ಕರ್ನಾಟಕ

ವಿಜ್ಞಾನಿಗಳ ಮುಂದೆ ಮಹತ್ವದ ಪಥ ಸರಿಪಡಿಸುವಿಕೆ ಸವಾಲು; ಮಂಗಳಯಾನ: ಇಂದು ‘ಅಗ್ನಿ’ಪರೀಕ್ಷೆ

Pinterest LinkedIn Tumblr

pvec220914mars

ಬೆಂಗಳೂರು (ಪಿಟಿಐ): ಭಾರತದ ಮಂಗಳ ನೌಕೆ ಕಕ್ಷೆಯನ್ನು ಸಂಧಿಸಲು ಕ್ಷಣ­ಗಣನೆ ಆರಂಭವಾಗಿದೆ. ಅದಕ್ಕೆ ಪೂರ್ವಭಾವಿ­ಯಾಗಿ ಸೋಮವಾರ (ಸೆ.23) ಅತ್ಯಂತ ಮಹತ್ವದ ನೌಕೆಯ ಪಥ ಸರಿಪಡಿಸುವಿಕೆ ಮತ್ತು ಮುಖ್ಯ ದ್ರವ ಎಂಜಿನ್ನಿನ ದಹನಶೀಲತೆಯ ಪರೀಕ್ಷೆ ನಡೆಸಲು ಇಸ್ರೊ ಸಜ್ಜಾಗಿದೆ.

ಮುನ್ನೂರು ದಿನಗಳಿಂದ ನಿದ್ರಾವಸ್ಥೆ­ಯಲ್ಲಿ ಇರಿಸ­ಲಾ­ಗಿರುವ 440 ನ್ಯೂಟನ್‌ ನೂಕುಬಲದ ದ್ರವ ಎಂಜಿನನ್ನು ಸೆ. 23ರಂದು ಸುಮಾರು 4 ಸೆಕೆಂಡು­ಗಳ ಕಾಲ ಉರಿಸುವ ಯೋಜನೆ ಇದೆ. ಇದು ಯಶಸ್ವಿ­ಯಾದರೆ ಗಗನನೌಕೆಯನ್ನು ಮಂಗಳ ಕಕ್ಷೆಗೆ ಸೇರಿಸುವ ಬಗ್ಗೆ ಇಸ್ರೊದ ವಿಜ್ಞಾನಿಗಳ ವಿಶ್ವಾಸ ಹೆಚ್ಚಾಗಲಿದೆ.

‘ನೌಕೆಯ ಪಥವನ್ನು ನಾಲ್ಕನೇ ಬಾರಿಗೆ ಸರಿಪಡಿಸಲು ಮತ್ತು ಮುಖ್ಯ ದ್ರವ ಎಂಜಿನ್‌ ಉರಿಸುವ ಪರೀಕ್ಷೆ­ಯನ್ನು ನಡೆಸಲು ನಾವೆಲ್ಲರೂ ಸಜ್ಜಾಗಿದ್ದೇವೆ. ಇದ­ಕ್ಕಾಗಿ ಈಗಾಗಲೇ ಸಂಕೇತಾಜ್ಞೆ ಗಳನ್ನು ನೌಕೆಯ ಸಾಧನಕ್ಕೆ ಕಳಿಸಿ ಪರಿಶೀಲನೆ ನಡೆಸಲಾಗಿದೆ’ ಎಂದು ಇಸ್ರೊ ಅಧಿಕಾರಿ­ಯೊಬ್ಬರು ತಿಳಿಸಿದ್ದಾರೆ.

ಒಂದೊಮ್ಮೆ ಸೋಮವಾರ ದ್ರವ ಎಂಜಿನ್‌ ಮರು­ಚಾಲನೆ ವಿಫಲವಾದರೆ ಇಸ್ರೊ ಮುನ್ನೆಚ್ಚರಿಕೆ ಕ್ರಮವಾಗಿ ಮತ್ತೊಂದು ಯೋಜನೆಯನ್ನೂ ನೌಕೆಗೆ ಅಳವಡಿಸಿದೆ. ಆ ಪ್ರಕಾರ, ಸೆ. 24ರಂದು ಎಂಟು ಥ್ರಸ್ಟರ್‌ಗಳನ್ನು ಹೆಚ್ಚಿನ ಅವಧಿಗೆ ಉರಿಸಿ ನೌಕೆಯನ್ನು ಮಂಗಳ ಕಕ್ಷೆಗೆ ಸೇರಿಸಲು ಯತ್ನಿಸಲಾಗುವುದು. ಈ ವಿಧಾನದಲ್ಲಿ ಇಂಧನ ಬಳಕೆ ಸ್ವಲ್ಪ ಹೆಚ್ಚುತ್ತದೆ.

‘ಮುನ್ನೂರು ದಿನಗಳಿಂದ ನಿದ್ರಾವಸ್ಥೆಯಲ್ಲಿ ಇರಿಸ­ಲಾಗಿರುವ ಎಂಜಿನ್‌ ಮತ್ತೆ ಸರಿಯಾಗಿ ಉರಿಯ­ಲಿ­ದೆಯೇ ಎಂಬುದೇ ಕುತೂಹಲದ ವಿಷಯವಾಗಿದೆ. ಇದು ಎಂಜಿನ್‌ ಉರಿಸುವಿಕೆಯ ಪರೀಕ್ಷಾರ್ಥ ಪ್ರಯೋಗ ಇದ್ದಂತೆ. 24ರಂದು ನೌಕೆಯನ್ನು ಮಂಗಳನ ಕಕ್ಷೆಗೆ ಸೇರಿಸುವಾಗ ಈ ಎಂಜಿನ್‌ನ್ನು ಹೆಚ್ಚಿನ ಅವಧಿಗೆ ಉರಿಸಬೇಕಾಗುತ್ತದೆ’ ಎಂದೂ ಅವರು ಹೇಳಿದರು.

Write A Comment