ಕರಾವಳಿ

ಕುಂದಾಪುರದಲ್ಲಿ ಪೋಷಣ್ ಮಾಸಾಚರಣೆ ಅಂಗವಾಗಿ ‘ಪೌಷ್ಟಿಕ ಹಬ್ಬ’: ಗರ್ಭಿಣಿಯರಿಗೆ ಬಾಗಿನ ನೀಡಿ ಗೌರವ

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಪುರಸಭಾ ವ್ಯಾಪ್ತಿಯಲ್ಲಿ ಪೋಷಣಾ ಅಭಿಯಾನ ನಡೆಯುತ್ತಿದ್ದು ಇದು ಈ ಒಂದು ತಿಂಗಳಿಗೆ ಮಾತ್ರ ಸೀಮಿತವಾಗಿರುವುದಲ್ಲ. ವರ್ಷದ 12 ತಿಂಗಳು ನಾವು ಪೌಷ್ಟಿಕ ಆಹಾರದೊಂದಿಗೆ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಬಗ್ಗೆ ಮಾಹಿತಿ ನೀಡಲಿದ್ದೇವೆ. ಸ್ಥಳೀಯ ತರಕಾರಿ, ಹಣ್ಣು ಹಂಪಲಿಗೆ ಹೆಚ್ಚು ಒತ್ತು ನೀಡಬೇಕು. ಗರ್ಭಿಣಿಯರು, ಬಾಣಂತಿಯರು, ಮಕ್ಕಳಲ್ಲಿ ಕಾಡುತ್ತಿರುವ ಅಪೌಷ್ಟಿಕತೆಯ ಪ್ರಮಾಣ ಕಮ್ಮಿ ಮಾಡಲು ಈ ಕಾರ್ಯಕ್ರಮದ ಮೂಲಕ ಮಾಹಿತಿ ನೀಡುತ್ತೇವೆ ಎಂದು ಕುಂದಾಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ವೇತಾ ಸಂತೋಷ್ ಹೇಳಿದರು.

ಬುಧವಾರ ಕುಂದಾಪುರ ಅಂಬೇಡ್ಕರ್ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ, ಶಿಶು ಅಭಿವೃದ್ಧಿ ಯೋಜನೆ ಕುಂದಾಪುರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆಯುಷ್ ಇಲಾಖೆ ಮತ್ತು ಪುರಸಭೆ ಕುಂದಾಪುರದ ಜಂಟಿ ಆಶ್ರಯದಲ್ಲಿ ಪೋಷಣ್ ಮಾಸಾಚರಣೆ ಅಂಗವಾಗಿ ನಡೆದ ಪೌಷ್ಟಿಕ ಹಬ್ಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್ ಮಾತನಾಡಿ, ಪೌಷ್ಟಿಕ ಹಬ್ಬದ ಮೂಲಕ ಮನುಷ್ಯನ ಆರೋಗ್ಯಕರ ಜೀವನಕ್ಕೆ ಬೇಕಾದ ಉಪಯುಕ್ತ ಮಾಹಿತಿಯನ್ನು ನೀಡುತ್ತಿದೆ. ಇದರ ಉಪಯೋಗವನ್ನು ಎಲ್ಲರೂ ಪಡೆಯಬೇಕು ಎಂದರು.

ಆಯುಷ್ ಇಲಾಖೆಯ ವೈದ್ಯರಾದ ಡಾ| ಕಿರಣ್ ಪೌಷ್ಟಿಕ ಆಹಾರ ಸೇವನೆಯ ಕುರಿತು ಮಾಹಿತಿ ನೀಡಿದರು.

ಗರ್ಭಿಣಿಯರಿಗೆ ಬಾಗಿನ ನೀಡಿ ಗೌರವ…
ಕಾರ್ಯಕ್ರಮದ 12 ಮಂದಿ ಗರ್ಭಿಣಿಯರಿಗೆ ಬಾಗಿನ ನೀಡಿ ಗೌರವಿಸಲಾಯಿತು. ಅರಶಿನ ಕುಂಕುಮ‌ ಹಚ್ಚಿ ಸಾಂಪ್ರದಾಯಿಕ ವಾಗಿ ಸೀಮಂತ ಮಾದರಿಯಲ್ಲಿ ಈ ಪ್ರಕ್ರಿಯೆ ನಡೆಯಿತು.

ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಸಂದೀಪ್ ಖಾರ್ವಿ, ಸ್ಥಾಯಿ ಸಮಿತಿ ಅಧ್ಯಕ್ಷ ಶೇಖರ್ ಪೂಜಾರಿ, ಪುರಸಭೆ ಸದಸ್ಯರಾದ ಶ್ವೇತಾ, ಪುಷ್ಪಾ ಶೇಟ್, ದೇವಕಿ ಸಣ್ಣಯ್ಯ, ರಾಘವೇಂದ್ರ ಖಾರ್ವಿ, ಹೇಮಾವತಿ ಉಪಸ್ಥಿತರಿದ್ದರು.

ಅಂಗನವಾಡಿ ಕಾರ್ಯಕರ್ತೆ ಉಷಾ ಸ್ವಾಗತಿಸಿ, ಬಿ‌.ಪ್ರಭಾವತಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಕಂದಾಯ ನೀರಿಕ್ಷಕಿ ಜ್ಯೋತಿ ವಂದಿಸಿದರು.

 

Comments are closed.