Uncategorized

ಶಾಸಕ ಕಾಮಾತ್ ಅವರ ಸಾಧನೆಯ “ಅಭಿವೃದ್ಧಿ ಪಥ” ಪುಸ್ತಕ ಬಿಡುಗಡೆ ; ಕ್ಷೇತ್ರಕ್ಕೆ 4500 ಕೋಟಿ ರೂ. ಅನುದಾನ – ಇಲ್ಲಿದೆ ವಿವರ..

Pinterest LinkedIn Tumblr

ಮಂಗಳೂರು : ಹಾಲಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಅವರು ತನ್ನ ಐದು ವರ್ಷಗಳ ಅವಧಿಯಲ್ಲಿ ಮಾಡಲಾದ ಸಾಧನೆ ಹಾಗೂ ಅಭಿವೃದ್ಧಿಯ ಕುರಿತಾದ “ಅಭಿವೃದ್ಧಿ ಪಥ” ಪುಸ್ತಕ ಬಿಡುಗಡೆ ಕಾರ್ಯಕ್ರಮ ಸೋಮವಾರ ನಗರದ ಅಟಲ್ ಸೇವಾ ಕೇಂದ್ರದಲ್ಲಿ ಏರ್ಪಡಿಸಲಾಗಿತ್ತು. ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರು “ಅಭಿವೃದ್ಧಿ ಪಥ” ಪುಸ್ತಕವನ್ನು ಬಿಡುಗಡೆಗೊಳಿಸಿದರು.

ಈ ಸಂದರ್ಭ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಹಾಲಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್ ಅವರು, ಶಾಸಕನಾಗಿ ಕಳೆದ ಐದು ವರ್ಷಗಳಲ್ಲಿ ಕ್ಷೇತ್ರಕ್ಕೆ 4500 ಕೋಟಿ ರೂಗಳಿಗೂ ಅಧಿಕ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದು, 2000 ಕೋಟಿ ರೂಗಳ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿದ್ದು, ಅದು ಜನರ ಕಣ್ಣ ಮುಂದಿದೆ. ಮುಂದಿನ ಅವಧಿಯಲ್ಲಿ ಈಗ ಪ್ರಗತಿಯಲ್ಲಿರುವ ಕಾಮಗಾರಿಗಳು ಸಂಪೂರ್ಣಗೊಳ್ಳಲಿದ್ದು, ಇನ್ನಷ್ಟು ಹೆಚ್ಚಿನ ಅನುದಾನದ ಮೂಲಕ ಇನ್ನಷ್ಟು ಅಭಿವೃದ್ಧಿ ಯೋಜನೆಗಳು ನಡೆದು 2025 ರ ವೇಳೆಗೆ ಮಂಗಳೂರು ನಗರದ ಚಿತ್ರಣವೇ ಬದಲಾಗಲಿದೆ ಎಂದು ಹೇಳಿದರು.

ತನ್ನ ಅವಧಿಯಲ್ಲಿ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದ್ದು, ನಗರಕ್ಕೆ ಅತೀ ಮುಖ್ಯವಾದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ಜಲಸಿರಿ ಯೋಜನೆ ಅನುಷ್ಠಾನ ಗೊಳಿಸಲಾಗಿದ್ದು, 70 – 80 ದಶಕದ ಹಳೆ ಪೈಪುಗಳನ್ನು ಬದಲಾಯಿಸಿ ಹೊಸ ಪೈಪುಗಳ ಜೋಡಣೆ ಮಾಡಲಾಗುತ್ತಿದ್ದು, ಅದಕ್ಕಾಗಿ 792 ಕೋಟಿ ರೂ ಅನುದಾನ ಬಿಡುಗಡೆಯಾಗಿದೆ. ನೀರಿನ ಪೈಪುಗಳಲ್ಲಿ ಲೋಪ ಕಂಡು ಬಂದಲ್ಲಿ ಅದನ್ನು ತಕ್ಷಣ ಪರಿಹರಿಸಲು ಪಾಲಿಕೆಯಲ್ಲಿ ಕಂಪ್ಯೂಟರಿಕೃತ ವ್ಯವಸ್ಥೆಯ ಮೂಲಕ ಕ್ರಮ ಕೈಗೊಳ್ಳುವ ವಿಶೇಷ ವ್ಯವಸ್ಥೆ ಮಾಡಲಾಗುವುದು.

ನಮ್ಮ ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 300 ಕೋಟಿ ರೂಗಳನ್ನು ಬಳಸಿ ಒಳಚರಂಡಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಕೊರೊನಾ ಅವಧಿಯಲ್ಲಿ ವಲಸೆ ಕಾರ್ಮಿಕರು ತಮ್ಮ ಊರಿಗೆ ತೆರಳಿ ಕಡಿಮೆ ಸಂಖ್ಯೆಯಲ್ಲಿ ಮಂಗಳೂರಿಗೆ ಮತ್ತೆ ಬಂದಿದ್ದು ಈ ಯೋಜನೆ ಪೂರ್ಣಗೊಳ್ಳಲು ತಡವಾಗಿರಬಹುದು. ಆದರೆ ಪ್ರಸ್ತುತ ಈ ಕಾರ್ಯ ಈ ವೇಗ ಪಡೆದುಕೊಂಡಿದ್ದು, 2025 ರಲ್ಲಿ ಪೂರ್ಣಗೊಳ್ಳಲಿದೆ.

ಕಳೆದ ಐದು ವರ್ಷಗಳಲ್ಲಿ 25 ಕ್ಕೂ ಹೆಚ್ಚಿನ ಕೆರೆಗಳನ್ನು ಅಭಿವೃದ್ಧಿ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, 10-15 ಈಗಾಗಲೇ ಅಭಿವೃದ್ಧಿಯಾಗಿದ್ದು, ಉಳಿದ 20 ಕೆರೆಗಳು ಅಭಿವೃದ್ಧಿಯಾಗುತ್ತಿವೆ. 53 ಪಾರ್ಕುಗಳು ಅಭಿವೃದ್ಧಿಯಾಗುತ್ತಿದ್ದು, ಕೆಲವು ಹೊಸ ಉದ್ಯಾನವನಗಳು ಕೂಡ ತಲೆಎತ್ತಲಿವೆ. ವೃತ್ತಗಳಿಗೂ ಹೊಸ ರೂಪ, ನೀಡಲಾಗುತ್ತಿದ್ದು, ಬ್ರಹ್ಮಶ್ರೀ ನಾರಾಯಣ ಗುರು ವೃತ್ತ, ಮಂಜೇಶ್ವರ ಗೋವಿಂದ ಪೈ, ಮಂಗಳಾದೇವಿ ವೃತ್ತಗಳು ಅಭಿವೃದ್ಧಿಯಾಗಿವೆ.

ನೀರಾವರಿ ಇಲಾಖೆಯಿಂದ 125 ಕೋಟಿ ರೂ ಅನುದಾನ ಬಳಸಿ ಬೃಹತ್ ತಡೆಗೋಡೆ ನಿರ್ಮಾಣ ಕಾರ್ಯಗಳು ನಡೆಯುತ್ತಿವೆ. 400 ಹೆಚ್ಚು ಕಿಲೋ ಮೀಟರ್ ರಾಜಕಾಲುವೆ ತಡೆಗೋಡೆಗಳು ನಿರ್ಮಾಣವಾಗಲು 1500 ಕೋಟಿ ರೂ ಅಗತ್ಯವಿದ್ದು, ಈಗ ಬಿಡುಗಡೆಯಾಗಿರುವ ಅನುದಾನದಲ್ಲಿ 70 ಶೇಕಡಾ ಕಾಮಗಾರಿಗಳು ನಡೆದಿದ್ದು, ಉಳಿದ ಕಾಮಗಾರಿಗಳು ನಡೆಯಲಿವೆ. ನಗರ ಪ್ರದೇಶಕ್ಕೆ ನೀರಾವರಿ ಇಲಾಖೆಯಿಂದ ಅನುದಾನ ಬಿಡುಗಡೆಯಾಗಿರುವುದು ದಾಖಲೆಯಾಗಿದ್ದು, ನಮ್ಮ ಪ್ರಯತ್ನ ಯಶಸ್ವಿಯಾಗಿದೆ.

ಒಂದೇ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಸರಕಾರಿ ಡಿಗ್ರಿ ಕಾಲೇಜುಗಳಿಗೆ ನ್ಯಾಕ್ ಎ ಸ್ಥಾನಮಾನ ಸಿಕ್ಕಿರುವುದು ಇಡೀ ದೇಶ ಅಥವಾ ಇಡೀ ರಾಜ್ಯದಲ್ಲಿ ಒಂದು ವಿಶೇಷ ಎನ್ನಬಹುದು. ನ್ಯಾಕ್ ಎ ಗ್ರೇಡ್ ಸ್ಥಾನಮಾನ ಸಿಗಬೇಕಾದರೆ ಪೂರೈಸಬೇಕಾದ ಮಾನದಂಡಗಳನ್ನು ಒಂದು ಕೋಟಿ ರೂ ವೆಚ್ಚದಲ್ಲಿ ಪೂರೈಸಲಾಗಿದ್ದು, ಮುಂದಿನ ದಿನಗಳಲ್ಲಿ ಆ ಕಾಲೇಜುಗಳಿಗೆ 10 ರಿಂದ 15 ಕೋಟಿ ರೂ ಅನುದಾನ ಕೇಂದ್ರ ಮತ್ತು ರಾಜ್ಯದಿಂದ ಬರುವ ವ್ಯವಸ್ಥೆ ಮಾಡಿದ್ದೇನೆ.

ರಥಬೀದಿ ಡಿಗ್ರಿ ಕಾಲೇಜು, ಬಲ್ಮಠ ಡಿಗ್ರಿ ಕಾಲೇಜು, ವಿಶ್ವವಿದ್ಯಾನಿಲಯದ ಡಿಗ್ರಿ ಕಾಲೇಜು ಈ ಯೋಜನೆಯ ಲಾಭ ಪಡೆದುಕೊಂಡಿದೆ. ಮಹಿಳಾ ಮತ್ತು ಪುರುಷ ಐಟಿಐ ತಲಾ 36 ಕೋಟಿ, ಜರ್ಮನ್ ತಂತ್ರಜ್ಞಾನ ಅಳವಡಿಕೆಗೆ 21 ಕೋಟಿ ರೂ ಬಳಸಿ ಅಭಿವೃದ್ಧಿ ಮಾಡಲಾಗಿದೆ. ಹಲವು ಹೊಸ ಶಾಲೆ, ಕಾಲೇಜುಗಳ ಆರಂಭ, ಅಭಿವೃದ್ಧಿ ನಡೆದಿವೆ.

ಆರೋಗ್ಯ ಕ್ಷೇತ್ರದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಸಹಕಾರದಿಂದ ಉತ್ತಮ ವ್ಯವಸ್ಥೆ ಮಾಡಲಾಗಿದ್ದು, ನಾನು ಶಾಸಕನಾಗುವ ಮೊದಲು ವೆನಲಾಕ್ ನಲ್ಲಿ 12 ಇದ್ದ ವೆಂಟಿಲೇಟರ್ ಸಂಖ್ಯೆ ಈಗ 165 ಆಗಿದೆ. 250 ಆಕ್ಸಿಜನ್ ಬೆಡ್, 50 ಕೋಟಿ ವೆಚ್ಚದಲ್ಲಿ ಸರ್ಜಿಕಲ್ ಬ್ಲಾಕ್, ಆಕ್ಸಿಜನ್ ಪ್ಲಾಂಟ್, 30 ಕೋಟಿ ರೂ ವೆಚ್ಚದಲ್ಲಿ ಲೇಡಿಗೋಶನ್ ಆಸ್ಪತ್ರೆ ನವೀಕರಣ, ತಾಯಿ-ಮಗು ವಿಶೇಷ ಚಿಕಿತ್ಸಾ ಕ್ರಮದ ಅಭಿವೃದ್ಧಿ, ನಾಲ್ಕು ನಮ್ಮ ಕ್ಲಿನಿಕ್ ಕೂಡ ವ್ಯವಸ್ಥೆಗೊಳಿಸಲಾಗಿದೆ.

ಕ್ರೀಡಾಳುಗಳಿಗೆ ಮಂಗಳಾ ಕ್ರೀಡಾಂಗಣದಲ್ಲಿ ಅತ್ಯುನ್ನತ ಮೂಲಭೂತ ಸೌಕರ್ಯ ಮತ್ತು ಉನ್ನತೀಕರಣ, ಬಂದರು ಮತ್ತು ಮೀನುಗಾರಿಕಾ ಅಭಿವೃದ್ಧಿಗಾಗಿ 65 ಕೋಟಿ ರೂ ವೆಚ್ಚದಲ್ಲಿ ಬೆಂಗ್ರೆಯಲ್ಲಿ ಜೆಟ್ಟಿ ನಿರ್ಮಾಣ ನಡೆಯಲಿದ್ದು, ಅನೇಕ ಅಭಿವೃದ್ಧಿ ಕಾಮಗಾರಿ ನಡೆಯಲಿದೆ. ಪ್ರವಾಸೋದ್ಯಮ ಬೆಳವಣಿಗಾಗಿ ನೇತ್ರಾವತಿ ನದಿ ತೀರದಿಂದ ಸುಲ್ತಾನ್ ಭತ್ತೇರಿ ತನಕ ರಿವರ್ ಫ್ರಂಟ್ ಯೋಜನೆ ಕೂಡ ಜಾರಿಗೆ ಬರಲಿದೆ.

ಸ್ವಯಂಘೋಷಿತ ಆಸ್ತಿ ತೆರಿಗೆ, ಈ ಖಾತಾ ಆನ್ ಲೈನ್ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ನೀರಿನ ಬಿಲ್ ಮತ್ತು ಇತರ ಕಾರ್ಯಗಳು ಕೂಡ ಪಾಲಿಕೆಯಲ್ಲಿ ಆನ್ ಲೈನ್ ಆಗಲಿವೆ. ತುಳುನಾಡಿನ ಸಂಸ್ಕೃತಿ, ಆಚಾರಗಳನ್ನು ಮುಂದಿನ ತಲೆಮಾರಿಗೆ ತೆಗೆದುಕೊಂಡು ಹೋಗುವ ಉದ್ದೇಶದಿಂದ ಹುಲಿವೇಷದೊಂದಿಗೆ ಕುಣಿತ, ಪ್ರವಾಸೋದ್ಯಮ ಬೆಳವಣಿಗೆ ಬೀದಿಆಹಾರ ಉತ್ಸವ ಕೂಡ ಮಾಡಿದ್ದು ಇನ್ನಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಮೂಡಾ ಅಧ್ಯಕ್ಷ ರವಿಶಂಕರ್ ಮಿಜಾರ್, ಮೀನುಗಾರಿಕಾ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ನಿತಿನ್ ಕುಮಾರ್, ಚುನಾವಣಾ ಉಸ್ತುವಾರಿ ಸುಪ್ರಸಾದ್ ಶೆಟ್ಟಿ, ಮಂಡಲ ಬಿಜೆಪಿ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ, ಮಾಜಿ ಮೇಯರ್ ಗಳಾದ ದಿವಾಕರ್ ಪಾಂಡೇಶ್ವರ, ಪ್ರೇಮಾನಂದ ಶೆಟ್ಟಿ ಪ್ರಮುಖರಾದ ಸಂತೋಷ್ ಕುಮಾರ್ ರೈ ಬೋಳಿಯಾರ್, ರೂಪಾ ಡಿ ಬಂಗೇರ, ಸುರೇಂದ್ರ ಜೆ ಹಾಗೂ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.

Comments are closed.