ಮೈಸೂರು: ಚಾಕು ಇರಿತಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿರುವ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಆರೋಗ್ಯ ಸ್ಥಿತಿ ಗಂಭಿರವಾಗಿದ್ದು, 48 ಗಂಟೆ ಏನನ್ನೂ ಹೇಳಲಾಗುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಇದು ಅವರ ಹಿಂಬಾಲಕರಲ್ಲಿ ಆತಂಕ ಮೂಡಿಸಿದೆ.
ಇಂದು ಬೆಳಗ್ಗೆ ಕೊಲಂಬಿಯಾ ಏಷಿಯಾ ಆಸ್ಪತ್ರೆ ತನ್ವೀರ್ ಸೇಠ್ ಆರೋಗ್ಯದ ಕುರಿತು ಬುಲೆಟಿನ್ ಬಿಡುಗಡೆ ಮಾಡಿದೆ. ‘ತನ್ವೀರ್ ಕುತ್ತಿಗೆ ಭಾಗದಲ್ಲಿ ಗಾಯವಾಗಿದ್ದು, ಮೆದುಳು ಹಾಗೂ ಹೃದಯಕ್ಕೆ ಸಂಬಂಧಿಸಿದ ರಕ್ತನಾಳಗಳಿಗೆ ಹಾನಿ ಉಂಟಾಗಿದೆ. ಹಾಗಾಗಿ ಅವರ ಅರೋಗ್ಯ ಸ್ಥಿತಿ ಗಂಭೀರವಾಗಿದೆ. ಇನ್ನು, 48 ಗಂಟೆ ಕಾಲ ಏನನ್ನೂ ಹೇಳಲಾಗುವುದಿಲ್ಲ,’ ಎಂದು ವೈದ್ಯರು ತಿಳಿಸಿದ್ದಾರೆ.
‘ಒಳಗಿನ ನರಗಳು, ಸ್ಪೈನಲ್ಗೆ ಯಾವ ರೀತಿ ಹಾನಿಯಾಗಿದೆ ಎಂಬುದು ಮುಂದಿನ ಹಂತದ ಚಿಕಿತ್ಸೆಯಲ್ಲಿ ತಿಳಿಯಲಿದೆ. ರಾತ್ರಿ ರಕ್ತಸ್ರಾವಾಗದ ರೀತಿ ಶಸ್ತ್ರಚಿಕಿತ್ಸೆ ಮಾಡಿದ್ದೇವೆ. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಕಿಡ್ನಿ ಸ್ವಲ್ಪ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದೆ. ಬಿಪಿ, ಶುಗರ್ ಸಾಮಾನ್ಯ ಸ್ಥಿತಿಗೆ ತರಲು ಪ್ರಯತ್ನ ಪಡುತ್ತಿದ್ದೇವೆ. ಅದರ ಹೊರತಾಗಿ ಯಾವುದೇ ರೀತಿಯ ಆರೋಗ್ಯ ಏರುಪೇರಿಲ್ಲ. ಜನರು ಪ್ರಾರ್ಥನೆ ಮಾಡಲಿ. ಅವರು ಆಸ್ಪತ್ರೆಗೆ ಬರುವುದು ಬೇಡ,’ ಎಂದು ಆಸ್ಪತ್ರೆಯ ವೈದ್ಯರು ಕೋರಿದ್ದಾರೆ. ಏನಾಯ್ತು:
ಭಾನುವಾರ ರಾತ್ರಿ ಸುಮಾರು 11.30 ಗಂಟೆ ಸಂದರ್ಭದಲ್ಲಿ ಮೈಸೂರಿನಲ್ಲಿ ಘಟನೆ ನಡೆದಿದೆ. ತನ್ವೀರ್ ಆಪ್ತರ ಮದುವೆಯಲ್ಲಿ ಭಾಗಿಯಾಗಿದ್ದರು. ಬನ್ನಿಮಂಟಪದಲ್ಲಿ ನಡೆಯುತ್ತಿದ್ದ ಈ ಕಾರ್ಯಕ್ರಮದಲ್ಲಿ ತನ್ವೀರ್ ಸೇಠ್ ಕೂಡ ಇದ್ದರು. ಈ ವೇಳೆ ಫರಾನ್ ( 24 ) ಎಂಬ ಯುವಕ ತನ್ವೀರ್ ಕತ್ತಿಗೆ ಚಾಕು ಹಾಕಿದ್ದಾನೆ. ಗಾಯಗೊಂಡ ತನ್ವೀರ್ ಸೇಠ್ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆರೋಪಿ ಫರಾನ್ನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ.
ಈ ಕೊಲೆ ಯತ್ನ ಮಾಡಲು ವೈಯಕ್ತಿಕ ದ್ವೇಷ ಕಾರಣ ಎಂದು ಫರಾನ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಈ ಮೊದಲು ಸಾಕಷ್ಟು ಬಾರಿ ತನ್ವೀರ್ ಜೊತೆ ಫರಾನ್ ಕಾಣಿಸಿಕೊಂಡಿದ್ದ.
Comments are closed.