ಕರಾವಳಿ

ಯುವಕನ ಶಂಕಾಸ್ಪದ ಸಾವು: ಸ್ಥಳೀಯರ ಆಕ್ರೋಷ: ತನಿಖೆಗೆ ಒತ್ತಾಯ

Pinterest LinkedIn Tumblr
ಕುಂದಾಪುರ: ಖಾರ್ವಿಕೇರಿಯ ಪಂಚಗಂಗಾವಳಿ ನದಿಯಲ್ಲಿ ಮಂಗಳವಾರ ಸಂಜೆ ಶವವಾಗಿ ಪತ್ತೆಯಾದ ಪ್ರಮೋದ್ ಖಾರ್ವಿ(24)ಯನ್ನು ದುಷ್ಕರ್ಮಿಗಳು ಕೊಲೆಗೈದಿದ್ದಾರೆ ಎಂಬ ಆತನ ತಾಯಿ ಜಯಲಕ್ಷ್ಮೀ ಹೇಳಿಕೆಯಂತೆ ಕುಂದಾಪುರ ಪೊಲೀಸರು ಬುಧವಾರ ಸಂಶಯಾಸ್ಪದ ಸಾವು ಪ್ರಕರಣ ದಾಖಲಾಗಿದೆ.

ಕಳೆದ ಕೆಲವು ದಿನಗಳ ಹಿಂದೆ ದೂರವಾಣಿ ಮೂಲಕ ತನಗೆ ಜೀವ ಬೆದರಿಕೆ ಇರುವುದಾಗಿ ಪುತ್ರ ತಿಳಿಸಿದ್ದ. ನಾಲ್ವರ ಹೆಸರನ್ನು ಹೇಳಿದ್ದಲ್ಲದೆ ತಾನು ಕೆಲಸ ಬಿಉವುದಾಗಿ ಹೇಳಿದ್ದ. ಉತ್ತಮ ಈಜುಪಟು ಆಗಿರುವ ಪುತ್ರ ನದಿಗೆ ಬಿದ್ದು ಸಾವನ್ನಪ್ಪಲು ಸಾಧ್ಯವಿಲ್ಲ. ಸಾವಿನ ಬಗ್ಗೆ ಸಂಶಯವಿದೆ’ ಎಂದು ದೂರಿನಲ್ಲಿ ಮತನ ತಾಯಿ ತಿಳಿಸಿದ್ದಾರೆ.

 

Kundapur youth dead
ಮತದೇಹದ ಮರಣೋತ್ತರ ಪರೀಕ್ಷೆಯನ್ನು ಮಣಿಪಾಲ ಆಸ್ಪತ್ರೆಯಲ್ಲಿ ನಡೆಸಿ ವಾರೀಸುದಾರರಿಗೆ ಬಿಟ್ಟುಕೊಡಲಾಗಿದೆ.

ಪ್ರಮೋದ್ ಖಾರ್ವಿ ಅಸಹಜ ಸಾವಿನ ಹಿನ್ನೆಲೆಯಲಿ ಸ್ಥಳೀಯ ಉದ್ವಿಗ್ನತೆ ಉಂಟಾಯಿತು. ಯಾರೊ ಹತ್ಯೆಗೈದು ನದಿಗೆ ಎಸೆದಿದ್ದಾರೆ ಎಂಬ ಗುಸು ಗುಸು ಹಬ್ಬಿದ್ದರಿಂದ ಬುಧವಾರ ಪರಿಸ್ಥಿತಿ ಬಿಗಡಾಯಿಸಿತು. ಖಾರ್ವಿಕೇರಿಯಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಮರಳುಗಾರಿಕೆ ದಂಧೆಯಲ್ಲಿ ತೊಡಗಿಸಿಕೊಂಡಿರುವ ಅನ್ಯ ರಾಜ್ಯದ ಮಂದಿಯ ವಿರುದ್ಧ ಈ ಆಕ್ರೋಶ ತಿರುಗಿ, ಪರಿಸ್ಥಿತಿ ವಿಕೋಪಕ್ಕೆ ತಿರುಗಿದ್ದರಿಂದ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಮುಂಜಾಗ್ರತೆ ಕ್ರಮವಾಗಿ ಪರಿಸರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

ತನಿಖೆಗೆ ಆಗ್ರಹ: ಬುಧವಾರ ಬೆಳಗ್ಗೆ ಖಾರ್ವಿಕೇರಿ ನಿವಾಸಿಗಳು ಮರಳುಗಾರಿಕೆ ಮಾಫಿಯಾ ಅಮಾಯಕ ಯುವಕನ ಹತ್ಯೆಗೈದಿದೆ ಎಂದು ಆರೋಪಿಸಿ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿದರು. ಬಳಿಕ ಕುಂದಾಪುರ ಶಾಸ್ತ್ರೀವತ್ತದಲ್ಲಿ ಮತ ಯುವಕನ ಶವವಿಟ್ಟು ಪ್ರತಿಭಟಿಸಿದರು. ರಸ್ತೆ ತಡೆ ನಡೆಸಿದರು.

ಈ ಸಂದರ್ಭ ಶಾಸ್ತ್ರೀ ವ್ರತ್ತದಲ್ಲಿ ಶವವನ್ನಿಟ್ಟು ಪ್ರತಿಭಟಿಸುತ್ತಿದ್ದ ಉದ್ರಿಕ್ತರನ್ನು ಸಮಾಧಾನಪಡಿಸಲು ಆಗಮಿಸಿದ ಡಿವೈಎಸ್ಪಿ ಸಿ.ಬಿ.ಪಾಟೀಲ್ ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಪ್ರತಿಭಟನಕಾರರು ಅಸಮಾಧಾನ ವ್ಯಕ್ತಪಡಿಸಿದರು.  ಸರ್ಕಲ್ ಇನ್ಸ್‌ಪೆಕ್ಟರ್ ಎಂ.ದಿವಾಕರ್ ಪ್ರತಿಭಟನಾಕಾರರಿಗೆ ನ್ಯಾಯ ದೊರಕಿಸಿಕೊಡುವ ಮನವಿ ಮಾಡಿಕೊಂಡ ಮೇರೆಗೆ ಉದ್ರಿಕ್ತ ನಾಗರಿಕರು ಸಮಾದಾನಗೊಂಡರು. ಬಳಿಕ ಶವಮೆರವಣಿಗೆ ನಡೆಸಿ ಅಂತ್ಯವಿಧಿ ನೆರವೇರಿಸಲಾಯಿತು.
ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಬುಧವಾರ ಖಾರ್ವಿಕೇರಿಗೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

Write A Comment