ಕರ್ನಾಟಕ

20 ದಿನದೊಳಗೆ ಸಿಇಟಿ ಪರೀಕ್ಷೆ ಫಲಿತಾಂಶ ಪ್ರಕಟ:‌ ಡಾ. ಸಿ.ಎನ್. ಅಶ್ವತ್ಥನಾರಾಯಣ

Pinterest LinkedIn Tumblr

ಬೆಂಗಳೂರು: ರಾಜ್ಯಾದ್ಯಂತ ಸಿಇಟಿ ಪರೀಕ್ಷೆ ಸುಸೂತ್ರವಾಗಿ ನಡೆಯುತ್ತಿದ್ದು 20 ದಿನದಲ್ಲಿ ಫಲಿತಾಂಶ ಪ್ರಕಟಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.

ಶನಿವಾರ ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಈ ತಿಂಗಳ 30ಕ್ಕೆ ಪರೀಕ್ಷೆ ಮುಗಿಯುತ್ತದೆ. ಹೀಗಾಗಿ ಕ್ಷಿಪ್ರಗತಿಯಲ್ಲಿ ಫಲಿತಾಂಶ ನೀಡಲು ಕ್ರಮ ವಹಿಸಲಾಗಿದೆ. 20 ದಿನಗಳಲ್ಲಿ ರಿಸಲ್ಟ್ ಪ್ರಕಟಿಸಲಾಗುವುದು. ತದ ನಂತರ ಅಕ್ಟೋಬರ್‌ನಲ್ಲಿ ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ರಾಜ್ಯದ 530 ಕೇಂದ್ರ ಸೇರಿ ಬೆಂಗಳೂರಿನ 86 ಕೇಂದ್ರಗಳಲ್ಲೂ ಪರೀಕ್ಷೆ ಉತ್ತಮವಾಗಿ ನಡೆಯುತ್ತಿದೆ. ಎಲ್ಲೂ ಯಾವುದೇ ಸಮಸ್ಯೆ ಇಲ್ಲ. ಕೋವಿಡ್ ನಿಯಮಗಳಿಗೊಳಪಟ್ಟೇ ಪರೀಕ್ಷೆ ನಡೆಸಲಾಗಿದೆ. ಪರೀಕ್ಷೆಗೆ 2,01,816 ವಿದ್ಯಾರ್ಥಿಗಳ ನೋಂದಣಿ ಮಾಡಿಕೊಂಡಿದ್ದು, ಈ ಪೈಕಿ ಕೋವಿಡ್ ಪಾಸಿಟಿವ್ ಇರುವ 12 ವಿದ್ಯಾರ್ಥಿಗಳ ಪೈಕಿ 4 ವಿದ್ಯಾರ್ಥಿಗಳಿಗೆ ನೆಗೆಟಿವ್ ವರದಿ ಬಂದಿದೆ. ಪಾಸಿಟಿವ್ ಇರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಿ ಪರೀಕ್ಷೆ ಬರೆಸಲಾಗಿದೆ.

ಜಿಲ್ಲಾ ಕೇಂದ್ರಗಳಿಂದ ಮಾಹಿತಿ ಬಂದಿದ್ದು, ಎಲ್ಲಾ ಕಡೆಯೂ ಯಾವುದೇ ಸಮಸ್ಯೆ ಆಗದೇ ಪರೀಕ್ಷೆ ನಡೆಯುತ್ತಿದೆ. ಕೇರಳದ ಗಡಿ ಜಿಲ್ಲೆಗಳಲ್ಲಿ ಲಾಕ್‌ಡೌನ್ ಮತ್ತು ವೀಕೆಂಡ್ ಕರ್ಫ್ಯೂ ಇದ್ದರೂ ಆ ಜಿಲ್ಲೆಗಳಲ್ಲೂ ಯಾವ ತೊಂದರೆ ಉಂಟಾಗಿಲ್ಲ. ಮಂಗಳೂರು, ಉಡುಪಿ, ಕೊಡಗು, ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ಪರೀಕ್ಷೆ ಸುಸೂತ್ರವಾಗಿ ನಡೆದಿದೆ ಎಂದು ಮಾಹಿತಿ ನೀಡಿದರು.

Comments are closed.