ಸಮಾಜದ ಕಡುಬಡವನ ಮಗು ವಿದ್ಯಾವಂತನಾಗಬೇಕು: ಸಚಿವ ಕೋಟ
(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಸಮಾಜ ಕಟ್ಟುವ ಸಂದರ್ಭದಲ್ಲಿ ಯಾವುದೇ ಅಡ್ಡಿ ಆತಂಕಗಳು ಎದುರಾದರೂ ಕೂಡ ಸ್ಪಷ್ಟ ಗುರಿಯೊಂದಿಗೆ ಯಾವುದೇ ಅಭಿಪ್ರಾಯ ಬೇಧವಿಲ್ಲದೆ ಸಮಾನ ಮನಸ್ಕರಾಗಿ ಒಗ್ಗೂಡಿ ಕೆಲಸ ಮಾಡಿದಾಗ ಸಂಘಟನೆಯ ನಿಜಾರ್ಥ ಸಾರ್ಥಕಗೊಳ್ಳುತ್ತದೆ. ಸಮಾಜದ ಕಡುಬಡವರ ಮಗು ವಿದ್ಯಾವಂತನಾಗಬೇಕು ಎಂಬುದು ದೂರದೃಷ್ಟಿಯ ಚಿಂತನೆ. ಈ ನಿಟ್ಟಿನಲ್ಲಿ ಕುಂದಾಪುರ ಬಿಲ್ಲವ ಸಂಘ ಉಡುಪಿ ಜಿಲ್ಲೆಗೆ ಮಾದರಿ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಬಿಲ್ಲವ ಸಮಾಜ ಸೇವಾ ಸಂಘ ಕುಂದಾಪುರದ ವತಿಯಿಂದ ಭಾನುವಾರ ಇಲ್ಲಿನ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ನಡೆದ 30ನೇ ವರ್ಷದ ವಿದ್ಯಾರ್ಥಿ ವೇತನ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಒಂದೊಂದು ಶಾಲೆಗೂ 30 ಕೋಟಿ ವೆಚ್ಚದಲ್ಲಿ ಉಡುಪಿಯ ಕುಂದಾಪುರ, ದ.ಕ, ಉ.ಕ ಜಿಲ್ಲೆ ಸಹಿತ ಶಿವಮೊಗ್ಗದಲ್ಲಿ ಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ವಸತಿ ಶಾಲೆ ಮಾಡಿದ್ದು ಮತ್ತೊಂದು ಶಾಲೆ ತೆರೆಯುವ ಪ್ರಸ್ತಾವನೆಯಿದೆ. ಅವಕಾಶ ಸಿಕ್ಕಿದಲ್ಲಿ 30 ಜಿಲ್ಲೆಗೂ ಈ ನಾರಾಯಣ ಗುರು ಶಾಲೆ ತೆರೆಯುವ ಚಿಂತನೆಯಿದೆ. ಸಾಮಾಜಿಕ ನ್ಯಾಯ, ಸಮಬಾಳು ಎನ್ನುವ ಪರಿಕಲ್ಪನೆಯಡಿ ಹೋರಾಡಿದ ಕೋಟಿಚೆನ್ನಯ್ಯರ ಹೆಸರಿನಲ್ಲಿ ರಾಜ್ಯದಲ್ಲಿ ಸೈನಿಕರ ತರಬೇತಿ ಶಿಬಿರ ಉಡುಪಿಯಲ್ಲಿ ಪ್ರಾರಂಭವಾಗಲಿದೆ.
ಬಿಲ್ಲವ ಸಮಾಜದ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸ ಪಡೆಯಲು ಆರ್ಥಿಕ ಶಕ್ತಿ ಬೇಕು. ರಾಜ್ಯದಲ್ಲಿ ಹಿಂದುಳಿದ ಮತ್ತು ಸಮಾಜ ಕಲ್ಯಾಣ ಇಲಾಖೆಯ ಜವಾಬ್ದಾರಿಯಿದ್ದು ಕೊರೋನಾ ಕಾರಣದಿಂದ ವಿದೇಶ ವ್ಯಾಸಂಗಕ್ಕೆ ತೆರಳುವ, ಪಿ.ಎಚ್.ಡಿ, ವಕೀಲ ವೃತ್ತಿ ವ್ಯಾಸಂಗ, ಹೊಲಿಗೆ ತರಬೇತಿ ಮಾಡುವ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಹಣ ನೀಡದ ಬಗ್ಗೆ ಮುಖ್ಯಮಂತ್ರಿಗಳ ಬಗ್ಗೆ ಮಾತನಾಡಿ ಸ್ಥಗಿತ ವಾದ ಯೋಹನೆಗಳಿಗೆ ಮತ್ತೆ ಹಣ ಬಿಡುಗಡೆ ಮಾಡಲು ಮನವಿ ನೀಡಲಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳಾದ ನಾವು ಒಂದೆ ಸಮಾಜಕ್ಕೆ ಕೆಲಸ ಮಾಡಲು ಆಗುವುದಿಲ್ಲ. ಎಲ್ಲಾ ಸಮಾಜವನ್ನು ಒಟ್ಟಾಗಿ ಕೊಂಡೊಯ್ಯಬೇಕಾದ ಜವಬ್ದಾರಿಯಿರುತ್ತದೆ. ಎಲ್ಲಾ ಸಮಾಜದ ಜೊತೆ ಬಿಲ್ಲವ ಸಮಾಜಕ್ಕೂ ಕೂಡ ಅನುಕೂಲ ಮಾಡಿಕೊಡುವ ಕೆಲಸ ಮಾಡಲಾಗುತ್ತಿದೆ. ಈಡಿಗ, ಬಿಲ್ಲವ ಅಭಿವೃದ್ಧಿ ನಿಗಮದ ಬಗ್ಗೆ ಎರಡು ಬಾರಿ ಸಿಎಂ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದರು.
ಕುಂದಾಪುರ ಶ್ರೀ ನಾರಾಯಣಗುರು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ದತ್ತಿ ಸಂಸ್ಥೆಯ ಅಧ್ಯಕ್ಷ ಸುರೇಶ್ ಎಸ್. ಪೂಜಾರಿ ದೀಪ ಪ್ರಜ್ವಲನೆಗೈದರು.
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಮಾಜದ ಸಾಧಕರನ್ನು ಸನ್ಮಾನಿಸಿದ ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ಸಮಾಜದ ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಸಂಘಟನೆಯ ಜೊತೆಗಿದ್ದು ಮುಂದಿನ ದಿನದಲ್ಲಿ ಯುವ ಪೀಳಿಗೆ ಸಮಾಜ ಕಟ್ಟುವ ಕಾರ್ಯಕ್ಕೆ ಮುಂದಾಗಬೇಕು. ಯಾವುದೇ ಅಪಪ್ರಚಾರಗಳಿಗೆ ಕಿವಿಗೊಡದೇ ಸಮಾಜದ ಸಂಘಟನೆ ಜೊತೆಗಿದ್ದು ಅಗತ್ಯ ಸಹಕಾರ ಪಡೆದು ಜೀವನದಲ್ಲಿ ಯಶಸ್ಸು ಕಾಣಬೇಕು. ಸಮಾಜದ ಯುವ ಪ್ರತಿಭೆಗಳನ್ನು ಗುರುತಿಸಿದ್ದು ನಿಜಕ್ಕೂ ಶ್ಲಾಘನೀಯ. ಅಶೋಕ್ ಪೂಜಾರಿ ನೇತೃತ್ವದ ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘವು ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಮಾದರಿಯಾಗಿದೆ ಎಂದರು.
ಇದೇ ಸಂದರ್ಭ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟು ಗುರುರಾಜ್ ಪೂಜಾರಿ, ಯಕ್ಷಗಾನ ಕಲಾವಿದ ಭಾಸ್ಕರ ಪೂಜಾರಿ ನಾಯ್ಕನಕಟ್ಟೆ ಅವರನ್ನು ಸನ್ಮಾನಿಸಲಾಯಿತು. 1100ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.
ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾಭಿಮಾನಿಗಳ ಸಹಕಾರದಲ್ಲಿ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಜವಬ್ದಾರಿ ನಮ್ಮದು. ರಾಜ್ಯದಲ್ಲಿ 65 ಲಕ್ಷಕ್ಕೂ ಅಧಿಕ ಸಮಾಜಬಾಂಧವರಿದ್ದು ಆರ್ಥಿಕ ಸಮಸ್ಯೆಯಿಂದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ತೊಡಗಿಸಿಕೊಳ್ಳಲು ಅಡಚಣೆಯಾಗುತ್ತಿದೆ. ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ತರಬೇತಿ, ಮಾರ್ಗದರ್ಶನ ನೀಡಿ ಮುಂದಿನ 5 ವರ್ಷದಲ್ಲಿ 10ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯಬೇಕು. ಬಿಲ್ಲವ ಸಮಾಜ ದೊಡ್ಡದಾಗಿದ್ದರೂ ಕೂಡ ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದಿದ್ದು ಸಂಘಟನೆ ಬಲಪಡಿಸಿ ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಒಗ್ಗಟ್ಟಿನ ಹೋರಾಟ ಅಗತ್ಯ ಎಂದರು.
ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಡಾ. ಗೋವಿಂದ ಬಾಬು ಪೂಜಾರಿ, ವಿಜಯ್ ಪಿ. ಪೂಜಾರಿ ಬಳ್ಕೂರು, ಧೀರಜ್ ಹೆಜಮಾಡಿ, ಶ್ರೀ ನಾರಾಯಣ ಗುರು ಯುವಕಮಂಡಲದ ಅಧ್ಯಕ್ಷ ಅಜಿತ್ ಪೂಬಾರಿ ರಂಗನಹಿತ್ಲು, ಬಿಲ್ಲವ ಮಹಿಳಾ ಘಟಕದ ಅಧ್ಯಕ್ಷೆ ಸುಮನಾ ಬಿದ್ಕಲಕಟ್ಟೆ ಇದ್ದರು.
ಬಿಲ್ಲವ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್ ಪೂಜಾರಿ ವಿಠಲವಾಡಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಕೋಟ ಕಾರಂತ ಪ್ರತಿಷ್ಠಾನದ ನರೇಂದ್ರ ಕುಮಾರ್ ಕೋಟ, ಸತೀಶ್ ವಡ್ಡರ್ಸೆ ಕಾರ್ಯಕ್ರಮ ನಿರೂಪಿಸಿ, ಶ್ರೀ ನಾರಾಯಣ ಗುರು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ದತ್ತಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಭಾಸ್ಕರ ವಿಠಲವಾಡಿ ವಂದಿಸಿದರು.
Comments are closed.