್ದಾಗ ಅದರಲ್ಲಿರುವರ ರಕ್ಷಣೆಗೆ ಮುಂದಾಗಿ ಸಾರ್ವಜನಿಕ ವಲಯದಲ್ಲಿ ಶಹಬ್ಬಾಸ್ ಎನಿಸಿಕೊಂಡಿದ್ದ ನಮನಾ ಬಿ.ಕೆ ಅವರಿಗೆ ಕೆಳದಿ ಚೆನ್ನಮ್ಮ ರಾಜ್ಯ ಶೌರ್ಯ ಪ್ರಶಸ್ತಿ ಲಭಿಸಿದೆ.
ರಾಜ್ಯಪಾಲರಿಂದ ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ ಕೊಡಲ್ಪಡುವ ಘನತೆಯ ಶೌರ್ಯ ಪ್ರಶಸ್ತಿಯು ಕೊರೊನಾ ಮಹಾಮಾರಿಯ ಕಾರಣ ಮುಂದೂಡಲ್ಪಟ್ಟು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ , ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಮಂತ್ರಿ ಶಶಿಕಲ ಜೊಲ್ಲೆಯವರ ಉಪಸ್ಥಿತಿಯಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು. ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಯು ಪ್ರಶಸ್ತಿ ಪತ್ರ, ನಗದು ಬಹುಮಾನವನ್ನೊಳಗೊಂಡಿದೆ.
ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ಪುರಸ್ಕಾರ ಪಡೆದ ನಮನ ಬಿ.ಕೆ. ಬ್ರಹ್ಮಾವರದ ಲಿಟಲ್ ರಾಕ್ ಇಂಡಿಯನ್ ಸ್ಕೂಲ್ ನ ಹತ್ತನೇ ತರಗತಿಯ ವಿದ್ಯಾರ್ಥಿನಿ. ಇವರು ಬ್ರಹ್ಮಾವರದ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ಹಾಗೂ ಎನ್.ಎಸ್.ಎಸ್. ಮಂಗಳೂರು ವಿಭಾಗದ ವಿಭಾಗಾಧಿಕಾರಿ, ಶ್ರೀ ಜ್ಞಾನಶಕ್ತಿ ಸ್ಥಾನಿಕ ಬ್ರಾಹ್ಮಣ ಸಭಾ ಬಾರ್ಕೂರು ಮಂದಾರ್ತಿ ಬ್ರಹ್ಮಾವರ ತಾಲೂಕು ಇದರ ಪ್ರಧಾನ ಕಾರ್ಯದರ್ಶಿಯಾದ ಸವಿತಾ ಎರ್ಮಾಳ್ ಹಾಗೂ ಉದ್ಯಮಿ ಕುಮಾರಸ್ವಾಮಿ ಬಿ. ಆರ್ ಇವರ ಪುತ್ರಿಯಾಗಿದ್ದಾರೆ.
(ವರದಿ- ಯೋಗೀಶ್ ಕುಂಭಾಸಿ)
Comments are closed.