ಹೊಸ ದಿಲ್ಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ. ಪಿ. ನಡ್ಡಾ ಅವರ ಜೊತೆ ಇಂದು ರಾಜಕೀಯಕ್ಕೆ ಸಂಬಂಧಿಸಿ ಮಾತುಕತೆ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ, ಮಾತುಕತೆ ಸಂತಸ ತಂದಿದೆ ಎಂದಿದ್ದಾರೆ.
ಇಂದು ದೆಹಲಿಗೆ ದೌಡಾಯಿಸಿದ ಯಡಿಯೂರಪ್ಪ ಸಂಪುಟ ವಿಸ್ತರಣೆ ವಿಚಾರವಾಗಿ ವರಿಷ್ಠರ ಜೊತೆ ಮಾತುಕತೆ ನಡೆಸಿದ್ದು, ಕುತೂಹಲಕ್ಕೆ ಕಾರಣವಾಗಿದೆ.
ವರಿಷ್ಠರ ಜೊತೆ ನಡೆಸಿದ ಮಾತುಕತೆ ಸಂತಸ ಹಾಗೂ ಸಮಾಧಾನ ತಂದಿದೆ ಎಂದು ಸಿಎಂ ಯಡಿಯೂರಪ್ಪ ಸುದ್ದಿಗಾರರ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡರು.
ದಿಲ್ಲಿಯಲ್ಲಿ ವರಿಷ್ಠರ ಜೊತೆಗಿನ ಮಾತುಕತೆ ಬಳಿಕ ಮಾಧ್ಯಮಗಳಿಗೆ ಎದುರಾದ ಸಿಎಂ ಯಡಿಯೂರಪ್ಪ, ಸಂಪುಟ ವಿಸ್ತರಣೆ ವಿಚಾರದಲ್ಲಿ ಆದಷ್ಟು ಬೇಗ ಸಿಹಿ ಸುದ್ದಿ ನೀಡೋದಾಗಿ ತಿಳಿಸಿದರು. ಈ ಸಭೆ ಅತ್ಯಂತ ಸಂತಸ ಹಾಗೂ ಸಮಾಧಾನ ತಂದಿದೆ ಎಂದು ಹೇಳಿದ ಬಿಎಸ್‌ವೈ, ಆದಷ್ಟು ಶೀಘ್ರವೇ ಅಮಿತ್ ಶಾ ಅವರು ಬೆಂಗಳೂರಿಗೆ ಬರಲಿದ್ದಾರೆ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ಬಿಜೆಪಿ ಗೆಲುವಿನ ನಾಗಾಲೋಟ ಮುಂದುವರೆಸಿರುವುದು ವರಿಷ್ಠರಿಗೆ ಸಂತಸ ತಂದಿದೆ ಎಂದು ಹೇಳಿದ ಯಡಿಯೂರಪ್ಪ, ಶೀಘ್ರವೇ ಸಂಪುಟ ವಿಸ್ತರಣೆ ಬಗ್ಗೆ ಸಿಹಿ ಸುದ್ದಿ ಸಿಗಲಿದೆ ಎಂದು ಸುಳಿವು ನೀಡಿದ್ದಾರೆ.
ಇನ್ನು ಮುಂಬರುವ ಮೂರು ಕ್ಷೇತ್ರಗಳ ಉಪ ಚುನಾವಣೆಗಳ ಕುರಿತಾಗಿಯೂ ಮಾತುಕತೆ ನಡೆದಿದ್ದು, ಮೂರೂ ಕ್ಷೇತ್ರಗಳಲ್ಲಿ ಗೆಲ್ಲುವ ಪಣ ತೊಟ್ಟಿರೋದಾಗಿ ಯಡಿಯೂರಪ್ಪ ಹೇಳಿದರು. ಈ ಕ್ಷೇತ್ರಗಳಲ್ಲಿ ಸಾಕಷ್ಟು ಆಕಾಂಕ್ಷಿಗಳಿದ್ದಾರೆ. ಹೀಗಾಗಿ, ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಆದಷ್ಟು ಬೇಗ ಸಿದ್ದಪಡಿಸಿ ಹೈಕಮಾಂಡ್‌ಗೆ ರವಾನಿಸೋದಾಗಿ ಯಡಿಯೂರಪ್ಪ ಹೇಳಿದ್ದಾರೆ. ಬೆಳಗಾವಿ ಲೋಕಸಭಾ ಕ್ಷೇತ್ರ, ಬಸವಕಲ್ಯಾಣ ಹಾಗೂ ಮಸ್ಕಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಇದೀಗ ಭರದ ಸಿದ್ದತೆ ನಡೆಯುತ್ತಿದೆ.
ಇನ್ನು ಇದೇ ವೇಳೆ ಮಾಧ್ಯಮ ಪ್ರತಿನಿಧಿಗಳು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭಿನ್ನಮತದ ವಿಚಾರವನ್ನೂ ಯಡಿಯೂರಪ್ಪ ಎದುರು ಪ್ರಸ್ತಾಪಿಸಿದರು. ಈ ವೇಳೆ ಪ್ರತಿಕ್ರಿಯೆ ನೀಡಿದ ಯಡಿಯೂರಪ್ಪ, ಸಂತೋಷದ ಸಮಯದಲ್ಲಿ ಯತ್ನಾಳ್ ಬಗ್ಗೆ ಚರ್ಚೆ ಮಾಡಲ್ಲ ಎಂದಷ್ಟೇ ಹೇಳಿ ಮುನ್ನಡೆದರು.
ಈ ನಡುವೆ, ನಾಯಕತ್ವ ಬದಲಾವಣೆ ಬಗ್ಗೆಯೂ ಚರ್ಚೆ ನಡೆದಿದೆಯಾ ಎಂಬ ಗುಸುಗುಸು ಶುರುವಾಗಿದೆ. ಈ ಕುರಿತ ಚರ್ಚೆಗೆ ಅಮಿತ್ ಶಾ ಆದ್ಯತೆ ನೀಡಿದ್ದಾರೆ ಎನ್ನಲಾಗಿದೆ. ಯಡಿಯೂರಪ್ಪಗೆ ಪರ್ಯಾಯ ನಾಯಕನ ಹುಡುಕಾಟ ನಡೆದಿದೆ ಎಂದೂ ಮೂಲಗಳು ತಿಳಿಸಿವೆ.
Comments are closed.