ಕರಾವಳಿ

ಗದ್ದೆಗಿಳಿದು ನಾಟಿ ಮಾಡಿ ಖುಷಿಪಟ್ಟ ವಕ್ವಾಡಿ ಗುರುಕುಲ ಸಂಸ್ಥೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು..!

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ಭಾನುವಾರದ ದಿನ ಶಾಲೆಗೆ ರಜೆಯಿದ್ದು ಮನೆಯಲ್ಲಿ ಆಟ-ಪಾಠದ ಜೊತೆಗೆ ಬ್ಯುಸಿ ಆಗಿರಬೇಕಾಗಿದ್ದ ಮಕ್ಕಳು ಕುಗ್ರಾಮದ ಗದ್ದೆಗೆ ಬಂದು ಕಾಲ‌ಕಳೆದರು. ರಜೆಯ‌ ಮಜವನ್ನು ಸೊಗಸಾಗಿ ಅನುಭವಿಸಿ ಸಂಭ್ರಮಿಸಿದರು.

ನಾಟಿಗೆ ಸೈ ಎಂದ ವಿದ್ಯಾರ್ಥಿಗಳು..!
ಕುಂದಾಪುರ ತಾಲೂಕಿನ ವಕ್ವಾಡಿ ಗುರುಕುಲ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳು ಭಾನುವಾರ ರಜೆಯಿದ್ದರೂ ಶಾಲೆಗೆ ಬಂದು ಅಲ್ಲಿ ಶಾಲಾ ವಾಹನವೇರಿ ನೇರಳಕಟ್ಟೆ ಹಾಗೂ ಆಜ್ರಿ ಮಧ್ಯಭಾಗದ ಬಾಂಡ್ಯ ಎಂಬ ಕುಗ್ರಾಮಕ್ಕೆ ಬಂದಿಳಿದರು. ಶಾಲಾ ಆಡಳಿತ ಮಂಡಳಿ ಆಯೋಜಿಸಿದ ನಾಟಿ ಕಾರ್ಯಕ್ಕಾಗಿ ಈ ಮಕ್ಕಳು ಆಗಮಿಸಿದ್ದು ಅವರನ್ನು ವಿಶೇಷವಾಗಿ ಬರ ಮಾಡಿಕೊಳ್ಳಲಾಯಿತು. ಗದ್ದೆಗೆ ಬಂದ ವಿದ್ಯಾರ್ಥಿಗಳು ಹಿಂದೆ ಮುಂದೆ ನೋಡದೇ ಮೊದಲೇ ಉಳುಮೆ ಮಾಡಿದ್ದ ಗದ್ದೆಗಿಳಿದು ನಾಟಿ ಕಾರ್ಯಕ್ಕೆ ಮುಂದಾದರು. ಸ್ಥಳೀಯರ ಕೃಷಿಕ ಮಹಿಳೆಯರು ಆ ಹೊತ್ತಿನ ಮಟ್ಟಿಗೆ ಈ ವಿದ್ಯಾರ್ಥಿಗಳಿಗೆ ನಾಟಿ ಕೆಲಸಕ್ಕೆ ಗುರುವಾದರು. ನಾವು ಯಾರಿಗೂ ಕಮ್ಮಿ ಇಲ್ಲ ಎಂಬಂತೆ ಹಿರಿಯರು ಹೇಳಿಕೊಟ್ಟಂತೆಯೇ ಕೈಯಲ್ಲಿ ನೇಜಿ ಹಿಡಿದು ಸಾಲು ನಾಟಿ‌ ಮಾಡಿ ಸಂಭ್ರಮಿಸಿದರು.‌ ಮಕ್ಕಳ ಈ‌ ಜೋಷ್ ನೋಡಿ ಅನುಭವಿ ಕೃಷಿಕ ಮಹಿಳೆಯರೇ ಒಂದು ಕ್ಷಣ ದಂಗಾಗುವಂತೆ ಮಕ್ಕಳು ನಾಜೂಕಾಗಿ ನಾಟಿ ಮಾಡಿ ಸೈ ಎನಿಸಿಕೊಂಡರು. ವಿದ್ಯಾರ್ಥಿಗಳ ಜೊತೆ ನಾಟಿ ಕಾರ್ಯದಲ್ಲಿ ಸಂಸ್ಥೆಯ ಶಿಕ್ಷಕರೂ ಕೂಡ ಭಾಗಿಯಾಗಿದ್ದರು. ಕೃಷಿ ರಂಗದತ್ತ ಯುವ ಜನತೆ ಬೆನ್ನು ಹಾಕುತ್ತಿರುವ ಮಧ್ಯೆಯೇ ಗುರುಕುಲ ವಿದ್ಯಾಸಂಸ್ಥೆಯ ಯುವ ವಿದ್ಯಾರ್ಥಿಗಳ ಈ ಕೃಷಿ ಆಸಕ್ತಿ ನಿಜಕ್ಕೂ ಮಾದರಿಯಾಗಿದೆ.

ಹೊಸತನಕ್ಕೆ ಮತ್ತೊಂದು ಹೆಸರು ಗುರುಕುಲ..!
ಬಾಂಡ್ಯ ಎಜುಕೇಶನ್ ಟ್ರಸ್ಟ್ ನ ಗುರುಕುಲ ವಿದ್ಯಾಸಂಸ್ಥೆ ಪ್ರತಿ ವಿಚಾರದಲ್ಲೂ ಹೊಸತನವನ್ನು ಪರಿಚಯಿಸುತ್ತಲಿದ್ದು ಸಂಸ್ಥೆಯ ಜಂಟಿ ಕಾರ್ಯನಿರ್ವಾಹಕರಾದ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ- ಅನುಪಮಾ ಎಸ್. ಶೆಟ್ಟಿಯವರ ಚಿಂತನೆಯಲ್ಲಿ‌ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಕೂಡ ಸಮಾನ ಪ್ರೋತ್ಸಾಹ ನೀಡಲಾಗುತ್ತಿದೆ. ಈ‌ ಪರಿಕಲ್ಪನೆಯಲ್ಲಿಯೇ ವಿದ್ಯಾರ್ಥಿಗಳಲ್ಲಿ ಕೃಷಿ ಆಸಕ್ತಿ ಬೆಳೆಸುವ ನಿಟ್ಟಿನಲ್ಲಿ ಸುಮಾರು 78 ವಿದ್ಯಾರ್ಥಿಗಳನ್ನು ಬಾಂಡ್ಯದ ಕೃಷಿ ಗದ್ದೆಗೆ ಕರೆತಂದು ಕೃಷಿ ಅನುಭವಿಗಳ ಮೂಲಕ ಅವರಿಗೆ ನಾಟಿ ಮಾಡುವುದನ್ನು ಹೇಳಿಕೊಟ್ಟು ಅವರ ಜೊತೆಗೆ ನಾಟಿ ಕಾರ್ಯದಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡಲಾಯಿತು. ವಿದ್ಯಾರ್ಥಿಗಳು ನಾಟಿ ಪ್ರಕ್ರಿಯೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಇವರ ಮುಖಗಳಲ್ಲಿ ಬೇಸಾಯದ ಖುಷಿ ಎದ್ದು ಕಾಣುತ್ತಿತ್ತು. ನೇಜಿ ನೆಟ್ಟು ಯಾವುದೇ ಅಭ್ಯಾಸವಿರದಿದ್ದರೂ ಆಯಾಸವಿಲ್ಲದೆ ಸಾಮೂಹಿಕವಾಗಿ ಗದ್ದೆಯಲ್ಲಿ ಮಜಾ ಉಡಾಯಿಸುತ್ತಾ ಎಕರೆಗಟ್ಟಲೆ ಗದ್ದೆಯನ್ನು ಹಚ್ಚ ಹಸುರಾಗಿಸಿದ್ದು ವಿದ್ಯಾರ್ಥಿಗಳಿಗೆ ಸಾರ್ಥಕತೆಯನ್ನು‌ ಮೂಡಿಸಿತು. ವಿದ್ಯಾರ್ಥಿಗಳಿಗೆ ಇನ್ನಷ್ಟು ಉತ್ಸಾಹ ತುಂಬುವ ನಿಟ್ಟಿನಲ್ಲಿ ಕೆಸರು ಗದ್ದೆ ಓಟ, ಹಗ್ಗಜಗ್ಗಾಟ ಆಯೋಜಿಸಲಾಗಿತ್ತು.

ಕೃಷಿ ಪ್ರಧಾನದ ಕುಟುಂಬ ನಮ್ಮದು. ಭತ್ತದ ಕೃಷಿ ಲಾಭ-ನಷ್ಟದ ದೃಷ್ಠಿಯಿಂದ ಇತ್ತೀಚೆಗೆ ಕಮ್ಮಿಯಾಗುತ್ತಿದೆ. ನಾವು ಕಳೆದ ದಶಕಗಳಿಂದ ರಾಸಾಯನಿಕ ರಹಿತವಾದ ಭತ್ತದ ಕೃಷಿ ಮಾಡುತ್ತಿದ್ದು ನಮ್ಮ‌ ಸಂಸ್ಥೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಕೃಷಿ ವಿಚಾರ ಲ ಭತ್ತದ ಕೃಷಿ ಬಗ್ಗೆ ತಿಳುವಳಿಕೆ ನೀಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ.
– ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ (ಬಾಂಡ್ಯ ಎಜುಕೇಶನ್ ಟ್ರಸ್ಟ್ ಜಂಟಿ ಕಾರ್ಯನಿರ್ವಾಹಕ)

ಶಿಕ್ಷಣದ ಜೊತೆಗೆ ಶಿಕ್ಷಣೇತರ ಚುಟುವಟಿಕೆಗೆ ಗುರುಕುಲ ಸಂಸ್ಥೆ ಪ್ರೋತ್ಸಾಹ ನೀಡುತ್ತಿದೆ. ಭತ್ತ ಎಲ್ಲಿ ಬೆಳೆಯುತ್ತಾರೆ ಎಂಬುದು ಕೆಲವರಿಗೆ ತಿಳಿದಿಲ್ಲ. ಮಕ್ಕಳು ಕೃಷಿ ಮಹತ್ವದ ಬಗ್ಗೆ ತಿಳಿದುಕೊಂಡು ಮುಂದಿನ ದಿನದಲ್ಲಿ ಕೃಷಿ ಅಧಿಕಾರಿಗಳಾದಲ್ಲಿ ಗ್ರಾಮದ ಅಭಿವೃದ್ಧಿ ಸಾಧ್ಯ. ಇಲ್ಲಿ ಬಂದವರಲ್ಲಿ ಹತ್ತು ಜನರಾದರೂ ಆಸಕ್ತಿ ತೋರಿ ಕೃಷಿ ಒಲವು ತೋರಿದರೆ ಇದು ದೇಶಕ್ಕೆ ನೀಡುವ ಕೊಡುಗೆ. ಶಿಕ್ಷಣ ಸಂಸ್ಥೆಯ ಜವಬ್ದಾರಿ ಕೂಡ ಇದಾಗಿದೆ.
-ವಿಶಾಲಾ ಶೆಟ್ಟಿ (ಉಪನ್ಯಾಸಕಿ)

ಶಾಲೆಯಲ್ಲಿ ತರಗತಿಯೊಳಗೆ ಓದುತ್ತೇವೆ. ಆದರೆ ಕೃಷಿ ಬಗ್ಗೆ ತಿಳಿಹೇಳುವ ಮೂಲಕ ನಮ್ಮಲ್ಲಿ ಕೃಷಿ ಆಸಕ್ತಿ‌ ಮೂಡಿಸಲಾಗುತ್ತಿದೆ. ಇದೊಂದು ಖುಷಿಯ ಅನುಭವ.
– ಕಾವ್ಯಾ, ಶ್ರೀನಿತ್, ಆಯುಶ್ (ವಿದ್ಯಾರ್ಥಿಗಳು)

Comments are closed.