Uncategorized

ವಿಂಡೀಸ್ ವಿರುದ್ಧ 9 ವಿಕೆಟ್ ಗಳ ಸುಲಭ ಜಯ ಸಾಧಿಸುವ ಮೂಲಕ ಸರಣಿ ಗೆದ್ದ ಭಾರತ

Pinterest LinkedIn Tumblr

ತಿರುವನಂತಪುರಂ: ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಭಾರತ ತಂಡ 9 ವಿಕೆಟ್ ಗಳ ಸುಲಭ ಜಯ ಸಾಧಿಸಿದೆ. ವಿಂಡೀಸ್ ನೀಡಿದ 105 ರನ್ ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾ 15 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿದೆ . ಈ ಗೆಲುವಿನೊಂದಿಗೆ ಭಾರತ ಏಕದಿನ ಸರಣಿಯನ್ನು 3-1 ರ ಅಂತರದಿಂದ ವಶಪಡಿಸಿಕೊಂಡಿತು.

ತಿರುವನಂತಪುರದ ಗ್ರೀನ್ ಫೀಲ್ಡ್ ಅಂತಾರಾಷ್ತ್ರೀಯ ಕ್ರಿಕೆಟ್ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಕೆರೀಬಿಯನ್ ತಂಡ ಕೇವಲ 104 ರನ್ ಗಳಿಸಿ ತನ್ನೆಲ್ಲ ವಿಕೆಟ್ ಕಳೆದುಕೊಂಡಿತು . 25 ರನ್ ಗಳಿಸಿದ ನಾಯಕ ಜೇಸನ್ ಹೋಲ್ಡರ್ ವೆಸ್ಟ್ ಇಂಡೀಸ್ ಪರ ಅಧಿಕ ರನ್ ಸ್ಕೊರರ್. ರವೀಂದ್ರ ಜಡೇಜಾ 4 ವಿಕೆಟ್ ಕಿತ್ತು ಭಾರತದ ಬೌಲಿಂಗ್ ನಲ್ಲಿ ಮಿಂಚಿದರು.

ರನ್ ಚೇಸಿಂಗ್ ವೇಳೆ ಭಾರತದ ಆರಂಭ ಉತ್ತಮವೇನು ಇರಲಿಲ್ಲ. ಶಿಖರ್ ಧವನ್ ರ ಕಳಪೆ ಬ್ಯಾಟಿಂಗ್ ಫಾರ್ಮ್ ಅಂತಿಮ ಪಂದ್ಯದಲ್ಲೂ ಮುಂದುವರಿಯಿತು. ಧವನ್ ಈ ಪಂದ್ಯದಲ್ಲಿ ಗಳಿಸಿದ್ದು ಕೇವಲ 6 ರನ್. ಮೊದಲ ವಿಕೆಟ್ ಪತನವಾದ ನಂತರ ಉಪನಾಯಕ ರೋಹಿತ್ ಶರ್ಮ ಜೊತೆಗೂಡಿದ ನಾಯಕ ವಿರಾಟ್ ಕೊಹ್ಲಿ ಅಜೇಯ ಬ್ಯಾಟಿಂಗ್ ನಡೆಸಿ ಟೀಮ್ ಇಂಡಿಯಾವನ್ನು ಗೆಲುವಿನ ದಡ ಸೇರಿಸಿದರು.

ರೋಹಿತ್ ಶರ್ಮ ಅಜೇಯ 63 ರನ್ ಮತ್ತು ವಿರಾಟ್ ಕೊಹ್ಲಿ33 ರನ್ ಗಳಿಸಿ ಮಿಂಚಿದರು. ವೆಸ್ಟ್ ಇಂಡೀಸ್ ಪರ ಓಷನೇ ಥಾಮಸ್ ಏಕೈಕ ವಿಕೆಟ್ ಪಡೆದರು.

4 ವಿಕೆಟ್ ಪಡೆದ ರವೀಂದ್ರ ಜಡೇಜಾ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರೆ, ವಿರಾಟ್ ಕೊಹ್ಲಿ ಸರಣಿ ಶ್ರೇಷ್ಠ ಪುರಸ್ಕಾರಕ್ಕೆ ಭಾಜನರಾದರು.

50 ಓವರ್ ಕೂಡ ನಡೆಯದ ಪಂದ್ಯ: ಈ ಏಕದಿನ ಪಂದ್ಯದಲ್ಲಿ ಎಸೆದಿದ್ದು ಕೇವಲ 46.4 ಓವರ್ . ವೆಸ್ಟ್ ಇಂಡೀಸ್ 31.5 ಓವರ್ ನಲ್ಲಿ ತನ್ನೆಲ್ಲ ಗಂಟು ಮೂಟೆ ಕಟ್ಟಿದರೆ, ಭಾರತ ಸುಲಭ ಗುರಿಯನ್ನು ಕೇವಲ 14.5 ಓವರ್ ನಲ್ಲಿ ತಲುಪಿತು. ಭಾರತ ತಂಡ ತನ್ನ ಏಕದಿನ ಇತಿಹಾಸದಲ್ಲಿ ಓವರ್ ಲೆಕ್ಕದಲ್ಲಿ ಆಡಿದ ಅತ್ಯಂತ ಸಣ್ಣ ಪಂದ್ಯ. ಈ ಹಿಂದೆ ನ್ಯೂಜಿಲ್ಯಾಂಡ್ ವಿರುದ್ಧದ 2010ರ ಚೆನ್ನೈ ಪಂದ್ಯ 48.1 ಓವರ್ ನಲ್ಲಿ ಮುಗಿದಿತ್ತು.

ಕೊಹ್ಲಿ ಮತ್ತೊಂದು ದಾಖಲೆ: ದಾಖಲೆಯ ಮೇಲೆ ದಾಖಲೆ ಮಾಡುತ್ತಿರುವ ನಾಯಕ ಕೊಹ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. 5 ಏಕದಿನ ಪಂದ್ಯಗಳ ದ್ವಿಪಕ್ಷೀಯ ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಧಾಖಲೆಯನ್ನು ಕೊಹ್ಲಿ ತನ್ನ ಹೆಸರಿಗೆ ಬರೆದುಕೊಂಡರು. ಈ ಸರಣಿಯಲ್ಲಿ ಕೊಹ್ಲಿ ಗಳಿಸಿದ ಒಟ್ಟು ರನ್ 453.

Comments are closed.