Uncategorized

ಸಾಲ ಮನ್ನಾ ಬಿಡಿ; ಬೆಳೆಗೆ ಕರೆಂಟ್‌, ಬೆಲೆ ಕೊಡಿ

Pinterest LinkedIn Tumblr

ಬೆಂಗಳೂರು: ಚುನಾವಣೆ ದಿನಾಂಕ ಘೋಷಣೆಯಾಗಿದೆ. ರಾಜಕೀಯ ಪಕ್ಷಗಳು ಪ್ರಣಾಳಿಕೆ ಸಿದ್ಧಗೊಳ್ಳುವ ಸಮಯವಿದು. ಈ ವೇಳೆಯಲ್ಲೇ ರಾಜ್ಯದ ಕೃಷಿಕರ ಜಾಲತಾಣದ ಗುಂಪೊಂದು ತಮ್ಮ ಬೇಡಿಕೆಯ ಪಟ್ಟಿಯನ್ನು ರಾಜಕೀಯ ಪಕ್ಷಗಳ ಮುಂದಿಟ್ಟಿದೆ. ಕೃಷಿಕರೇ ಮುಂದಾಗಿ ಪಕ್ಷಗಳಿಗೆ ತಮ್ಮ ಅಹವಾಲು ಸಲ್ಲಿಸುತ್ತಿರುವುದು ಒಂದು ಹೊಸ ಬೆಳವಣಿಗೆಯಾಗಿದೆ.

ಫೇಸ್‌ಬುಕ್‌ನ ಅಗ್ರಿಕಲ್ಚರಿಸ್ಟ್‌ (Agriculturist) ಎಂಬ ಗ್ರೂಪ್‌ನ ಕೃಷಿಕ ಸದಸ್ಯರು ಪರಸ್ಪರ ಚರ್ಚಿಸಿ 16 ಅಂಶಗಳ ಬೇಡಿಕೆ ಪಟ್ಟಿಯೊಂದನ್ನು ಸಿದ್ಧಪಡಿಸಿದ್ದಾರೆ. ಇದನ್ನು ಎಲ್ಲ ಪ್ರಮುಖ ರಾಜಕೀಯ ಪಕ್ಷಗಳ ಅಧ್ಯಕ್ಷರಿಗೂ ರವಾನಿಸಲಾಗಿದೆ. ಕೃಷಿಗೆ ಬೆಂಬಲ ಎಂಬ ಮಾತು ಬಂದ ತಕ್ಷಣ ರಾಜಕೀಯ ಪಕ್ಷಗಳು ಕೃಷಿ ಸಾಲ ಮನ್ನಾ ಎಂಬ ಘೋಷಣೆ ಕೂಗುತ್ತವೆ.

ನಿಜವಾಗಿಯೂ ರೈತನಿಗೆ ಇದು ಬೇಕಾಗಿದೆಯೇ? ಆಸಕ್ತಿಯ ಸಂಗತಿ ಎಂದರೆ, ಲಕ್ಷಾಂತರ ಕೃಷಿಕರನ್ನು ಒಳಗೊಂಡಿರುವ ಈ ಫೇಸ್‌ಬುಕ್‌ ಗುಂಪಿನಲ್ಲಿ ಸಾಲ ಮನ್ನಾ ಬಗ್ಗೆ ಹೆಚ್ಚಾಗಿ ಚರ್ಚೆಯಾಗಲೇ ಇಲ್ಲ. ಬೇಡಿಕೆ ಪಟ್ಟಿಯಲ್ಲಿ ಸಾಲ ಮನ್ನಾಗೆ ಸ್ಥಾನವೂ ಇಲ್ಲ!

ರೈತರ ಬೆಳೆಗೆ ಸೂಕ್ತ ಬೆಲೆ ಹಾಗೂ ಮಾರುಕಟ್ಟೆ ವ್ಯವಸ್ಥೆ, ಪಂಪ್‌ಸೆಟ್‌ಗೆ ದಿನಪೂರ್ತಿ ವಿದ್ಯುತ್‌ ಕಲ್ಪಿಸುವ ಕುರಿತು ರೈತರಿಂದ ಹೆಚ್ಚು ಬೇಡಿಕೆ ಬಂದಿವೆ. ಈ ನಿಟ್ಟಿನಲ್ಲಿ ಪಕ್ಷಗಳು ರೈತರ ನೈಜ ಆಶಯಕ್ಕೆ ಸ್ಪಂದಿಸಬೇಕು. ಅದಕ್ಕೆ ಸೂಕ್ತ ಯೋಜನೆಯನ್ನು ಸಿದ್ಧಪಡಿಸಬೇಕು ಎಂಬುದೇ ನಮ್ಮ ಉದ್ದೇಶವಾಗಿದೆ ಎನ್ನುತ್ತಾರೆ ಗ್ರೂಪ್‌ನ ಅಡ್ಮಿನ್‌ಗಳಲ್ಲಿ ಒಬ್ಬರಾದ ರಮೇಶ್‌ ದೇಲಂಪಾಡಿ. ರಾಜಕೀಯ ಪಕ್ಷಗಳು ರೈತರ ಈ ಬೇಡಿಕೆಗಳಿಗೆ ಹೇಗೆ ಸ್ಪಂದಿಸುತ್ತವೆ, ನಿಜವಾಗಿಯೂ ರೈತ ಕಾಳಜಿ ವ್ಯಕ್ತಪಡಿಸುತ್ತವೆಯೇ ಎಂಬುದೇ ಈಗ ಕುತೂಹಲ.

ರೈತರ ಬೇಡಿಕೆಗಳಿವು
1. ಕೃಷಿ ಪಂಪ್‌ಸೆಟ್‌ಗಳಿಗೆ ದಿನವಿಡೀ ವಿದ್ಯುತ್‌
2. ಎಲ್ಲ ಕೃಷಿ ಉತ್ಪನ್ನಗಳಿಗೆ ಬಿತ್ತನೆ ಸಮಯದ- ಮಾರುಕಟ್ಟೆ ದರ ಘೋಷಣೆ
3. ಕೃಷಿ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ
4. ಕೃಷಿ, ತೋಟಗಾರಿಕೆ ಇಲಾಖೆಗಳಲ್ಲಿ ರೈತರ ಕೃಷಿ ಸಂಬಂಧಿ ದಾಖಲೆಗಳು ಒಂದೇ ಪ್ರಮಾಣ ಪತ್ರದಲ್ಲಿರುವ ವ್ಯವಸ್ಥೆ (ಏಕ ದಾಖಲೆ)
5. ಕೃಷಿ ಉತ್ಪನ್ನಗಳ ಧಾರಣೆ ಇಳಿಕೆಯಾದ ಕೂಡಲೆ ಬೆಂಬಲ ಬೆಲೆ ಘೋಷಣೆ, ಕಾರ್ಯರೂಪಕ್ಕೆ ಕ್ರಮ
6. ಆಧುನಿಕ ಯಂತ್ರೋಪಕರಣಗಳ ಬಳಕೆಗೆ ಪ್ರೋತ್ಸಾಹ
7. ಕೃಷಿಕರ ಅನುಶೋಧನೆಗೆ ಸಹಕಾರ. ಅದನ್ನು ಅಭಿವೃದ್ಧಿಪಡಿಸಲು ಆರ್ಥಿಕ ಬೆಂಬಲ
8. ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳ ಸಂಖ್ಯೆ ಕಡಿಮೆಗೊಳಿಸುವುದು
9. ಬಿತ್ತನೆ ಪೂರ್ವದಲ್ಲಿ ಸರ್ಕಾರವೇ ಉತ್ಪನ್ನದ ಬೇಡಿಕೆ ಅಂದಾಜಿಸಿ ಖರೀದಿ ಜವಾಬ್ದಾರಿ ತೆಗೆದುಕೊಳ್ಳುವುದು
10. ಕೃಷಿ ಕಾರ್ಮಿಕರಿಗೆ ಪಿಂಚಣಿ ಯೋಜನೆ ಅನುಷ್ಠಾನ
11. ಮರಳಿ ಕೃಷಿಗೆ ಬರುವ ವಿದ್ಯಾವಂತರಿಗೆ ಪ್ರೋತ್ಸಾಹ, ತಾಂತ್ರಿಕ ಮಾಹಿತಿ ಒದಗಿಸಲು ವ್ಯವಸ್ಥೆ
12. ಹಳ್ಳಿ ಉತ್ಪನ್ನಗಳ ಸ್ಥಳೀಯ ಮೌಲ್ಯವರ್ಧನೆ ಮ¤ತು ಮಾರಾಟಕ್ಕೆ ಆರ್ಥಿಕ ಪ್ರೋತ್ಸಾಹ
13. ಪ್ರತಿ ಗ್ರಾಮ ಮಟ್ಟದಲ್ಲಿ ಕೃಷಿ ತಾಂತ್ರಿಕ ಮಾಹಿತಿ ಲಭ್ಯತೆಗೆ ವಿಜ್ಞಾನ ಪದವೀಧರರ ನೇಮಕ
14. ಜಲ ಮರುಪೂರಣ ವ್ಯವಸ್ಥೆ ಕಡ್ಡಾಯ ಮಾಡುವುದು
15. ತಾಲೂಕು ಮಟ್ಟದಲ್ಲಿ ಕೃಷಿ ಉತ್ಪನ್ನಗಳ ಬೃಹತ್‌ ದಾಸ್ತಾನು ಕೊಠಡಿಗಳ ನಿರ್ಮಾಣ
16. ಹೈನುಗಾರಿಕೆ ಹಾಗೂ ಅದರ ಉತ್ಪನ್ನಗಳ ಮಾರಾಟಕ್ಕೆ ಪ್ರೋತ್ಸಾಹ

-ಉದಯವಾಣಿ

Comments are closed.