ನವದೆಹಲಿ: ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಸಿಆರ್ ಪಿಎಫ್ ಯೋಧರ ಮೇಲೆ ನಡೆದ ಭಯೋತ್ಪಾದಕ ದಾಳಿಯನ್ನು ತೀವ್ರವಾಗಿ ಖಂಡಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಭಾರತವನ್ನು ಅಸ್ಥಿರಗೊಳಿಸಬಹುದು ಎಂದು ನೆರೆಯ ದೇಶ ಭಾವಿಸಿದರೆ ಅದನ್ನು ಮರೆತುಬಿಡಲಿ ಅದು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಪಾಕಿಸ್ತಾನಕ್ಕೆ ತಿರುಗೇಟು ನೀಡಿದರು.
ಭದ್ರತಾ ಪಡೆ ಯೋಧರ ಮೇಲೆ ದಾಳಿ ನಡೆಸಿ ಉಗ್ರರು ಭಾರೀ ದೊಡ್ಡ ತಪ್ಪು ಮಾಡಿದ್ದಾರೆ, ಅದಕ್ಕೆ ತಕ್ಕ ಬೆಲೆಯನ್ನು ಅವರು ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಇಂತಹ ಕೃತ್ಯಗಳಿಂದ ಭಾರತವನ್ನು ಅಸ್ಥಿರಗೊಳಿಸಬಹುದು ಎಂದು ಭಾವಿಸಿದ್ದರೆ ಅದು ಸಾಧ್ಯವಿಲ್ಲ ಎಂದು ಕೂಡ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಇಂತಹ ಭಯೋತ್ಪಾದಕ ದಾಳಿಗಳಿಂದ ಭಾರತವನ್ನು ದುರ್ಬಲಗೊಳಿಸಬಹುದು ಎಂದು ನಮ್ಮ ನೆರೆಯ ರಾಷ್ಟ್ರ ಭಾವಿಸಿದೆ. ಅದು ಸಾಧ್ಯವಿಲ್ಲ ಎಂದರು.
ಉಗ್ರರ ದಾಳಿಯಿಂದ ವೀರಯೋಧರು ಹುತಾತ್ಮರಾಗಿದ್ದು ನೋಡಿ ನಿಮ್ಮ ರಕ್ತ ಕುದಿಯುತ್ತಿರುತ್ತದೆ ಎಂದು ನನಗೆ ಗೊತ್ತಿದೆ. ಇದೊಂದು ಭಾವನಾತ್ಮಕ ಮತ್ತು ಸೂಕ್ಷ್ಮ ಸಮಯ. ಆಡಳಿತದಲ್ಲಿರಲಿ ಅಥವಾ ವಿರೋಧ ಪಕ್ಷದಲ್ಲಿರಲಿ ಈ ಸಂದರ್ಭದಲ್ಲಿ ನಾವು ರಾಜಕೀಯದಿಂದ ದೂರವುಳಿಯಬೇಕು. ದೇಶದ ಎಲ್ಲರೂ ಒಂದಾಗಬೇಕು ಎಂದು ಕರೆ ನೀಡಿದರು.
ದಾಳಿಯಲ್ಲಿ ಹುತಾತ್ಮರಾದವರಿಗೆ ನಾನು ಗೌರವ ನಮನ ಸಲ್ಲಿಸುತ್ತೇನೆ. ನಮ್ಮ ಭದ್ರತಾ ಪಡೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಅವರ ಧೈರ್ಯ, ಸಾಹಸಗಳ ಮೇಲೆ ನಮಗೆ ನಂಬಿಕೆಯಿದೆ. ಜಗತ್ತಿನಿಂದ ಸಂಪೂರ್ಣವಾಗಿ ದೂರ ಉಳಿದಿರುವ ನಮ್ಮ ನೆರೆಯ ದೇಶ ತನ್ನ ತಂತ್ರ ಮತ್ತು ಪಿತೂರಿಯಿಂದ ಭಾರತವನ್ನು ಅಸ್ಥಿರಗೊಳಿಸಬಹುದು ಎಂದು ಭಾವಿಸಿದರೆ ಅದು ಖಂಡಿತಾ ಸಾಧ್ಯವಿಲ್ಲ ಎಂದು ಸಹ ಪ್ರಧಾನಿ ಸಂದೇಶ ರವಾನಿಸಿದರು.
ಪುಲ್ವಾಮಾ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಈ ಸಂದರ್ಭದಲ್ಲಿ ಭಾರತಕ್ಕೆ ಬೆಂಬಲ ಸೂಚಿಸಿದ ಎಲ್ಲಾ ದೇಶಗಳಿಗೆ ಪ್ರಧಾನಿ ಧನ್ಯವಾದ ಹೇಳಿದರು. ಭಯೋತ್ಪಾದನೆಯನ್ನು ಹತ್ತಿಕ್ಕಲು ಎಲ್ಲರೂ ಒಗ್ಗಟ್ಟಿನಿಂದ ಹೋರಾಡೋಣ ಎಂದು ಕರೆ ನೀಡಿದರು.
ಅವರು ಇಂದು ದೆಹಲಿಯಿಂದ ವಾರಣಾಸಿಗೆ ಸಂಚರಿಸುವ ಹೊಸ ಸೆಮಿ ಹೈ ಸ್ಪೀಡ್ ರೈಲು ವಂದೇ ಭಾರತ ಎಕ್ಸ್ ಪ್ರೆಸ್ ಗೆ ಹಸಿರು ನಿಶಾನೆ ತೋರಿಸಿದರು. ರೈಲಿಗೆ ಚಾಲನೆ ನೀಡುವುದಕ್ಕೆ ಮುನ್ನ ನೆರೆದಿದ್ದ ಗಣ್ಯರು ನಿನ್ನೆ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರನ್ನು ನೆನೆದು ಎರಡು ನಿಮಿಷಗಳ ಕಾಲ ಮೌನಾಚರಣೆ ಸಲ್ಲಿಸಿದರು.
ವಂದೇ ಭಾರತ್ ಎಕ್ಸಪ್ರೆಸ್ ರೈಲಿಗೆ ಪ್ರಧಾನಿ ಮೋದಿ ಚಾಲನೆ
ದೇಶದ ಮೊಟ್ಟಮೊದಲ ಅರೆ ವೇಗದ 18 “ವಂದೇ ಭಾರತ್ ಎಕ್ಸಪ್ರೆಸ್” ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ನವದೆಹಲಿಯಲ್ಲಿ ಹಸಿರು ನಿಶಾನೆ ತೋರಿದರು.
ನವದೆಹಲಿಯಿಂದ ಕಾನ್ಪುರ್ – ಅಲಹಾಬಾದ್ ಮಾರ್ಗವಾಗಿ ವಾರಣಾಸಿಗೆ ತಲುಪುವ ರೈಲಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ, ಇದೇ ವೇಳೆ ರೈಲಿನಲ್ಲಿನ ಸೌಲಭ್ಯಗಳನ್ನು ಪರಿಶೀಲಿಸಿದರು. ಈ ವೇಳೆ ರೈಲ್ವೆ ಹಾಗೂ ಕಲ್ಲಿದ್ದಲು ಸಚಿವ ಪಿಯೂಶ್ ಗೋಯಲ್ ಅವರ ನೇತೃತ್ವದ ಅಧಿಕಾರಿಗಳ ತಂಡ ಹಾಗೂ ಮಾಧ್ಯಮದವರು ರೈಲಿನಲ್ಲಿ ಪ್ರಯಾಣಿಸಿದರು.
ಸುಮಾರು 8 ಗಂಟೆಗಳಲ್ಲಿ ರೈಲು ವಾರಾಣಸಿ ತಲುಪಲಿದ್ದು, ಕಾನ್ಪುರ್ ಹಾಗೂ ಅಲಹಾಬಾದ್ ರೈಲು ನಿಲ್ದಾಣಗಳಲ್ಲಿ ಮಾತ್ರ ನಿಲ್ಲಲಿದೆ. ಸೋಮವಾರ ಮತ್ತು ಗುರುವಾರ ಹೊರತುಪಡಿಸಿ ವಾರದ ಎಲ್ಲ ದಿನಗಳಲ್ಲಿ ರೈಲು ಪ್ರಯಾಣಿಸಲಿದೆ.
ವಂದೇ ಮಾತರಂ ಎಕ್ಸ್ ಪ್ರೆಸ್ ರೈಲಿನಲ್ಲಿ ಒಟ್ಟು 16 ಹವಾ ನಿಯಂತ್ರಿತ ಕೋಚ್ ಗಳಿದ್ದು, ಅವುಗಳಲ್ಲಿ ಎರಡು ಕಾರ್ಯ ನಿರ್ವಾಹಕ ವರ್ಗದ ಕೋಚ್ ಗಳಿರಲಿವೆ. ಒಟ್ಟು 1,128 ಪ್ರಯಾಣಿಕರ ಸಾಮರ್ಥ್ಯ ಹೊಂದಿರುವ ಈ ರೈಲಿನಲ್ಲಿ ಎಲ್ಲ ವಿದ್ಯುತ್ ಉಪಕರಣಗಳನ್ನು ಕೋಚ್ ಹಾಗೂ ಆಸನಗಳ ಕೆಳಗೆ ಅಳವಡಿಸಲಾಗಿದೆ. ರೈಲಿನಲ್ಲಿ ಪುನರ್ ಉತ್ಪಾದಕ ಬ್ರೇಕಿಂಗ್ ವ್ಯವಸ್ಥೆ ಅಳವಡಿಸಿದ್ದರಿಂದ ಶೇ.30ರಷ್ಟು ವಿದ್ಯುಚ್ಛಕ್ತಿಯನ್ನು ಉಳಿತಾಯವಾಗಲಿದೆ.
ವೇಗ, ಭದ್ರತೆ ಹಾಗೂ ಸೇವೆಗಳು ರೈಲಿನ ಲಕ್ಷಣಗಳಾಗಿವೆ. ಚೆನ್ನೈ ಮೂಲದ ಸಮಗ್ರ ಕೋಚ್ ಫ್ಯಾಕ್ಟರಿಯು ಕೇವಲ 18 ತಿಂಗಳಲ್ಲಿ ಈ ರೈಲನ್ನು ಸಿದ್ಧಪಡಿಸಿತ್ತು.
Comments are closed.