ಜಗತ್ತಿನ ಅತೀ ಎತ್ತರದ ರೈಲ್ವೇ ಸೇತುವೆ ಭಾರತದಲ್ಲಿ ನಿರ್ಮಾಣಗೊಳ್ಳುತ್ತಿದೆ. ಜಮ್ಮು-ಕಾಶ್ಮೀರದ ಉತ್ತರ ಭಾಗದಲ್ಲಿರುವ ಚೆನಾಬ್ ನದಿಯ ಮೇಲೆ ನಿರ್ಮಿಸಲಾಗುತ್ತಿರುವ ಈ ರೈಲ್ವೇ ಸೇತುವೆಯ ಕಾಮಗಾರಿ 2016ಕ್ಕೆ ಕೊನೆಗೊಳ್ಳುವ ನಿರೀಕ್ಷೆಯಿದೆ. ನಿರ್ಮಾಣ ಪೂರ್ಣಗೊಳ್ಳುವ ವೇಳೆಗೆ 359 ಮೀಟರ್ ಎತ್ತರವಿರಲಿದೆ ಎನ್ನಲಾಗಿದೆ.
ಚೀನಾದಕ್ಕಿಂತಲೂ ಎತ್ತರದ್ದು…
ಈಗ ಇರುವ ಅತೀ ಎತ್ತರದ ರೈಲ್ವೇ ಬ್ರಿಡ್ಜ್ ಎಂದರೆ ಚೀನಾದ ಬೈಪಾಂಜಿಯಾಂಗ್ ನದಿಗೆ ಕಟ್ಟಲಾದ ರೈಲ್ವೇಸೇತುವೆ. ಇದು 275 ಮೀಟರ್’ನಷ್ಟು ಎತ್ತರವಾಗಿದೆ. ಇದಕ್ಕಿಂತಲೂ ಸುಮಾರು 84 ಅಡಿಗಳಷ್ಟು ಎತ್ತರವಾಗಲಿದೆ ಭಾರತದ ಹೊಸ ರೈಲ್ವೇ ಸೇತುವೆ.
ಎತ್ತರ ಹೋಲಿಕೆ ಮಾಡುವುದಿದ್ದರೆ, ಈ ಚೆನಾಬ್ ನದಿಯ ರೈಲ್ವೇ ಸೇತುವೆ ಪ್ಯಾರಿಸ್’ನ ಐಫೆಲ್ ಟವರ್’ಗಿಂತಲೂ 35 ಅಡಿಗಳಷ್ಟು ಎತ್ತರವಾಗಲಿದೆ.
2002ರಲ್ಲೇ ಆರಂಭವಾಗಿತ್ತು..
ಸುಮಾರು 1,315 ಮೀಟರ್ ಉದ್ದದ ಈ ಸೇತುವೆಯ ನಿರ್ಮಾಣ ಕಾರ್ಯ 2002ರಲ್ಲೇ ಆರಂಭಗೊಂಡಿತ್ತು. 25 ಸಾವಿರ ಟನ್’ಗೂ ಹೆಚ್ಚು ಉಕ್ಕು ಹಾಗೂ ಇತರೆ ಸಾಮಾಗ್ರಿಗಳನ್ನು ಬಳಸಿ ಈ ಹೆಮ್ಮೆಯ ಕಾಮಗಾರಿ ಮುಂದುವರೆದಿದೆ. ಈ ಪ್ರದೇಶಕ್ಕೆ ರಸ್ತೆ ಸಂಪರ್ಕ ಇಲ್ಲದೆ ಇರುವುದರಿಂದ ಅಗತ್ಯ ಸಾಮಗ್ರಿ ಸಾಗಣೆಗೆ ಸೇತುವೆವರೆಗೂ ರಸ್ತೆಗಳನ್ನೂ ನಿರ್ಮಿಸಲಾಗುತ್ತಿದೆ. ಪ್ರತಿಕೂಲ ಹವಾಮಾನ ಇರುವುದರಿಂದ ಹೆಲಿಕಾಪ್ಟರ್’ಗಳ ನೆರವನ್ನೂ ಬಳಸಲಾಗುತ್ತಿದೆ.
ಅಸಾಮಾನ್ಯ ಸೇತುವೆ…
ಹಲವು ರೀತಿಯ ಸವಾಲುಗಳ ನಡುವೆಯೂ ಎಂಜಿನಿಯರ್’ಗಳು ಹಾಗೂ ಕಾರ್ಮಿಕರು ಧೃತಿಗೆಡದೇ ಅದ್ಭುತ ಸೇತುವೆಯ ನಿರ್ಮಾಣದಲ್ಲಿ ತೊಡಗಿರುವುದು ನಿಜಕ್ಕೂ ನಮಗೆಲ್ಲಾ ಹೆಮ್ಮೆಯೇ. ಚಂಡಮಾರುತ, ಭೂಕಂಪ ಮೊದಲಾದ ನೈಸರ್ಗಿಕ ವಿಕೋಪಗಳನ್ನ ಸಹಿಸಿಕೊಳ್ಳುವಷ್ಟು ಶಕ್ತವಾಗಿರಲಿದೆ ಈ ಮಹಾ ಸೇತುವೆ.
ಪ್ರಮುಖ ಕೊಂಡಿ…
ಕೊಂಕಣ ರೈಲ್ವೆ ನಿರ್ವಹಿಸುತ್ತಿರುವ ಈ ನಿರ್ಮಾಣ ಕಾರ್ಯದ ಯೋಜನೆಯ ವೆಚ್ಚ ಸುಮಾರು 500 ಕೋಟಿ ರುಪಾಯಿ ಎಂದು ಅಂದಾಜಿಸಲಾಗಿದೆ. ಈ ಬ್ರಿಜ್ ನಿರ್ಮಾಣ ಮುಗಿದ ಬಳಿಕ ಬಾರಾಮುಲ್ಲಾ ಮತ್ತು ಜಮ್ಮು ನಡುವೆ ಒಂದು ಪ್ರಮುಖ ಸಂಪರ್ಕ ಕೊಂಡಿಯಾಗಲಿದೆ. ಸದ್ಯಕ್ಕೆ ಈ ಎರಡು ಪಟ್ಟಣಗಳ ನಡುವೆ ಸಂಚರಿಸಲು ಬರೋಬ್ಬರಿ 14 ಗಂಟೆ ತಗಲುತ್ತದೆ. ಈ ಹೊಸ ಸೇತುವೆಯಿಂದ ಪ್ರಯಾಣ ಅವಧಿ 6.5 ಕಿಮೀಗೆ ಇಳಿಯಲಿದೆ.