ಮಂಗಳೂರು: ಯುದ್ದಪೀಡಿತ ಉಕ್ರೇನ್ ದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ದೇಶಕ್ಕೆ ಕರೆತರಲು ನಡೆಸುತ್ತಿರುವ ಕೇಂದ್ರ ಸರಕಾರ ಕೈಗೊಂಡಿರುವ ಕಾರ್ಯಾಚರಣೆ ‘ಆಪರೇಷನ್ ಗಂಗಾ’ ದಲ್ಲಿ ಮಂಗಳೂರು ಮೂಲದ ಪೈಲಟ್ ಕ್ಯಾ. ಮೈಕಲ್ ಸಲ್ದಾನ್ಹ ಕಾರ್ಯನಿರ್ವಹಿಸುತ್ತಿದ್ದಾರೆ.
ಮೈಕಲ್ ಅವರು ರೊಮೇನಿಯಾದ ಬುಕಾರೆಸ್ಟ್‌ನಿಂದ ಮುಂಬೈಗೆ 182 ವಿದ್ಯಾರ್ಥಿಗಳನ್ನು ಹೊತ್ತ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಪೈಲಟ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಹಂಗೇರಿಯ ಬುಡಾಪೆಸ್ಟ್‌ನಿಂದ 185 ವಿದ್ಯಾರ್ಥಿಗಳನ್ನು ಕರೆ ತಂದಿದ್ದ ವಿಮಾನಕ್ಕೆ ಕುವೈತ್ ನಿಂದ ಮುಂಬೈವರೆಗೆ ಪೈಲಟ್ ಆಗಿದ್ದರು.
ಬುಡಾಪೆಸ್ಟ್, ಬುಕಾರೆಸ್ಟ್ ಭಾಗಕ್ಕೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮೊದಲ ಬಾರಿಗೆ ತೆರಳಿದೆ. ದಟ್ಟವಾದ ಹಿಮ, ಬೆಟ್ಟ ಗುಡ್ಡ ಪ್ರದೇಶಗಳಿಂದ ಕೂಡಿದ ದೇಶದಲ್ಲಿ ವಿಮಾನ ಚಾಲನೆ ಸವಾಲಾಗಿ ಪರಿಣಮಿಸಿತ್ತು. ಆದಾಗ್ಯೂ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ತಲುಪಿಸಿದ ಬಗ್ಗೆ ಹೆಮ್ಮೆಯಿದೆ ಎಂದು ಮೈಕಲ್ ತಿಳಿಸಿದ್ದಾರೆ.
ಮೈಕಲ್ ಅವರು ಕೊರೊನಾ ಆರಂಭದ ದಿನಗಳಲ್ಲಿ 2020ರ ಮೇ 7ರಂದು ‘ವಂದೇ ಮಾತರಂ’ ಕಾರ್ಯಾಚರಣೆಯಲ್ಲಿಯೂ ಪಾಲ್ಗೊಂಡು ದುಬೈನಿಂದ ಭಾರತೀಯರನ್ನು ಕರೆ ತಂದಿದ್ದರು.
Comments are closed.