ಕುಂದಾಪುರ: ಸರಕಾರಿ ಪದವಿ ಪೂರ್ವ ಕಾಲೇಜು ಬೋರ್ಡ್ ಹೈಸ್ಕೂಲ್ ಕುಂದಾಪುರ ಇಲ್ಲಿನ ಎನ್ಎಸ್ಎಸ್ ಘಟಕದ ಸ್ವಯಂಸೇವಕ ವಿದ್ಯಾರ್ಥಿಗಳು ಕುಂದಾಪುರದ ಪ್ರಧಾನ ಅಂಚೆ ಕಚೇರಿಗೆ ಭೇಟಿ ನೀಡಿ ಅಲ್ಲಿನ ಕಾರ್ಯವೈಖರಿ ಅಂಚೆ ಕಚೇರಿಯ ಎಟಿಎಂ ಕಾರ್ಡು, ಆನ್ಲೈನ್ ಸೇವೆ ಕಂಡು ಅಂಚೆ ಕಚೇರಿ ಇಷ್ಟೊಂದು ಆಧುನಿಕರಣ ಗೊಂಡಿರುವುದನ್ನು ಕಂಡು ಬೆರಗಾದರು.
ಅಂಚೆ ಕಚೇರಿಯ ಸಹಾಯಕ ಅಂಚೆ ಅಧೀಕ್ಷಕ ಪಿ.ಎನ್ ಸತೀಶ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಆಧುನಿಕ ಯುಗದಲ್ಲಿ ಸಾಮಾಜಿಕ ಜಾಲತಾಣಗಳ ಮಾರು ಹೋಗಿರುವ ಯುವ ಸಮುದಾಯ ಅಂಚೆ ಕಚೇರಿಯ ಕಾರ್ಯವೈಖರಿಯ ಬಗ್ಗೆ ಅರಿಯದಾಗಿದ್ದಾರೆ. ಆಧುನಿಕತೆ ಸಾಕಷ್ಟು ಬೆಳೆದಿದ್ದರೂ ನಮ್ಮ ಹಿರಿಯರು ಇಂದಿಗೂ ತಮ್ಮ ವೃದ್ಧಾಪ್ಯ ವೇತನ ವಿಧವಾ ವೇತನಗಳಿಗಾಗಿ ಅಂಚೆಯಣ್ಣನ ಬರುವಿಕೆಗಾಗಿ ಕಾಯುತ್ತಾರೆ. ಇಂದು ಕಡಿಮೆಯಾಗಿದ್ದರೂ ಕೂಡ ಅಂಚೆ ಸಿಬ್ಬಂದಿ ಸಾರ್ವಜನಿಕರೊಂದಿಗೆ ತಮ್ಮ ಅವಿನಾಭಾವ ಸಂಬಂಧ ಹಾಗೂ ಅಂಚೆಯು ತನ್ನ ಮಹತ್ವವನ್ನು ಹಾಗೆಯೇ ಉಳಿಸಿಕೊಂಡು ಬಂದಿದೆ ಎಂದರು
ಅಂಚೆ ಪಾಲಕ ಮಂಜುನಾಥ ಎಚ್. ಅಂಚೆ ಕಚೇರಿಯಲ್ಲಿ ದೊರೆಯುವ ವಿವಿಧ ಉಳಿತಾಯ ಖಾತೆಗಳು ಜೀವ ವಿಮಾ ಸೇವೆಗಳ ಬಗ್ಗೆ ಮಾಹಿತಿ ನೀಡಿದರು. ಸಹಾಯಕ ಅಂಚೆ ಪಾಲಕರಾದ ಸೌಮ್ಯಶ್ರೀ ಅವರು ವಿದ್ಯಾರ್ಥಿಗಳಿಗೆ ಅಂಚೆ ಕಚೇರಿಯ ವಿವಿಧ ವಿಭಾಗಗಳನ್ನು ಪರಿಚಯಿಸಿದರು.
ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಉದಯ ಮಡಿವಾಳ ಎಂ. ಮಾತನಾಡಿ, ಇಂದಿನ ಮೊಬೈಲ್ ಕಂಪ್ಯೂಟರ್ ಯುಗದಲ್ಲಿ ಅಂಚೆ ಕಚೇರಿಯ ಕಾರ್ಯ ನಿರ್ವಹಣೆಯ ಬಗ್ಗೆ ಮಾಹಿತಿ ತಿಳಿಯುವಲ್ಲಿ ಈ ಭೇಟಿ ಫಲಪ್ರದವಾಗಿದೆ ಎಂದರು
ಸಭೆಯಲ್ಲಿ ಅಂಚೆ ನಿರೀಕ್ಷಕರಾದ ಶ್ರೀರಾಮಚಂದ್ರ, ಶಿಕ್ಷಕಿ ಸವಿತಾ ಶಿಕ್ಷಕ ಅರುಣ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
Comments are closed.