(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಜ್ಞಾನ ದೇಗುಲವಾದ ಕನ್ನಡ ಮಾಧ್ಯಮ ಸಂಸ್ಥೆಗಳು ಕಳೆಗುಂದುತ್ತಿರುವುದು ಬೇಸರದ ವಿಚಾರ. ಕನ್ನಡ ಶಾಲೆಗಳ ಉಳಿವು ಇಂದಿನ ಆಗತ್ಯ ವಿಚಾರಗಳಲ್ಲೊಂದಾಗಿದೆ. ಸರಕಾರಗಳು ಇರುವ ಶಾಲೆಗಳನ್ನು ಉಳಿಸಿಕೊಂಡು ಅದನ್ನು ಉನ್ನತೀಕರಣಗೊಳಿಸಬೇಕಾದ ಅನಿವಾರ್ಯತೆಯಿದೆ. ಆದರೆ ತರಗತಿಗೊಬ್ಬರು ಶಿಕ್ಷಕರನ್ನು ನೀಡುವ ಯೋಗ್ಯತೆಯಿಲ್ಲದ ಸರ್ಕಾರದಿಂದ ಪ್ರಗತಿ ಹೇಗೆ ಸಾಧ್ಯ ಎಂದು ಮೂಡಬಿದಿರೆ ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆಗಳ ಪ್ರವರ್ತಕ ಡಾ. ಎಂ ಮೋಹನ್ ಆಳ್ವ ಪ್ರಶ್ನಿಸಿದರು.
ಗುರುಕುಲ ಪಬ್ಲಿಕ್ ಶಾಲೆ ವಕ್ವಾಡಿ ಇವರಿಂದ ದತ್ತು ಸ್ವೀಕೃತವಾದ ಕುಂದಾಪುರ ತಾಲೂಕಿನ ಕೊಡ್ಲಾಡಿ ಬಾಂಡ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗುರುಕುಲ ಸಂಸ್ಥೆಯಿಂದ ಕೊಡುಗೆಯಾಗಿ ನೀಡಿದ ನೂತನ ಶಾಲಾ ಕಟ್ಟಡ ‘ಕದಂಬ’ ವನ್ನು ಜ.7 ರಂದು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಪೂರ್ವಜರು ಶೈಕ್ಷಣಿಕ ಚಿಂತನೆಯೊಂದಿಗೆ ಕಟ್ಟಿದ ಕನ್ನಡ ಶಾಲೆಗಳನ್ನು ಕಾಲಕಾಲಕ್ಕೆ ಸರಿಯಾಗಿ ಉನ್ತೀಕರಣಗೊಳಿಸಬೇಕು.ಸಮಾಜದ ಪರಿಕಲ್ಪನೆ ಕೇವಲ ಸರಕಾರಕ್ಕೆ ಮಾತ್ರವಲ್ಲ, ಎಲ್ಲಾ ಸ್ತರದ ಜನರಲ್ಲಿರಬೇಕು. ಸಂಘಜೀವಿಯಾದ ಮಾನವನು ಸಮಾಜದಿಂದ ಸಂಪತ್ತು ಪಡೆಯುವ ಕಾರಣ ಬದ್ದತೆ ಇರಬೇಕು. ಸಮಾಜದ ಪರಿಕಲ್ಪನೆ ಜೊತೆಗೆ ತನದನೂರ ಶಾಲಾ ಅಭಿವೃದ್ಧಿಗೆ ಮುಂದಾಗಿರುವ ಗುರುಕುಲ ಸಂಸ್ಥೆಯ ಕಾರ್ಯ ಮಾದರಿಯಾಗಿದ್ದು ನಾಡಿಗೆ ಪ್ರಮುಖ ಸಂದೇಶ ನೀಡಿದೆ ಎಂದರು.
ಗುರುಕುಲ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಸದಸ್ಯ ಕೆ.ಸಿ ರಾಜೇಶ್ ಪ್ರಸ್ತಾವನೆಗೈದು, ಗುರುಕುಲ ಎನ್ನುವ ಭವ್ಯ ಪರಂಪರೆಯನ್ನು ಹೊಂದಿದ ರಾಷ್ಟ್ರದಲ್ಲಿ ಶೈಕ್ಷಣಿಕ ವಿಚಾರದಾರೆಗಳು ಮುಂದುವರೆದು ಶಿಕ್ಷಣ ಸಂಸ್ಥೆ ಪ್ರಕೃತಿ ಮಡಿಲಿನಲ್ಲಿ ಸೊಗಸಾಗಿ ನಿಲ್ಲಬೇಕು ಎಂಬ ದೂರದೃಷ್ಟಿ ಚಿಂತನೆಯೊಂದಿಗೆ ಗುರುಕುಲ ವಿದ್ಯಾಸಂಸ್ಥೆ ಹುಟ್ಟಿಕೊಂಡಿತ್ತು. ನಂತರದ ದಿನಗಳಲ್ಲಿ ಇಲ್ಲಿನ ಜಂಟಿ ಕಾರ್ಯನಿರ್ವಾಹಕ ದಂಪತಿಗಳಾದ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿ, ಅನುಪಮಾ ಶೆಟ್ಟಿಯವರು ತಮ್ಮ ಹುಟ್ಟೂರಿನ ಸರಕಾರಿ ಶಾಲೆ ಅಭಿವೃದ್ಧಿ ಬಗ್ಗೆ ನಿರ್ಧರಿಸಿ, ಈ ಕನ್ನಡ ಶಾಲೆಯನ್ನು ಉಳಿಸಿಕೊಂಡು, ಪ್ರಬುದ್ದತೆಗಾಗಿ ಇಂಗ್ಲೀಷ್ ಪಾಠಶಾಲೆ ತೆರಯಲು ಚಿಂತನೆಯೊಂದಿಗೆ ದತ್ತು ಸ್ವೀಕರಿಸಿ, ಉತ್ತಮ ಶಿಕ್ಷಕರು, ಶಾಲಾ ವಾಹನ ವ್ಯವಸ್ಥೆ ಮಾಡಿಕೊಂಡು ಸ್ಥಳೀಯರ ಸಹಕಾರದಲ್ಲಿ ಮುಂದುವರೆಯಲಾಗುತ್ತದೆ. ಬಳಿಕ ಹಿರಿಯ ಪ್ರಾಥಮಿಕ ಶಾಲೆ ಎಂಬುದು ಮತ್ತು ದತ್ತು ಸ್ವೀಕಾರದ ಅನುಮೋದನೆಗೆ ಹಲವಷ್ಟು ಸವಾಲುಗಳು ಮುಂದಾದಾರೂ ಧೃತಿಗೆಡದೆ ಈ ಕೆಲಸವನ್ನು ಸಾಧಿಸಲಾಗಿದೆ. ಇಲ್ಲಿ ಕಟ್ಟಡಗಳ ಕೊರತೆ ಕಾಣಿಣಿಕೊಂಡಾಗ ತಾಯಿಯವರ ಹೆಸರಿನಲ್ಲಿ ಸಭಾಭವನ ನಿರ್ಮಾಣ, ದಾನಿಗಳ ಸಹಕಾರದಲ್ಲಿ ಶಾಲಾ ಕ್ರೀಡಾಂಗಣ, ವಿವಿಧ ಪರಿಕರಗಳ ಕೊಡುಗೆ ನೀಡಲಾಯಿತು. ಇದೀಗಾ ಹೊಸ ಕಟ್ಟಡಕ್ಕೆ ಕದಂಬ ಎಂದು ಹೆಸರಿಟ್ಟಿದ್ದು ಅಪ್ರತಿಮ ಪರಂಪರೆಯ ಜೊತೆಗೆ ಕದಂಬನಂತೆ ಹೆಸರುಮಾಡಬೇಕು ಎಂಬುದು ಇದರ ಉದ್ದೇಶ ಎಂದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗ ಕಾರ್ಯವಾಹ ಡಾ. ವಾದಿರಾಜ ಗೋಪಾಡಿ ಮಾತನಾಡಿ, ಇಂದಿನ ಸಾಧಕರ ಪಟ್ಟಿಯಲ್ಲಿ ಸಿಗುವ ಬಹುತೇಕರು ಗ್ರಾಮೀಣ ಭಾಗದ ಕನ್ನಡ ಮಾಧ್ಯಮದ ಶಾಲೆಯಲ್ಲಿ ಓದಿದವರಾಗಿದ್ದಾರೆ. ಕನ್ನಡ ಎನ್ನುವುದು ಕೇವಲ ಭಾಷೆಯಾಗಿರದೇ ಸಂಸ್ಕೃತಿಯ ಪ್ರತೀಕವಾಗಿದೆ. ಭಾವನೆ ಸಹಿತ ಅನೇಕ ಸಂಗತಿಗಳನ್ನು ವ್ಯಕ್ತಪಡಿಸಲು ಮಾತೃಭಾಷೆಯಾದ ಕನ್ನಡದಿಂದ ಸಾಧ್ಯ. ಈ ನಿಟ್ಟಿನಲ್ಲಿ ಗುರುಕುಲ ವಿದ್ಯಾಸಂಸ್ಥೆಯು ಕನ್ನಡ ಶಾಲೆಗೆ ನೀಡುತ್ತಿರುವ ಕೊಡುಗೆ ಶ್ಲಾಘನೀಯ. ನಾಗರಿಕರು ಈ ಕಾರ್ಯದ ಜೊತೆ ಕೈಗೂಡಿಸಿ ವಿಶ್ವಾಸ ತುಂಬಬೇಕು. ಇಂದಿನ ದಿವಸದಲ್ಲಿ ಶಿಕ್ಷಣ ಮಾರಾಟದ ವಸ್ತುವಾಗುತ್ತಿರುವುದು ಖೇಧಕರ. ಶಿಕ್ಷಣ ನಾಲ್ಕು ಗೋಡೆಗೆ ಸೀಮಿತವಾಗಿರಬಾರದು ಎಂದ ಅವರು ರಾಜರ ಆಳ್ವಿಕೆಯಲ್ಲಿ ಸಮಾಜದ ಮೇಲೆ ಯಾವುದೇ ದುಷ್ಪರಿಣಾಮಗಳಿರಲಿಲ್ಲ. ಆದರೆ ರಾಜಕೀಯ ವ್ಯವಸ್ಥೆಯಲ್ಲಿ ಅದು ಬದಲಾಗಿದೆ ಎಂದು ಮಾರ್ಮಿಕವಾಗಿ ನುಡಿದರು.
ಇದೇ ಸಂದರ್ಭ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಿತು. ನಿವೃತ್ತ ಮುಖ್ಯೋಪಾಧ್ಯಾಯ ಸಂತೋಷ ಕುಮಾರ್ ಶೆಟ್ಟಿ ಅಂಪಾರು ಅವರನ್ನು ಸನ್ಮಾನಿಸಲಾಯಿತು.
ಕುಂದಾಪುರದ ಬಾಂಡ್ಯಾ ಎಜ್ಯುಕೇಶನಲ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಬಿ. ಅಪ್ಪಣ್ಣ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಹಿರಿಯರಾದ ಬಾಂಡ್ಯ ಸುಬ್ಬಣ್ಣ ಶೆಟ್ಟಿ, ವಕ್ವಾಡಿ ಗುರುಕುಲ ಸಮೂಹ ಶಿಕ್ಷಣ ಸಂಸ್ಥೆಗಳ ಜಂಟಿ ಕಾರ್ಯನಿರ್ವಾಹಕರಾದ ಸುಭಾಶ್ಚಂದ್ರ ಶೆಟ್ಟಿ ಬಾಂಡ್ಯ, ಅನುಪಮಾ ಎಸ್. ಶೆಟ್ಟಿ ಇದ್ದರು.
ಗುರುಕುಲ ಪಬ್ಲಿಕ್ ಶಾಲೆಯ ಸಂಯೋಜಕಿ ವಿಶಾಲಾ ಶೆಟ್ಟಿ ನಿರೂಪಿಸಿದರು. ಕೊಡ್ಲಾಡಿ ಬಾಂಡ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಸಂತೋಷ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಶಾಲೆ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಸಹಶಿಕ್ಷಕಿ ಆಶ್ರಿತಾ ವಂದಿಸಿದರು.
Comments are closed.