ಕುಂದಾಪುರ: 1906 ರಲ್ಲಿ ಪ್ರಾರಂಭವಾದ ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಯು ವಿವಿಧ ಅಂಗ ಸಂಸ್ಥೆಗಳನ್ನು ಹೊಂದಿದೆ. ಅದರಲ್ಲಿ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜು ಒಂದಾಗಿದ್ದು ಇದರ ನೇತೃತ್ವದಲ್ಲಿ ಉದ್ಯೋಗ ಮೇಳವನ್ನು ಫೆ.22 ಶನಿವಾರದಂದು ಕೋಡಿ ಬ್ಯಾರೀಸ್ ನಾಲೆಡ್ಜ್ ಕ್ಯಾಂಪಸ್‌ನಲ್ಲಿ ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಪ್ರಸ್ತುತ ಅಧ್ಯಕ್ಷರಾದ ಹಾಜಿ ಕೆ.ಎಂ ಅಬ್ದುಲ್ ರೆಹಮಾನ್ ಬ್ಯಾರಿ ಹೇಳಿದರು.
ಕುಂದಾಪುರದ ಪ್ರೆಸ್ ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಪ್ರಸ್ತುತ ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಕ್ರಾಂತಿಯಾಗಿದ್ದು, ವಿವಿಧ ಪದವಿಗಳು ಆಧುನಿಕತೆಗೆ ತಕ್ಕ ಹಾಗೆ ವಿಷಯಗಳನ್ನೊಳಗೊಂಡಂತೆ ಹೊಸ ಹುದ್ದೆಗಳು ಸೃಷ್ಟಿಯಾಗಿ ಮಕ್ಕಳ ಬುದ್ಧಿಶಕ್ತಿಯು ಕೂಡ ನವೀನತೆಯಿಂದ ಕೂಡಿದೆ. ಶಾಲಾ ಕಾಲೇಜುಗಳು ಕೇವಲ ಪದವಿಯನ್ನು ಮಾತ್ರ ನೀಡಿದರೆ ಸಾಲದು. ಅದರ ಜೊತೆಗೆ ಮುಂದೆ ಬದುಕನ್ನು ಕಟ್ಟಿಕೊಳ್ಳುವಂತಹ ಉದ್ಯೋಗವನ್ನು ಕೂಡ ಕಲ್ಪಿಸುವುದು ಅಷ್ಟೇ ಮುಖ್ಯ. ಒಬ್ಬ ಪದವೀಧರ ಉದ್ಯೋಗವನ್ನು ಪಡೆದು ಕೇವಲ ಅವರ ಕುಟುಂಬಕ್ಕೆ ಆರ್ಥಿಕ ಭದ್ರತೆಯನ್ನು ಪಡೆಯುವ ಜೊತೆಗೆ ರಾಜ್ಯ ರಾಷ್ಟ್ರಮಟ್ಟದ ಆರ್ಥಿಕ ವ್ಯವಸ್ಥೆ ಮೇಲ್ಸ್ತರಕ್ಕೆ ಕೊಂಡೊಯ್ಯಲು ಶ್ರಮಿಸುತ್ತಾನೆ. ಸಂಸ್ಥೆಯ ಸಂಚಾಲಕರಾದ ಸೈಯದ್ ಮೊಹಮ್ಮದ್ ಬ್ಯಾರಿಯವರ ಆಶಯದಂತೆ ಪ್ರತಿಭಾನ್ವಿತ ಮಕ್ಕಳಿಗೆ ಉದ್ಯೋಗವನ್ನು ಕಲ್ಪಿಸುವುದು ಬ್ಯಾರೀಸ್ ಸಂಸ್ಥೆಯ ಮುಖ್ಯ ಉದ್ದೇಶ. ಈ ಹಿನ್ನೆಲೆಯಲ್ಲಿ ಬ್ಯಾರಿಸ್ ನಾಲೆಡ್ಜ್ ಕ್ಯಾಂಪಸ್ ನಲ್ಲಿ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜು ವತಿಯಿಂದ ಕೇವಲ ನಮ್ಮಲ್ಲಿ ಕಲಿತ ಮಕ್ಕಳಿಗೆ ಮಾತ್ರ ಉದ್ಯೋಗದ ಅವಕಾಶಗಳನ್ನು ಕಲ್ಪಿಸದೆ ನಮ್ಮ ಕುಂದಾಪುರ, ಉಡುಪಿ ಮತ್ತು ಇತರ ಕರಾವಳಿ ಭಾಗಗಳಲ್ಲಿನ ವಿದ್ಯಾರ್ಥಿಗಳಿಗೂ ಕೂಡ ವಿವಿಧ ಕಂಪನಿಗಳಿಂದ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಈ ಉದ್ಯೋಗ ಮೇಳವನ್ನು ಮಾಡಲಾಗುತ್ತಿದೆ ಎಂದರು.
ಉದ್ಯೋಗ ಮೇಳವನ್ನು ಕುಂದಾಪುರ ಶಾಸಕ ಸದಸ್ಯ ಎ. ಕಿರಣ್ ಕುಮಾರ್ ಕೊಡ್ಗಿ ಉದ್ಘಾಟಿಸಲಿದ್ದು ಸ್ಥಳೀಯ ಪ್ರತಿಷ್ಠಿತ ಉದ್ಯಮಿಗಳು ಭಾಗವಹಿಸಲಿದ್ದಾರೆ. ಈಗಾಗಾಲೇ 28 ಪ್ರಮುಖ ಕಂಪೆನಿಗಳು ಹೆಸರು ನೊಂದಾಯಿಸಿದ್ದು ಇನ್ನು 3 ಕಂಪೆನಿಗಳು ಬರುವ ನಿರೀಕ್ಷೆಯಿದೆ. 1500 ಕ್ಕೂ ಅಧಿಕ ಉದ್ಯೋಗಾಂಕ್ಷಿಗಳು ಭಾಗವಹಿಸುವ ನಿರೀಕ್ಷೆಯಿದ್ದು ಸ್ಥಳದಲ್ಲೇ ನೋಂದಣಿ ಮಾಡಿಕೊಳ್ಳುವ ವ್ಯವಸ್ಥೆ ಕಲ್ಪಿಸಲಾಗಿದೆ. ಅಂತಿಮ ವರ್ಷದ ವಿದ್ಯಾರ್ಥಿಗಳಿಂದ ಹಿಡಿದು 38 ವರ್ಷ ವಯೋಮಾನದೊಳಗಿನವರು ಸದುಪಯೋಗ ಪಡೆಯಬಹುದು ಎಂದವರು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕೋಡಿ ಬ್ಯಾರೀಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಶಬೀನಾ ಎಚ್., ಬಿ.ಎಡ್ ಕಾಲೇಜು ಪ್ರಾಂಶುಪಾಲ ಸಿದ್ದಪ್ಪ ಕೆ.ಎಸ್., ಉಪಪ್ರಾಂಶುಪಾಲ ಪ್ರವೀಣ್ ಕುಮಾರ್ ಕೆ.ಪಿ., ಪಿಯು ಕಾಲೇಜಿನ ಪ್ರಾಂಶುಪಾಲೆ ಅಶ್ವಿನಿ ಶೆಟ್ಟಿ ಇದ್ದರು.
*ಉದ್ಯೋಗ ಮೇಳದ ಉದ್ದೇಶ:*
>ಎಸ್‌ಎಸ್‌ಎಲ್‌ಸಿ , ಪಿಯುಸಿ ಯಾವುದೇ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸುವುದು.
>ವಿವಿಧ ಉದ್ಯಮ ಕಂಪೆನಿಗಳನ್ನು ಹಾಗೂ ಉದ್ಯೋಗದ ಆಕಾಂಕ್ಷಿಗಳನ್ನು ಒಂದು ಕಡೆ ಸೇರಿಸುವುದು.
>ಕರಾವಳಿ ಭಾಗದ ಎಸ್.ಎಸ್.ಎಲ್.ಸಿ., ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಪೂರೈಸಿದ ವಿದ್ಯಾರ್ಥಿಗಳಿಗೆ ಉದ್ಯೋಗ ಕಲ್ಪಿಸುವುದು.
>ವಿವಿಧ ಕಂಪೆನಿಗಳು ಒಂದೇ ಕಡೆ ಸೇರುವುದರಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುವುದು.
Comments are closed.