ಕರ್ನಾಟಕ

ಅನಿಶ್ಚಿತತೆಯಲ್ಲಿ ಎತ್ತಿನಹೊಳೆ ನೀರಾವರಿ ಯೋಜನೆ; ಅಪ್ಪ–ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು

Pinterest LinkedIn Tumblr

pvec251214ckb1

ಚಿಕ್ಕಬಳ್ಳಾಪುರ: ಬಯಲುಸೀಮೆ ಜನರ ನೀರಾವರಿ ಕನಸು ಇದೀಗ ಮಬ್ಬಾಗು­ತ್ತಿದೆ. ನೀರಾವರಿ ತಜ್ಞ ಜಿ.ಎಸ್‌. ಪರಮ­ಶಿವಯ್ಯ ವರದಿಯಾಧಾರಿತ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಕ್ಕಾಗಿ ಈ ಭಾಗದ ಜನ ಅನೇಕ ವರ್ಷಗಳಿಂದ ಹೋರಾಟ ನಡೆಸಿದ್ದರು. ರಾಜ್ಯ ಸರ್ಕಾರ ದಿಢೀರನೇ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ ಪ್ರಸ್ತಾಪಿಸಿ 6 ತಿಂಗಳ ಹಿಂದೆ ಶಂಕುಸ್ಥಾಪನೆ ನೆರವೇರಿಸಿದಾಗ ಜನರಲ್ಲಿ ಹೊಸ ಆಶಾಕಿರಣ ಮೂಡಿತ್ತು.

ಪಶ್ಚಿಮಘಟ್ಟದಲ್ಲಿ ಹರಿದು ವ್ಯರ್ಥ­ವಾಗಿ ಸಮುದ್ರಕ್ಕೆ ಸೇರುತ್ತಿರುವ ನೇತ್ರಾವತಿ ನದಿಯ ನೀರನ್ನು ಬಯಲು­ಸೀಮೆ ಪ್ರದೇಶಕ್ಕೆ ಹರಿಸ­ಬೇಕೆಂದು ಒತ್ತಾ­ಯಿಸಿ ಪಾದಯಾತ್ರೆ, ಧರಣಿ ನಡೆಸಿ­ದಾಗ ರಾಜ್ಯ ಸರ್ಕಾರ, ‘ಎತ್ತಿನಹೊಳೆ ಮೊದಲು, ಶಾಶ್ವತ ನೀರಾವರಿ ಯೋಜನೆ ನಂತರ’ ಎಂಬರ್ಥದ ಭರವಸೆ ನೀಡಿತ್ತು.

ಆದರೆ ಪರಿಸರ ತಜ್ಞರು, ಕರಾವಳಿ– ಮಲೆನಾಡಿನ ಜನರು ಯೋಜನೆಗೆ ಆಕ್ಷೇಪಿ­ಸುತ್ತಿರುವಾಗ ಸರ್ಕಾರ ನಿಲುವು ಬದಲಾಗದೇ ಎಂಬ ಪ್ರಶ್ನೆ ಬಯಲು­ಸೀಮೆ ಜನರಲ್ಲಿ ಮೂಡಿದೆ.

‘ಬಯಲು ಸೀಮೆ ಪ್ರದೇಶಕ್ಕೆ ನೀರು ಹರಿಸಲು ಇಷ್ಟವಿಲ್ಲದ ಪರಿಸರ ತಜ್ಞರು ಮತ್ತು ಜನರು ಅನಗತ್ಯ ವಿವಾದ ಸೃಷ್ಟಿ­ಸು­ತ್ತಿದ್ದಾರೆ. ಯೋಜನೆ ಅನು­ಷ್ಠಾನಕ್ಕೆ ಅತ್ಯಾಧುನಿಕ ಮಾದರಿ ತಂತ್ರಜ್ಞಾನ­ವಿದ್ದರೂ ಗೊಂದಲ ಮೂಡಿಸಲಾಗು­ತ್ತಿದೆ. ಇದರ ಬಗ್ಗೆ ರಾಜ್ಯ ಸರ್ಕಾರ ಸಹ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ’ ಎಂದು ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್‌.ಆಂಜನೇಯರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಯಲುಸೀಮೆ ಪ್ರದೇಶದ ಜನರ ವಿರೋಧದ ನಡುವೆಯೇ ತರಾತುರಿ­ಯಲ್ಲಿ ಲೋಕಸಭಾ ಚುನಾವಣೆ ಘೋಷ­ಣೆಯಾಗುವ ಮುನ್ನ ಚಿಕ್ಕಬಳ್ಳಾ­ಪುರ­ದಲ್ಲಿ ಎತ್ತಿನಹೊಳೆ ಯೋಜನೆಗೆ ಚಾಲನೆ ನೀಡಿದ ಸರ್ಕಾರವು ಬಯಲು­ಸೀಮೆ ಪ್ರದೇಶಕ್ಕೆ ಎಷ್ಟು ಪ್ರಮಾಣ ನೀರು ಬೇಕು? ಎಷ್ಟು ಕೆರೆ ಭರ್ತಿ­ಯಾ­ಗ­ಬೇಕು? ಎತ್ತಿನಹೊಳೆ ನೀರಿನ ಶೇಖ­ರಣಾ ಪ್ರಮಾಣ ಎಷ್ಟಿದೆ ಮುಂತಾದ ವಿಷಯ­ಗಳ ಬಗ್ಗೆ ಸಮ­ರ್ಪಕ ಅಧ್ಯ­ಯನವೇ ನಡೆಸಬೇಕಿತ್ತು’ ಎಂಬುದು ಅವರ ಅಭಿಪ್ರಾಯ.

‘ಪರಮಶಿವಯ್ಯ ವರದಿ ಆಧಾರಿತ ಶಾಶ್ವತ ನೀರಾವರಿ ಯೋಜನೆ ಕುರಿತು ಸ್ಪಷ್ಟ ನಿಲುವು ತಿಳಿಸದ ರಾಜ್ಯ ಸರ್ಕಾರ ಎತ್ತಿನಹೊಳೆ ಯೋಜನೆ ಮುಂದಿಟ್ಟು ಇನ್ನಷ್ಟು ಗೊಂದಲ ಮೂಡಿ­­­ಸು­ತ್ತಿದೆ. ಎತ್ತಿನಹೊಳೆ ಯೋಜ­ನೆ­­ಯ­ಲ್ಲದೇ ಶರಾವತಿ ನೀರಾವರಿ ಯೋಜನೆ, ಮೇಕೆದಾಟು ಯೋಜನೆ, ಬೆಂಗಳೂರಿ­ನಿಂದ ಕೊಳಚೆ ನೀರು ಶುದ್ಧಗೊಳಿಸಿ ಹರಿಸುವ ಯೋಜನೆ, ಕೆಜಿಎಫ್‌ ಚಿನ್ನದ ಗಣಿಯ ನೀರಿನ ಯೋಜನೆ ಹೀಗೆ ಹತ್ತು ಹಲವು ಯೋಜನೆಗಳನ್ನು ಪ್ರಸ್ತಾಪಿಸು­ತ್ತಿದೆ. ಯಾವುದೇ ನಿರ್ದಿಷ್ಟ ಯೋಜನೆ ಬಗ್ಗೆ ಬದ್ಧತೆ ತೋರುತ್ತಿಲ್ಲ’ ಎಂದು ಅವಿಭಜಿತ ಕೋಲಾರ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಜಿ.ವಿ.­ಶ್ರೀರಾಮರೆಡ್ಡಿ ತಿಳಿಸಿದರು.

ಟ್ಯಾಂಕರ್‌ ನೀರು ಪೂರೈಕೆ
ನದಿನಾಲೆ, ಕೆರೆಕುಂಟೆಗಳು ಬರಿದಾಗಿ ಕೊಳವೆ­ಬಾವಿಗಳನ್ನು ಆಶ್ರಯಿಸಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸದ್ಯಕ್ಕೆ 676 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. 275 ಗ್ರಾಮಗಳಿಗೆ ಟ್ಯಾಂಕರ್‌ನಿಂದ ನೀರು ಪೂರೈಸಲಾಗುತ್ತಿದೆ.
ನೀರಿಗಾಗಿ ಪಂಚಾಯತ್ ರಾಜ್ ಮತ್ತು ಸ್ಥಳೀಯ ಆಡಳಿತ ಸಂಸ್ಥೆಗಳ ಎದುರು ಪ್ರತಿ­ದಿನ ಪ್ರತಿಭಟನೆ ನಡೆಯುತ್ತಿದೆ. ‘ಅಂತರ್ಜಲದ ಪ್ರಮಾಣ ಕುಸಿಯತೊಡ­ಗಿದ್ದು ಕೊಳವೆಬಾವಿಗಳು ಬರಿದಾಗತೊಡಗಿವೆ. 1500 ಅಡಿಗಳಷ್ಟು ಆಳದ ಕೊಳವೆ­ಬಾವಿ ಕೊರೆಸಿದರೂ ನೀರು ಸಿಗುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ನಾವು ಬದುಕಲು ಕೃಷಿ ಚಟುವಟಿಕೆ ಕೈಗೊಳ್ಳುವುದು ಹೇಗೆ? ಎತ್ತಿನಹೊಳೆಯಿಂದ ಕುಡಿಯಲು ನೀರು ಬಂದರೆ ಸಾಕೇ? ಕೆರೆಕುಂಟೆ ತುಂಬುವುದು ಮತ್ತು ಅಂತರ್ಜಲ ಪ್ರಮಾಣ ವೃದ್ಧಿಯಾಗುವುದು ಬೇಡವೇ’ ಎಂದು ರೈತರು ಪ್ರಶ್ನಿಸುತ್ತಾರೆ.

Write A Comment