ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದ ದಿನ (ಆ.25) ಮುಜರಾಯಿ ದೇವಸ್ಥಾನಗಳಿಗೆ ಬರುವ ಮಹಿಳೆಯರಿಗೆ ಹಿಂದಿನ ವರ್ಷದಂತೆ ಈ ಬಾರಿಯೂ ಅರಿಶಿಣ, ಕುಂಕುಮ, ಕಸ್ತೂರಿ ಹಾಗೂ ಹಸಿರು ಬಳೆಗಳನ್ನು ನೀಡಬೇಕು ಎಂದು ಧಾರ್ಮಿಕ ದತ್ತಿ ಇಲಾಖೆ ಸುತ್ತೋಲೆ ಹೊರಡಿಸಿದೆ.
ಶ್ರಾವಣಮಾಸದಲ್ಲಿ ವರಮಹಾಲಕ್ಷ್ಮಿ ಪೂಜಿಸುವುದು ಸಂಪ್ರದಾಯವಾಗಿದೆ. ಹಬ್ಬದ ದಿನ ದೇವಿಯನ್ನು ಅಲಂಕಾರ ಮಾಡಿ, ವಿಶೇಷವಾಗಿ ಪೂಜಿಸಲಾಗುತ್ತದೆ. ಮಹಿಳೆಯರು ಮನೆಯಲ್ಲಿ ದೇವಿಯನ್ನು ಪೂಜಿಸಿದ ನಂತರ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ. ಹೀಗೆ ದೇವಸ್ಥಾನಕ್ಕೆ ಬರುವವರಿಗೆ ಉತ್ತಮ ಗುಣಮಟ್ಟದ ಅರಿಶಿಣ, ಕುಂಕುಮ, ಬಳೆ ನೀಡಬೇಕು ಎಂದು ಸೂಚಿಸಲಾಗಿದೆ.
ದೇವರ ಮುಂದೆ ಇಟ್ಟು ಇವೆಲ್ಲವನ್ನೂ ಪೂಜಿಸಿದ ನಂತರ ಸರ್ಕಾರದ ಲಾಂಛನ, ದೇವಸ್ಥಾನದ ಹೆಸರು ಒಳಗೊಂಡ ಲಕೋಟೆಯಲ್ಲಿ ಹಾಕಿ ಗೌರವ ಸೂಚಕವಾಗಿ ಕೊಡಬೇಕು. ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಒಳಪಡುವ ಆಯಾ ದೇವಸ್ಥಾನಗಳೇ ವೆಚ್ಚ ಭರಿಸಬೇಕು ಎಂದು ವಿವರಿಸಲಾಗಿದೆ.
ಸ್ತ್ರೀದೇವತೆಗಳನ್ನು ಪೂಜಿಸುವ ದಿನಗಳಂದು ಮುಜರಾಯಿ ದೇವಸ್ಥಾನಗಳಿಗೆ ಬರುವ ಮಹಿಳೆಯರಿಗೆ ಅರಿಶಿಣ, ಕುಂಕುಮ, ಹಸಿರು ಬಳೆ ವಿತರಿಸುವಂತೆ ಬಿಜೆಪಿ ಸರ್ಕಾರ ಆದೇಶ ಹೊರಡಿಸಿತ್ತು. ಅದನ್ನು ಈ ಬಾರಿ ಕಾಂಗ್ರೆಸ್ ಸರ್ಕಾರ ಕೂಡ ಮುಂದುವರಿಸಿದೆ.
Comments are closed.