ಕುಂದಾಪುರ: ಬೈಂದೂರು ತಾಲೂಕು ಇಡೂರು ಕುಂಜ್ಞಾಡಿ ಗ್ರಾಮದ ಗೋಳಿಕೆರೆಯ ಗೋಪಾಲ ಗೌಡ ಮತ್ತು ಗೀತಾ ಎನ್ನುವರ ಮೂವರು ಮಕ್ಕಳಲ್ಲಿ ಮೊದಲಿನವಳಾದ ಭೂಮಿಕಾ ಮತ್ತು ಎರಡನೇ ಮಗ ಭರತ್ ವಿದ್ಯಾರ್ಜನೆಗಾಗಿ ಸಮೀಪದ ಗುಡ್ಡ ಏರಿ ಇಡೀ ದಿನ ಆನ್‌ಲೈನ್ ತರಗತಿಯಲ್ಲಿ ತೊಡಗಿಸಿಕೊಳ್ಳುತ್ತಿದ್ರು.
ಬೆಳಿಗ್ಗೆ ಪಠ್ಯ ಪುಸ್ತಕಗಳು, ಎರಡು ಮೊಬೈಲ್, ಚಾರ್ಜ್ ಮಾಡಲು ಬ್ಯಾಟರಿ, ತಿನ್ನಲು ಕುರುಕಲು ತಿಂಡಿ ಹಿಡಿದು ನಿರ್ಜನ ಗುಡ್ಡ ಏರಿದರೆ ಮತ್ತೆ ವಾಪಾಸ್ ಆಗೋದು ಸಂಜೆಯೇ ಆಗಿತ್ತು. ಮಕ್ಕಳಿಗೆ ಮೊಬೈಲ್ ಹಾಗೂ ಚಾರ್ಜರ್ ಖರೀದಿಸಲು ತಂದೆ 50 ಸಾವಿರ ಸಾಲ ಮಾಡಿದ್ರು. ಸದ್ಯ ಇವರಿಬ್ಬರು ಅಕ್ಕ-ತಮ್ಮನ ವಿದ್ಯಾರ್ಜನೆಗೆ ಇನ್ಫೊಸಿಸ್ ಸಂಸ್ಥೆ ಮುಂದೆ ಬಂದಿದೆ.
ಸುಧಾಮೂರ್ತಿ ನೇತೃತ್ವದ ಇನ್ಫೋಸಿಸ್ ಫೌಂಡೇಶನ್ ಈ ವಿದ್ಯಾರ್ಥಿಗಳ ಪಾಲಿಗೆ ಆಶಾಕಿರಣವಾಗಿದೆ. ಮನೆ ಸಮೀಪದ ನಿರ್ಜನ ಗುಡ್ಡ ಏರಿ ಟಾರ್ಪಲು, ಮಡಿಲು ಹೊದಿಕೆಯ ಗೂಡಲ್ಲಿ ಕೂತು ಆನ್‌ಲೈನ್ ತರಗತಿಯಲ್ಲಿ ಪಾಲ್ಗೊಳ್ಳುತ್ತಿದ್ದ ಹತ್ತನೆ ತರಗತಿ ವಿದ್ಯಾರ್ಥಿನಿ ಭೂಮಿಕಾಳಿಗೆ ಇನ್ಫೋಸಿಸ್ ಸಂಸ್ಥೆ ಲ್ಯಾಪ್‌ಟಾಪ್ ಅಲ್ಲದೆ ಉತ್ತಮ ಗುಣಮಟ್ಟದ ಸಿ.ಪಿ.ಯು ಹಾಗೂ ಇಂಟರ್ನೆಟ್ ವ್ಯವಸ್ಥೆಗಾಗಿ ಒಂದು ವರ್ಷದ ರಿಚಾರ್ಜ್ ಹೊಂದಿರುವ ಏರ್ ಟೆಲ್ ಡಾಂಗಲ್ ನೀಡುವ ಮೂಲಕ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದೆ. ಈ ವಿದ್ಯಾರ್ಥಿಗಳು ಆನ್‌ಲೈನ್ ಪಾಠಕ್ಕಾಗಿ ಪಡುತ್ತಿರುವ ಪಾಡು ಹಾಗೂ ಕಷ್ಟದಲ್ಲಿಯೂ ಹೆತ್ತವರ ಪ್ರೋತ್ಸಾಹದ ಬಗ್ಗೆ ಆಗಸ್ಟ್ ತಿಂಗಳಿನಲ್ಲಿ ‘ಕನ್ನಡಿಗವರ್ಲ್ಡ್’ *ನಿರ್ಜನ ಕಾಡು ಗುಡ್ಡದಲ್ಲಿನ ಗುಡಾರದಲ್ಲಿ ಅಕ್ಕ-ತಮ್ಮನ ಆನ್‌ಲೈನ್ ಪಾಠ..!* ಶೀರ್ಷಿಕೆಯಡಿಯಲ್ಲಿ ವಿಶೇಷ ವರದಿ ಪ್ರಕಟಿಸಿತ್ತು. ಇದೀಗ ಈ ಮಕ್ಕಳ ಶಿಕ್ಷಣಕ್ಕೆ ಬೆನ್ನೆಲುಬಾಗಿ ಇನ್ಫೋಸಿಸ್ ಸಂಸ್ಥೆ ಮುಂದೆ ಬಂದಿದ್ದು ಸಂಸ್ಥೆಯ ಉಡುಪಿ ಪ್ರತಿನಿಧಿ ಯಶವಂತ್ ಮಂಗಳವಾರ ಗೋಳಿಕೆರೆಯ ಮನೆಯಲ್ಲಿ ವಿದ್ಯಾರ್ಥಿನಿ ಭೂಮಿಕಾಗೆ ಲ್ಯಾಪ್‌ಟಾಪ್ ಹಸ್ತಾಂತರಿಸಿದರು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಬ್ಬರು ತಮ್ಮ ವಿದ್ಯಾರ್ಜನೆಗೆ ಸಹಕರಿಸಿದ ಇನ್ಪೋಸಿಸ್ ಸಂಸ್ಥೆ, ಸ್ಥಳೀಯ ಶಾಲಾ ಶಿಕ್ಷಕ ಗಣೇಶ್, ರಾಘವೇಂದ್ರ ಹಾರ್ಮಣ್, ಮಾಧ್ಯಮಗಳಿಗೆ ಧನ್ಯವಾದವನ್ನು ಹೇಳಿದ್ರು.
(ವರದಿ- ಯೋಗೀಶ್ ಕುಂಭಾಸಿ)
Comments are closed.