ಕರಾವಳಿ

ಕೊಲ್ಲೂರಿನಲ್ಲಿ ‘ಬೃಹತ್ ಸಾಮಾಜಿಕ ಸೇರ್ಪಡೆ ಹಾಗೂ ಸ್ವಚ್ಚತಾ ಹೀ ಸೇವಾ ಆಂದೋಲನ’ ಉದ್ಘಾಟಿಸಿದ ಹಿರಿಯ ಸಿವಿಲ್ ಜಡ್ಜ್

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಮಹಿಳೆಯರು ಎಲ್ಲಾ ಕ್ಷೇತ್ರದಲ್ಲಿ ದಾಪುಗಾಲಿಟ್ಟಿದ್ದು ಸ್ವಚ್ಚತೆಯ ನಿಟ್ಟಿನಲ್ಲಿ‌ ಮಹಿಳೆಯರು‌ ಮತ್ತು ಮಕ್ಕಳ ಪಾತ್ರ ಮಹತ್ತರವಾಗಿದೆ. ಗಾಂಧೀಜಿಯವರು ಹೇಳಿದಂತೆ ಸ್ವಚ್ಚತೆಯಿರುವಲ್ಲಿ ದೇವರನ್ನು ಕಾಣಬಹುದು ಎಂಬ ಪರಿಕಲ್ಪನೆಯಲ್ಲಿ ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಂಡು ಗಾಂಧೀಜಿಯವರ ಆಶಯವನ್ನು ಸಾಕಾರಗೊಳಿಸೋಣ ಎಂದು ಉಡುಪಿಯ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಅವರು ಹೇಳಿದರು.

ತಾಲೂಕು ಪಂಚಾಯತ್ ಬೈಂದೂರು ಹಾಗೂ ಕುಂದಾಪುರ, ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರಾಷ್ಟ್ರೀಯ ಗ್ರಾಮೀಣ ಜೋವನೋಪಾಯ ಅಭಿಯಾನ (ಎನ್.ಆರ್.ಎಲ್.ಎಂ), ಸಂಜೀವಿನಿ- ಉಡುಪಿ ಜಿಲ್ಲಾ ಅಭಿಯಾನ ನಿರ್ವಹಣಾ ಘಟಕ, ಸ್ವಚ್ವ ಭಾರತ್ ಮಿಷನ್ (ಗ್ರಾಮೀಣ), ಕೊಲ್ಲೂರು ಗ್ರಾಮಪಂಚಾಯತ್, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ, ತಾಲೂಕು ಮಟ್ಟದ ಸಂಜೀವಿನಿ ಒಕ್ಕೂಟ ಬೈಂದೂರು ‌ಮತ್ತು ಕುಂದಾಪುರ, ಕೊಲ್ಲೂರು‌ ಮಹಿಳಾ ಮಂಡಳ ಇವರ ಸಹಯೋಗದಲ್ಲಿ ಮಂಗಳವಾರ ಕೊಲ್ಲೂರು ಹಿತಿಯ‌ ಪ್ರಾಥಮಿಕ ಶಾಲೆ ವಠಾರದಲ್ಲಿ ನಡೆದ ಬೃಹತ್ ಸಾಮಾಜಿಕ ಸೇರ್ಪಡೆ ಹಾಗೂ ಸ್ವಚ್ಚತಾ ಹೀ ಸೇವಾ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಅವರು‌ ಮಾತನಾಡಿದರು.

ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಕಾಲದಲ್ಲೇ ಸ್ವಚ್ಚ ಭಾರತ್ ಪರಿಕಲ್ಪನೆಯಿತ್ತು. ಪ್ರಧಾನಿ ನರೇಂದ್ರ‌ ಮೋದಿಯವರು ಅ.2ರಂದು ರಾಜ್ ಘಾಟ್ ನಲ್ಲಿ ಸ್ವಚ್ಚಗೊಳಿಸಿ ಅಧೀಕೃತವಾದ ಅಭಿಯಾನಕ್ಕೆ ಚಾಲನೆ ನೀಡಿದರು. ಬಯಲು ಶೌಚ ನಿರ್ಮೂಲನೆ, ಕೊಳಚೆಗೇರಿ, ಮಲಹೊರುವ ಪದ್ದತಿ ನಿರ್ಮೂಲನೆ ಜೊತೆಗೆ ಸ್ವಚ್ಚತೆ ಬಗ್ಗೆ ಅರಿವು ಹಾಗೂ ಮಾಹಿತಿ‌ ನೀಡುವ ನಿಟ್ಟಿನಲ್ಲಿ ಸ್ವಚ್ಚ ಭಾರತ ಅಭಿಯಾನ ಮಾಡಲಾಗುತ್ತಿದೆ. ಭಾರತದ ಎಲ್ಲಾ ನಗರ ಮತ್ತು ಹಳ್ಳಿಗಳಲ್ಲಿ ಶೌಚಾಲಯ ನಿರ್ಮಾಣ ಹಾಗೂ ರಸ್ತೆ ಮತ್ತು ಮೂಲಸೌಕರ್ಯಗಳನ್ನು ಸ್ವಚ್ಚಗೊಳಿಸುವುದು ಮುಖ್ಯ ಉದ್ದೇಶ. ಕಸಗಳ ಬೇರ್ಪಡಿಸುವಿಕೆ ಸಹಿತ ವಿವಿಧ ಮಾಹಿತಿ ನೀಡಲಾಗುತ್ತಿದೆ ಎಂದರು.

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಪ್ರಭಾಕರ್ ಆಚಾರ್ ಮಾತನಾಡಿ, ಸಂಜೀವಿನಿ ಸಂಘದ ಮೂಲಕ ಕೇವಲ ಸಾಲ ಪಡೆಯುವುದು ಮಾತ್ರವಲ್ಲ. ಬದಲಾಗಿ ಸಾಮಾಜಿಕ, ಆರ್ಥಿಕ ಹಾಗೂ ಉದ್ಯಮ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೆ ತಲುಪಬೇಕೆಂಬುದು ಇದರ ಧ್ಯೇಯ. ಸಂಜೀವಿನಿ ಸಂಘದ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ತಯಾರಿಸಿದ ವಸ್ತುಗಳಿಗೆ ಅಗತ್ಯ ಮಾರುಕಟ್ಟೆ ಕಲ್ಪಿಸಲು ಕ್ರಮಕೈಗೊಳ್ಳಲಾಗಿದೆ. ಇತ್ತೀಚೆಗೆ 21 ಕೋಟಿ ರೂ. ಸಮುದಾಯ ಬಂಡವಾಳ ನಿಧಿಯನ್ನು 51 ಸಂಜೀವಿನಿ ಗ್ರಾಮಪಂಚಾಯತ್ ಮಟ್ಟದ ಒಕ್ಕೂಟಗಳಿಗೆ ವಿತರಿಸಲಾಗಿದ್ದು ಮಹಿಳೆಯರಿಗೆ ಸ್ವದ್ಯೋಗಕ್ಕಾಗಿ ಸಾಲದ ರೂಪದಲ್ಲಿ ಆ ಹಣವನ್ನು ಪಡೆದು ಆರ್ಥಿಕ ಬಲಿಷ್ಟರಾಗಲು ಸಾಧ್ಯವಿದೆ ಎಂದರು. ಊರಿನ ಸ್ವಚ್ಚತೆ ಸೇವಾ ಮನೋಭಾವನೆ ತೋರಿಸುತ್ತದೆ. ಈ ನಿಟ್ಟಿನಲ್ಲಿ ಸ್ವಚ್ಚತಾ ಹೀ ಸೇವಾ ಅಂದೋಲನದ ಮೂಲಕ ತಮ್ಮತಮ್ಮ ಗ್ರಾಮವನ್ನು ಸ್ವಚ್ಚವಾಗಿಟ್ಟುಕೊಂಡು ಅಭಿವೃದ್ದಿಪಡಿಸಲು ಸಾಧ್ಯವಿದೆ ಎಂದರು.

ಕೊಲ್ಲೂರು ಗ್ರಾ.ಪಂ ಅಧ್ಯಕ್ಷ ಶಿವರಾಮಕೃಷ್ಣ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕೊಲ್ಲೂರು ಸಂಜೀವಿನಿ ಒಕ್ಕೂಟದ ಸದಸ್ಯೆ ಲತಾ ಶೆಟ್ಟಿ, ಎನ್.ಆರ್.ಎಲ್.ಎಂ ಯುವ ವೃತ್ತಿಪರರಾದ ಜಯಮಾಲ ಇದ್ದರು.

ಕೊಲ್ಲೂರು ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ರುಕ್ಕನಗೌಡ ಸ್ವಾಗತಿಸಿದರು. ಎನ್.ಆರ್.ಎಲ್.ಎಂ ಜಿಲ್ಲಾ ವ್ಯವಸ್ಥಾಪಕಿ ನವ್ಯಾ ನಿರೂಪಿಸಿ, ವಲಯ ಮೇಲ್ವಿಚಾರಕ ಪ್ರಶಾಂತ್ ವಂದಿಸಿದರು.

ಇದೇ ವೇಳೆ ಕೊಲ್ಲೂರು ಪರಿಸರದಲ್ಲಿ ತ್ಯಾಜ್ಯ ಸಂಗ್ರಹಿಸುವ ಆಂದೋಲನ ನಡೆದಿದ್ದು‌ ನ್ಯಾಯಾಧೀಶರಾದ ಶರ್ಮಿಳಾ ಅವರು ಚಾಲನೆ ನೀಡಿದರು.

Comments are closed.