(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಬೈಕಿನಲ್ಲಿ ಲಾಂಗ್ ರೈಡ್ ಮಾಡೋದು ಇತ್ತೀಚೆಗೆ ಯುವಕ-ಯುವತಿಯರಿಗೆ ಕ್ರೇಜ್ ಆಗಿದೆ. ಆದರೆ ಯುವತಿಯೊಬ್ಬಳು ಒಬ್ಬಂಟಿಯಾಗಿ ಲಾಂಗ್ ರೈಡ್ ಮಾಡೋದಂದ್ರೆ ಸವಾಲಿನ ಹಾಗೂ ಕಷ್ಟದ ಕೆಲಸ.ಇದನ್ನೆಲ್ಲಾ ಲೆಕ್ಕಿಸದ ಗಟ್ಟಿಗಿತ್ತಿ ಯುವತಿ ಸವಾಲಿನ ಕೆಲಸವನ್ನು ಸಲೀಸಾದ ಕೆಲಸ ಎಂದು ಭಾವಿಸಿ ಬೈಕ್ ಮೂಲಕ ಒಬ್ಬಂಟಿಯಾಗಿ ಕುಂದಾಪುರದಿಂದ ಕಾಶ್ಮೀರಕ್ಕೆ ಸುಮಾರು 6 ಸಾವಿರ ಕೀಲೋಮೀಟರ್ ದೂರ ತೆರಳಿ ವಾಪಾಸ್ ಕುಂಭಾಶಿಗೆ ಮರಳಿದ್ದಾರೆ. ಅವರೇ ಕುಂಭಾಸಿಯ ಸಾಕ್ಷಿ ಹೆಗಡೆ.
ಸಾಕ್ಷಿಯ ತಂದೆ ಮೂಲತಃ ಹೊನ್ನವಾರದ ಶಿವರಾಮ ಹೆಗಡೆ ಹಾಗೂ ಕುಂದಾಪುರ ಮೂಲದ ತಾಯಿ ಪುಷ್ಪಾ ಇವರ 3ನೇ ಮಗಳಾದ ಸಾಕ್ಷಿ ಹೆಗಡೆ ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಕಾಂ ಪದವಿ ವ್ಯಾಸಂಗ ಮಾಡುತ್ತಿದ್ದು ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಕುಂಭಾಸಿಯಲ್ಲಿ ವಾಸವಾಗಿದ್ದಾರೆ. ಬೈಕ್ ನಲ್ಲಿ ಒಬ್ಬಂಟಿಯಾಗಿ ಅಷ್ಟು ಕಿಲೋಮೀಟರ್ ಸಾಗಿದ ಯುವತಿಯರ ಪೈಕಿ ಜಿಲ್ಲೆಯ ಮಟ್ಟಿಗೆ ಈ ಸಾಧನೆಯನ್ನು ಮಾಡಿದವರಲ್ಲಿ ಸಾಕ್ಷಿಯೇ ಮೊದಲಿಗರು.
ಬೈಕ್ ನಲ್ಲಿ ಹಗಲು ರಾತ್ರಿ ದೇಶ ಸುತ್ತೋದು ಸವಾಲಿನ ಕೆಲಸ. ಈ ಸವಾಲಿನ ಕೆಲಸವನ್ನು ಸಲೀಸಾದ ಸಾಧನೆಯ ಹಾದಿ ಮಾಡಿಕೊಂಡ ಈಕೆ ಕೇವಲ 12 ದಿನದಲ್ಲಿ ಕುಂದಾಪುರದಿಂದ ಕಾಶ್ಮೀರಕ್ಕೆ ತೆರಳಿ ಮತ್ತೆ ಕುಂದಾಪುರಕ್ಕೆ ಬೈಕ್ ಮೂಲಕ ವಾಪಾಸ್ಸಾಗಿದ್ದಾರೆ. ದ ಹಾಗೇ ಈಕೆ ಬೈಕ್ ರೈಡ್ ಹೋಗುವ ಜೊತೆಗೆ ಒಂದು ಸದುದ್ದೇಶವೂ ಇತ್ತು. ಸ್ತ್ರೀ-ಪುರುಷ ಬೇದಭಾವ ಜನರ ಮನಸೊಳಗೆ ಮನೆಮಾಡಿದೆ. ದೇಶದಲ್ಲಿನ ಸ್ತ್ರೀ-ಪುರುಷರ ನಡುವಿನ ಅಸಮಾನತೆ ಹೋಗಬೇಕು. ಒಂಟಿ ಮಹಿಳೆ ದೇಶದಾದ್ಯಂತ ಸಂಚರಿಸಲು ಶಕ್ತಳು ಎನ್ನುವುದನ್ನು ಸಾಬೀತುಪಡಿಸಬೇಕೆಂಬ ಇರಾದೆ ಈಕೆಯದ್ದು. ಉತ್ತಮ ಬೈಕ್ ರೈಡರ್ ಆಗಿರುವ ಸಾಕ್ಷಿ ಕಳೆದ ಕೆಲ ತಿಂಗಳ ಹಿಂದೆ ಪಲ್ಸರ್ 125 ಬೈಕ್ ಖರೀದಿಸಿದ್ದು ಈ ರೈಡ್ ಪ್ಲಾನ್ ಮಾಡಿ ಮನೆಯವರ ಸಮ್ಮತಿ ಪಡೆದು ಮೇ.25 ರಂದು ಬೆಳಿಗ್ಗೆ 7.30ಕ್ಕೆ ಕುಂಭಾಸಿ ಮನೆಯಿಂದ ಹೊರಟಿದ್ದರು. 12 ದಿನದ ಲಾಂಗ್ ರೈಡಿನಲ್ಲಿ ಉತ್ತಮ ಅನುಭವ ಇವರಿಗೆ ಸಿಕ್ಕಿದೆಯಂತೆ. ಪೊಲೀಸರು, ಸಾರ್ವಜನಿಕರು ಒಳ್ಳೆ ಸಪೋರ್ಟ್ ಮಾಡಿದ್ದು ನಿತ್ಯ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆ ತನಕ ಬೈಕ್ ರೈಡ್ ಮಾಡಿ ಅಲ್ಲಲ್ಲಿ ಹೋಟೆಲಿನಲ್ಲಿ ವಾಸ್ತವ್ಯ ಮಾಡಿದ್ದರಂತೆ ಸಾಕ್ಷಿ. ಒಂದಷ್ಟು ಕಡೆ ಗೂಗಲ್ ಮ್ಯಾಪ್, ಮತ್ತೆ ಕೆಲವೆಡೆ ಸ್ಥಳೀಯರಿಂದ ರೂಟ್ ಮ್ಯಾಪ್ ಪಡೆದು ರೈಡ್ ಸಾಗಿತ್ತು. ಸೋಮವಾರ ಕಾಶ್ಮೀರ ಪ್ರವಾಸ ಮುಗಿಸಿ ವಾಪಾಸ್ ಆದ ಸಾಕ್ಷಿಯನ್ನು ಬೈಂದೂರು, ಕುಂದಾಪುರದಲ್ಲಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯ್ತು. ಅಲ್ಲದೆ ಕುಂಭಾಸಿ ಗ್ರಾಮಪಂಚಾಯತ್ ವತಿಯಿಂದ ಗೌರವಿಸಲಾಯ್ತು.
ಒಟ್ಟಿನಲ್ಲಿ ಗಂಡಿನಂತೆಯೇ ಹೆಣ್ಣು ಕೂಡ ಒಬ್ಬಂಟಿಯಾಗಿ ದೇಶ ಸುತ್ತಬಲ್ಲಳು ಎನ್ನುವುದಕ್ಕೆ ಈ ಹುಡುಗಿಯೇ ಪ್ರತ್ಯಕ್ಷ ಸಾಕ್ಷಿ!
Comments are closed.