Uncategorized

ಫೆಬ್ರವರಿ 22 ಮತ್ತು 23 :ಪಾಲೆಮಾರ್ ಗಾರ್ಡನ್‌ನಲ್ಲಿ “ಕ್ಷಾತ್ರ ಸಂಗಮ-3”, ರಾಮಕ್ಷತ್ರಿಯರ ಸಮಾವೇಶ

Pinterest LinkedIn Tumblr

ಮಂಗಳೂರು : ರಾಮಕ್ಷತ್ರಿಯ ಸೇವಾ ಸಂಘ(ರಿ) ಮಂಗಳೂರು ಇದರ ನೇತೃತ್ವದಲ್ಲಿ ಇದೇ ಬರುವ ತಾ 22 ಮತ್ತು 23 ಫೆಬ್ರವರಿ 2025 ರಂದು ಮೋರ್ಗನ್ಸ್‌ ಗೇಟ್‌ನಲ್ಲಿರುವ ಪಾಲೆಮಾರ್ ಗಾರ್ಡನ್ ನಲ್ಲಿ “ಕ್ಷಾತ್ರ ಸಂಗಮ-3” ಎಂಬ ರಾಮಕ್ಷತ್ರಿಯರ ಸಮಾವೇಶ ನಡೆಯಲಿದೆ ಎಂದು ರಾಮಕ್ಷತ್ರಿಯ ಸೇವಾ ಸಂಘದ ಅಧ್ಯಕ್ಷರಾದ ಶ್ರೀ ಮುರಳೀಧರ್ ಸಿ.ಎಚ್ ತಿಳಿಸಿದರು.

ನಗರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಸಮಾಜವನ್ನು ಒಟ್ಟುಗೂಡಿಸುವುದು ಮತ್ತು ಯುವ ಜನತೆಗೆ ನಮ್ಮ ಸಮಾಜದ ಸಂಸ್ಕೃತಿ, ಆಚಾರ, ವಿಚಾರ, ಆಚರಣೆ, ಪರಂಪರೆಯನ್ನು ತಿಳಿಯಪಡಿಸುವುದೆಂದು ಅವರು ತಿಳಿಸಿದರು.

ಈ ಸಮಾವೇಶದಲ್ಲಿ ರಾಮಕ್ಷತ್ರಿಯ ಸಮಾಜದ ಎಲ್ಲಾ ಹಿರಿಯ, ಕಿರಿಯ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ವಿವಿಧ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಮಾಜದ ಯುವ ಸಮುದಾಯ, ಮಹನೀಯರು ಮತ್ತು ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ರಾಮಕ್ಷತ್ರಿಯ ಸಮಾಜದ ಸುಮಾರು 52 ಸಂಘಗಳ ಪ್ರತಿನಿಧಿಗಳು ಮತ್ತು ಸದಸ್ಯರು ಈ ಸಮಾವೇಶಕ್ಕೆ ಆಹ್ವಾನಿತರು. ತಾ 22 ರಂದು ಬೆಳಗ್ಗೆ ಗಂಟೆ 9.00 ರಿಂದ ರಾಮತಾರಕ ಯಜ್ಞ ಮತ್ತು ಜಪ ನಡೆಯಲಿದೆ. ತದನಂತರ “ಹನುಮಾನ್ ಚಾಲೀಸ” ಕಂಠಪಾಠ ಸ್ಪರ್ಧೆ, ಪುಷ್ಪ ಜೋಡಣೆ, ರಂಗವಲ್ಲಿ ಸ್ಪರ್ಧೆಗಳು ನಡೆಯಲಿದೆ. ಇದರ ಜೊತೆ ವಧುವರ ಅನ್ವೇಷಣೆ ಮತ್ತು ಉದ್ದಿಮೆದಾರರ ಸಮಾವೇಶ ಕೂಡಾ ಇರಲಿದೆ ಎಂದು ಅವರು ತಿಳಿಸಿದರು.

ಸಮಾವೇಶದ ಮುಖ್ಯ ಸಂಚಾಲಕರಾದ ಶ್ರೀ ಜೆ.ಕೆ.ರಾವ್ ಅವರು ಮಾತನಾಡಿ, ಸಂಜೆ ಗಂಟೆ 4.00 ರಿಂದ ಉದ್ಘಾಟನಾ ಸಮಾರಂಭ ನಡೆಯಲಿದೆ. ಶ್ರೀ ಜೆ ಕೃಷ್ಣ ಪಾಲೆಮಾರ್ ಉದ್ಘಾಟನೆ ನೆರವೇರಿಸಲಿರುವರು. ಸಂಘದ ಅಧ್ಯಕ್ಷರಾದ ಶ್ರೀ ಮುರಳೀಧರ್ ಸಿ.ಎಚ್. ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀ ಶ್ರೀಕಾಂತ್ ಶೆಟ್ಟಿ, ಕಾರ್ಕಳ ಇವರಿಂದ ದಿಕ್ಕೂಚಿ ಭಾಷಣನಡೆಯಲಿದ್ದು ತದನಂತರ ರಾಮಕ್ಷತ್ರಿಯ ಸೇವಾ ಸಂಘ(ರಿ), ಮಂಗಳೂರು ಇದರ ಮಹಿಳಾ ಮತ್ತು ಯುವ ವೃಂದದ ಸದಸ್ಯರಿಂದ ‘ಕರ್ನಾಟಕ ವೈಭವ’ ಎನ್ನುವ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ ಎಂದು ತಿಳಿಸಿದರು.

ತಾ 23 ರಂದು ರಾಮಕ್ಷತ್ರಿಯ ಸಮಾಜದ ಊರ, ಪರವೂರ ವಿವಿಧ ಸಂಘಗಳ ಸದಸ್ಯರಿಂದ ಪ್ರತಿಭಾ ಸ್ಪರ್ಧೆ ನಡೆಯಲಿದೆ. ಇದರ ಜೊತೆಯಲ್ಲಿ ರಾಮಕ್ಷತ್ರಿಯರ ಪಾರಂಪರಿಕ ಸಸ್ಯಹಾರಿ ಆಹಾರೋತ್ಸವ ಸ್ಪರ್ಧೆ ಕೂಡಾ ನಡೆಯಲಿದೆ. ಮಧ್ಯಾಹ್ನ ಗಂಟೆ 2.00 ರಿಂದ ಯುವ ಮತ್ತು ಮಹಿಳಾ ಸಮ್ಮೇಳನ, ಗಂಟೆ 3.00 ರಿಂದ ವಿಚಾರ ಗೋಷ್ಠಿ ನಡೆಯಲಿದೆ.

ಸಂಜೆ ಗಂಟೆ 5.00 ರಿಂದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಜೆ ಕೃಷ್ಣ ಪಾಲೆಮಾರ್ ವಹಿಸಲಿರುವರು. ಈ ಸಮಾವೇಶಕ್ಕೆ ವಿಶೇಷ ಅತಿಥಿಯಾಗಿ ಮೈಸೂರು ಮಹಾರಾಜರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಹಾಗೂ ಸಂಸದರು, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಮತ್ತು ಅತಿಥಿಗಳಾಗಿ ಕ್ಯಾಪ್ಟನ್ ಬ್ರಿಜೇಶ್ ಚೌಟ, ಸಂಸದರು, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ, ಶ್ರೀ ಉಮನಾಥ್ ಕೋಟ್ಯಾನ್, ಶಾಸಕರು, ಮುಲ್ಕಿ-ಮೂಡಬಿದಿರೆ ವಿಧಾನಸಭಾ ಕ್ಷೇತ್ರ ಭಾಗವಹಿಸಲಿದ್ದಾರೆ. ಇದರೊಂದಿಗೆ ಊರ ಪರವೂರ ಅನೇಕ ಗಣ್ಯರ ಘನ ಉಪಸ್ಥಿತಿ ಇರಲಿದ್ದಾರೆಂದು ತಿಳಿಸಿದರು.

ಮಾಜಿ ಸಚಿವರಾದ ಕೃಷ್ಣ.ಜೆ ಪಾಲೆಮಾರ್ ಅವರು ಮಾತನಾಡಿ, ಅಂದು ರಾಮಕ್ಷತ್ರಿಯ ಸಮಾಜದ ಅತೀ ಹಿರಿಯ ವ್ಯಕ್ತಿಗಳಿಗೆ ಸನ್ಮಾನ ಕಾರ್ಯಕ್ರಮ ಮತ್ತು ಕೆಲವು ಗಣ್ಯರನ್ನು ಸನ್ಮಾನಿಸಲಾಗುವುದು. ಈ ಹಿಂದೆ 2014 ಮತ್ತು 2016 ರಲ್ಲಿ 2 ಬಾರಿ “ಕ್ಷಾತ್ರ ಸಂಗಮ”ವು ವಿಜೃಂಭಣೆಯಿಂದ ನಡೆದಿತ್ತು ಇದು ಮೂರನೇ ವರ್ಷದ ಕಾರ್ಯಕ್ರಮವಾಗಿದೆ. ಮುಂದಿನ ಕಾಲ ದ ದೇಶದ ಭದ್ರತೆಗೆ ಕೋಟೆಯನ್ನು ಕಟ್ಟಿದ್ದು ರಾಮಕ್ಷತ್ರಿಯರು ಇದರಿಂದಾಗಿ ನಮ್ಮ ಒಗ್ಗೂಡಿಸಲು ಇದೊಂದು ಉತ್ತಮ ಕಾರ್ಯವೆಂದು ಹೇಳಿದರು

ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ರವೀಂದ್ರ ಕೆ,ರವೀಂದ್ರ ರಾವ್ , ಕೃಷ್ಣ ಮುರಳಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Comments are closed.