ಪ್ರಮುಖ ವರದಿಗಳು

‘ತಾಯಿಯ ಗರ್ಭ ಮತ್ತು ಸ್ಮಶಾನ ಮಾತ್ರ ಹೆಣ್ಣು ಮಕ್ಕಳಿಗೆ ಸುರಕ್ಷಿತ ಸ್ಥಳ’- ಡೆತ್ ನೋಟ್ ಬರೆದು ವಿದ್ಯಾರ್ಥಿನಿ ಆತ್ಮಹತ್ಯೆ

Pinterest LinkedIn Tumblr

ಚೆನ್ನೈ: ತನ್ನ ಮೇಲೆ ನಡೆದ ಲೈಂಗಿಕ ದೌರ್ಜನ್ಯದಿಂದಾಗಿ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚೆನ್ನೈನ ಮನ್ಗಾಡು ಎಂಬಲ್ಲಿ ನಡೆದಿದ್ದು, ಆಕೆ ಬರೆದಿದ್ದ ಡೆತ್ ನೋಟ್ ಸಾರಾಂಶ ಹೃದಯ‌ ಕಲುಕುವಂತಿದೆ.

ಶನಿವಾರ ಸೂಸೈಡ್ ನೋಟ್ ಪತ್ತೆಯಾಗಿದ್ದು, ‘ಲೈಂಗಿಕ ದೌರ್ಜನ್ಯ ಕೊನೆಗೊಳ್ಳಲಿ’ ಎಂಬ ತಲೆಬರಹದಡಿಯಲ್ಲಿ ಆಕೆ ತನಗಾದ ನೋವನ್ನು ಅಕ್ಷರ ರೂಪದಲ್ಲಿ ಸಮಾಜಕ್ಕೆ ತಿಳಿಸುವ ಪ್ರಯತ್ನ ಮಾಡಿ ಬಾರದ ಲೋಕಕ್ಕೆ ಪಯಣಿಸಿದ್ದಾಳೆ.

‘ಲೈಂಗಿಕ ದೌರ್ಜನ್ಯಕ್ಕೊಳಗಾದ ನಾನು ಮಾನಸಿಕವಾಗಿ ಕುಗ್ಗಿ ಹೋಗಿದ್ದು, ಏನನ್ನೂ ಹೇಳಿಕೊಳ್ಳಲಾರದ ಸ್ಥಿತಿ ತಲುಪಿಬಿಟ್ಟಿದ್ದೆ. ಸಮಾಜದಲ್ಲಿ ಹೆಣ್ಣುಮಕ್ಕಳನ್ನು ಹೇಗೆ ಗೌರವಿಸಬೇಕು ಎಂಬುದನ್ನು ಪೋಷಕರು ತಮ್ಮ ಗಂಡು ಮಕ್ಕಳಿಗೆ ಕಲಿಸಿಕೊಡಬೇಕು’. ಸಂಬಂಧಿಗಳನ್ನಾಗಲಿ, ಶಿಕ್ಷಕರನ್ನಾಗಲಿ ಯಾರನ್ನೂ ನಂಬಬೇಡಿ. ಹೆಣ್ಣು ಮಕ್ಕಳಿಗೆ ತಾಯಿಯ ಗರ್ಭ ಮತ್ತು ಸ್ಮಶಾನ ಮಾತ್ರ ಸುರಕ್ಷಿತ ಸ್ಥಳವಾಗಿದೆ ಎಂದು ಸೂಸೈಡ್ ನೋಟ್ ನಲ್ಲಿ ವಿದ್ಯಾರ್ಥಿನಿ ಬರೆದಿರುವುದಾಗಿ ವರದಿ ವಿವರಿಸಿದೆ.

ಘಟನೆಗೆ ಸಂಬಂಧಿಸಿದಂತೆ ಆಕೆಯ ಸೂಸೈಡ್ ನೋಟ್ ಆಧಾರದ ಮೇಲೆ ತನಿಖೆಯನ್ನು ಮುಂದುವರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

 

Comments are closed.