ನವದೆಹಲಿ: ಮುಂದಿನ ವರ್ಷ ಬ್ರೆಜಿಲ್ನಲ್ಲಿ ನಡೆಯಲಿರುವ ರಿಯೋ ಒಲಿಂಪಿಕ್ಸ್ ಕ್ರೀಡಾಕೂಟದ ಕುಸ್ತಿ ರೆಫ್ರಿಗಳನ್ನು ಯುನೈಟೆಡ್ ವರ್ಲ್ಡ್ ರೆಸ್ಲಿಂಗ್ (ಯುಡಬ್ಲ್ಯುಡಬ್ಲ್ಯು) ಪ್ರಕಟಿಸಿದ್ದು, ಭಾರತದ ಅಂತಾರಾಷ್ಟ್ರೀಯ ರೆಫ್ರಿ ಅಶೋಕ್ ಕುಮಾರ್ ಆಯ್ಕೆಯಾಗಿದ್ದಾರೆ. ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಭಾರತದ ಕುಸ್ತಿ ರೆಫ್ರಿಯೊಬ್ಬರಿಗೆ ಒಲಿಂಪಿಕ್ಸ್ ಗೇಮ್ಸ್ನಲ್ಲಿ ಕಾರ್ಯನಿರ್ವಹಿಸುವ ಅವಕಾಶ ಲಭಿಸಿದೆ.
ಒಲಿಂಪಿಕ್ಸ್ಗೆ ಸೂಪರ್ವೈಸರ್ ಹಾಗೂ ಇನ್ ಸ್ಟ್ರಕ್ಟರ್ ಸೇರಿದಂತೆ ಒಟ್ಟು 50 ರೆಫ್ರಿಗಳನ್ನು ಯುಡಬ್ಲ್ಯುಡಬ್ಲ್ಯುಶನಿವಾರ ಪ್ರಕಟಿಸಿದ್ದು, ಏಷ್ಯಾದಿಂದ ಅಶೋಕ್ ಒಳಗೊಂಡಂತೆ 9 ರೆಫ್ರಿಗಳನ್ನು ಆಯ್ಕೆ ಮಾಡಿದೆ. ಪ್ರಸ್ತುತ ಇಂಡಿಯನ್ ಏರ್ ಫೋರ್ಸ್ನಲ್ಲಿ ವಾರೆಂಟ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಅಶೋಕ್ 50ಕ್ಕೂ ಅಧಿಕ ಪಂದ್ಯಗಳಲ್ಲಿ ರೆಫ್ರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಲಾಸ್ ವೇಗಸ್ನಲ್ಲಿ ನಡೆದ 2015ರ ವಿಶ್ವ ಕುಸ್ತಿ ಚಾಂಪಿಯನ್ಷಿಪ್ನಲ್ಲಿ ತೋರಿದ ನಿರ್ವಹಣೆಯನ್ನು ಆಧರಿಸಿ ಆಯ್ಕೆ ಪ್ರಕ್ರಿಯೆ ನಡೆಸಲಾಗಿದೆ.