ಮಕ್ಕಳ ದಿನಾಚರಣೆಗಾಗಿ ವಿಶೇಷ ವರದಿ
ಕುಂದಾಪುರ: ಹುಟ್ಟುವಾಗ ಯಾರೂ ತಾವು ಹೀಗೆಯೇ ಹುಟ್ಟಬೇಕು, ಬುದ್ದಿವಂತರಾಗಿರಬೇಕು ಎಂದು ಇಚ್ಚೆಪಟ್ಟು ಹುಟ್ಟಿರೊಲ್ಲ, ಯಾವುದೋ ಕಾರಣಕ್ಕಾಗಿ ಬುದ್ದಿಮಾಂಧ್ಯರಾಗಿ ಇತರರಿಗಿಂತ ವಿಭಿನ್ನರಾಗಿ ಜನಿಸುವ ಮಕ್ಕಳ ಬದುಕು ರೂಪಿಸಿ ಕೊಡುವ ಸಲುವಾಗಿ ಇಲ್ಲೊಂದು ಸಂಸ್ಥೆ ಬಡತನ,ವಿಕಲಾಂಗತೆ ಹೊಂದಿರುವ ಅದರಲ್ಲೂ ವಿಶೇಷ ಮಕ್ಕಳಿಗೆ ಜೀವನದ ಜ್ಯೋತಿಯಾಗಿ ಕಾರ್ಯಮಾಡುತ್ತಿದೆ.
ಕುಂದಾಪುರ ತಾಲೂಕಿನ ಕೋಣಿಯಲ್ಲಿದೆ ಈ ಮಾನಸಜ್ಯೋತಿ ವಿಶೇಷ ಮಕ್ಕಳ ಶಾಲೆ. ಕುಂದಾಪುರದ ಬಸ್ರೂರು ಮೂರುಕೈ ಪ್ರದೇಶದಿಂದ ಸುಮಾರೂ 7 ಕಿ.ಮೀ. ಸಾಗಿದರೇ ಕೋಣಿ ಸಿಗುತ್ತದೆ. ಇಲ್ಲಿರುವ ಅಗ್ನಿಶಾಮಕ ದಳದ ಸಮೀಪ ಮಾನಸ ಜ್ಯೋತಿ ವಿಶೇಶ ಮಕ್ಕಳ ಶಾಲೆಯಿದೆ.
ಬ್ಯಾಂಕ್ ಆಫ್ ಇಂಡಿಯಾದ ನಿವ್ರತ್ತ ಜನರಲ್ ಮ್ಯಾನೇಜರ್ ಸುದರ್ಶನ್ ನಾಯಕ್, ಸಾಜನ್ ಜಪ್ತಿ ಹಾಗೂ ಕ್ರಷ್ಣ ಕುಟ್ಟಿ ಎನ್ನುವವರು ದಾನಿಗಳ ಸಹಕಾರದಲ್ಲಿ 2000ನೇ ಇಸವಿಯಲ್ಲಿ ಜಪ್ತಿಯಲ್ಲಿ ಮಾನಸಜ್ಯೋತಿ ಸ್ಥಾಪಿಸಿದರು. ತಾಲೂಕು ಕೇಂಡ್ರದಿಂದ ಬಹಳ ದೂರವಾಗುವ ಕಾರಣ ಹಾಗೂ ಸ್ಥಳಾವಕಾಶದ ಕೊರತೆಯಿಂದಾಗಿ 2007ನೇ ಇಸವಿಯಲ್ಲಿ ಕೋಣಿ ಮೂಲದ ನಿವೇದಿತಾ ಮದ್ಯಸ್ಥ ಹಾಗೂ ಇತರೇ ದಾನಿಗಳ ಸಹಕಾರದಿಂದ 30 ಸೆಂಟ್ಸ್ ಜಾಗದಲ್ಲಿ ಕೋಣಿಯಲ್ಲಿ ನಿರ್ಮಾಣಗೊಂಡ ಈ ಸುಸಜ್ಜಿತ ಕಟ್ಟಡದಲ್ಲಿ ಈ ಸಂಸ್ಥೆ ಮಕ್ಕಳ ಸೇವೆ ಮಾಡುತ್ತಾ ಬಂದಿದೆ.
ಸುಸಜ್ಜಿತ ಕಟ್ಟಡದಲ್ಲಿ ವಿವಿಧ ಭಾಗದ ವಿವಿಧ ವಯಸ್ಸಿನ ಮಕ್ಕಳಿದ್ದು ಒಬ್ಬಬ್ಬರು ಒಂದೊಂದು ರೀತಿಯಾದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸದ್ಯ 19 ಮಕ್ಕಳು ಸಂಸ್ಥೆಯಲ್ಲಿ ಆಶ್ರಯ ಪಡೆದಿದ್ದಾರೆ. ಇವರಲ್ಲಿ ದಿವ್ಯಾ ಹಾಗೂ ಇನ್ನೋರ್ವ ಬಾಲಕನಿಗೆ ಮಿದುಳು ಸಂಬಂಧಿ ಸಮಸ್ಯೆಯಿದ್ದು ನಡೆಯುವುದು ಮಾತ್ರ ಮಾಡುತ್ತಾರೆಯೇ ಹೊರತು ಪಾಠ-ಆಟಗಳಲ್ಲಿ ತೊಡಗಲು ಆಗಲ್ಲ. 19 ಮಕ್ಕಳಲ್ಲಿ ಇಬ್ಬರು ಸ್ಥಳೀಯ ಶಾಲೆಗೆ ವಿದ್ಯಾಭ್ಯಾಸಕ್ಕಾಗಿ ಹೋಗ್ತಾರೆ. ಹತ್ತು ವರ್ಷದೊಳಗಿನ ವಿಶೇಶ ಮಕ್ಕಳನ್ನು ಇಲ್ಲಿ ದಾಖಲಿಸಿಕೊಳ್ಳಲಾಗುತ್ತೆ.
ಸಂಸ್ಥೆಯಲ್ಲಿ ಮಾನಸಿಕ ಅಸ್ವಸ್ಥ ಮಕ್ಕಳೂ ಇದ್ದು ಅವರು ಕೂಡ ಆಟ-ಪಾಠಗಳಲ್ಲಿ ಆಸಕ್ತಿಯಿಂದ ತೊಡಗಿಕೊಳ್ಳುತ್ತಾರೆ. ಇಲ್ಲಿನ ಶಿಕ್ಷಣ, ಯೋಗ, ಧ್ಯಾನ, ಫಿಸಿಯೋಥೆರಫಿ, ವಾಕಿಂಗ್ ಮೊದಲಾದವುಗಳ ಮೂಲಕ ಸದಾ ಲವಲವಿಕೆಯಿಂದಲೇ ಇರುತ್ತಾರೆ.
ನಿತ್ಯ ಮಕ್ಕಳಿಗೆ ವಿಟಮಿನ್, ಕ್ಯಾಲ್ಸಿಯಂ, ಆಯುರ್ವೇದಿಕ್ ಅಂಶಗಳುಳ್ಳ ಸಿರಪ್ ನೀಡಲಾಗುತ್ತದೆ. ಬೆಳಿಗ್ಗೆ ನಿತ್ಯ ಅರ್ಧ ಕಿ.ಮೀ. ವಾಕಿಂಗ್, ಬಳಿಕ ನೀರು ಸೇವನೆ, ಪ್ರಾರ್ಥನೆ, ಗಾಯತ್ರಿಮಂತ್ರ, ಬೆಳಿಗ್ಗೆನ ಉಪಹಾರಕ್ಕೆ ಇಡ್ಲಿ ಅಥವಾ ದೋಸೆ, ಮಧ್ಯಾಹ್ನ ಊಟ, ಸಂಜೆ ಹಣ್ಣು, ಹಾರ್ಲಿಕ್ಸ್, ರಾತ್ರಿ ಊಟ. ಅಲ್ಲದೇ ಪ್ರತಿ ಮಗುವಿಗಾಗಿ ಅವರವರ ಹೆಸರು ಮತ್ತು ಭಾವಚಿತ್ರವಿರುವ ಬಾಕ್ಸಿನಲ್ಲಿ ಮೆಡಿಸಿನ್(ಔಷಧಿ) ಇಟ್ಟು ನಿತ್ಯ ನೀಡಲಾಗುತ್ತೆ.
ಇನ್ನು ತಮ್ಮ ಮಕ್ಕಳ ಹುಟ್ಟುಹಬ್ಬದಂದು, ಮನೆಯ ವಿಶೇಶ ಕಾರ್ಯಕ್ರಮದಂದು ಹಲವರು ಈ ಸಂಸ್ಥೆಗೆ ಬಂದು ಇಲ್ಲಿನ ಮಕ್ಕಳೊಂದಿಗೆ ಕಾಲ ಕಳೆದು ಅವರಿಗೆ ಸಿಹಿಹಂಚಿ ವೈಶಿಷ್ಟ್ಯಪೂರ್ಣವಾಗಿ ಆಚರಿಸುತ್ತಾರೆ.
ವೀಕ್ಷಣೆಗೆ ಬಂದು ಕಾರ್ಯಕರ್ತರಾದರು: ಹಾಲೆಂಡ್‌ನ ಆಮ್‌ಸ್ಟರ್ಡನ್‌ನ ನಿವಾಸಿಯಾಗಿರುವ ಮಾರ್ತೇಜೇ ಎಂಬಾಕೆ 7 ವರ್ಷಗಳ ಹಿಂದೆ ಕುಂದಾಪುರದ ಜಪ್ತಿಯಲ್ಲಿರುವ ಮಾನಸ ವಿಶೇಷ ಮಕ್ಕಳ ವಸತಿ ಶಾಲೆಯ ಮಕ್ಕಳ ಆರೈಕೆಯಲ್ಲಿ ತೊಡಗಿಕೊಂಡವರು. ಎನ್‌ಜಿಓ ಸಂಸ್ಥೆಯಾದ ಎಫ್‌ಎಸ್‌ಎಲ್ ಮೂಲಕ ಕುಂದಾಪುರದ ವಿಶೇಷ ಮಕ್ಕಳ ವಸತಿ ಶಾಲೆಗೆ ಹಾಲೆಂಡ್‌ನಿಂದ ಕುಂದಾಪುರಕ್ಕೆ ವೀಕ್ಷಣೆಗಾಗಿ ಬಂದಿದ್ದ ಇವರು ಇಲ್ಲಿನ ಮಕ್ಕಳ ಬಡತನ, ಬುದ್ಧಿಮಾಂದ್ಯತೆ,ಅಂಗವೈಕಲ್ಯತೆಯನ್ನು ಕಂಡು ಮರುಗಿ ವಿದೇಶಕ್ಕೆ ತೆರಳುವ ಮನಸ್ಸು ಬಿಟ್ಟು ಮಕ್ಕಳ ಮುಗ್ದತೆ-ಪ್ರೀತಿ-ಮಮತೆಯಿಂದ ತನ್ನ ನೆಮ್ಮದಿಕಂಡುಕೊಂಡಿದ್ದಾರೆ.
ಭಾರತೀಯ ಬಡ ವಿಶೇಷ ಮಕ್ಕಳ ಆರೈಕೆಗಾಗಿ ತನ್ನೂರಾದ ಹಾಲೆಂಡ್‌ನಲ್ಲಿ ತನಗಾಗಿ ಇದ್ದ ಎಲ್ಲಾ ಆಸ್ತಿಯನ್ನು ಮಾರ್ತೇಜೇ ತೊರೆದಿದ್ದಾರೆ. ನಾಲ್ಕು ವರ್ಷಗಳ ಫಿಸಿಯೋಥೆರಾಪಿ ಪದವಿಯನ್ನು ಹಾಲೆಂಡ್‌ನಲ್ಲಿ ಪೂರ್ತಿಗೊಳಿಸಿದ್ದರು. ಮಾನಸದ ಮಕ್ಕಳಿಗೂ ಫಿಸಿಯೋತೆರಾಪಿ ಕೌನ್ಸೆಲ್ಲಿಂಗ್ ಹಾಗೂ ಶಿಕ್ಷಣ ನೀಡುತ್ತಿದ್ದು ಇಲ್ಲಿನ ಮಕ್ಕಳಿಗೆ ಇವರೆಂದರೇ ಅಚ್ಚುಮೆಚ್ಚು. ತಂದೆ-ತಾಯಿಯ ಸಾಮಾಜಿಕ ಕಾಳಜಿಯ ಪ್ರೇರಣೆಯೆ ನನಗೆ ಬಡ ಮಕ್ಕಳ ಆರೈಕೆಗೆ ಸ್ಪೂರ್ತಿಯಾಯಿತು.ನನ್ನನ್ನು ನೋಡಬೇಕೆಂದಾಗ ನನ್ನ ಹೆತ್ತವರು ಕುಂದಾಪುರಕ್ಕೆ ಬಂದು ನೋಡಿ ಹೋಗುತ್ತಾರೆ.ನನಗೆ ಮಕ್ಕಳನ್ನು ಬಿಟ್ಟು ಹೋಗಲಾಗುವುದಿಲ್ಲ ಎಂದು ಕನ್ನಡದಲ್ಲಿಯೇ ಮಾತನಾಡುತ್ತಾರೆ ಮಾರ್ತೇಜೇ. ಮಾರ್ಚೆ ಕುಂದಾಪುಕ್ಕೆ ಬಂದು 7 ವರ್ಷ ಕಳೆಯಿತು. ಇಲ್ಲಿನ ಮಕ್ಕಳೊಂದಿಗೆ, ಸ್ಥಳೀಯರೊಂದಿಗೆ ಕನ್ನಡ ಮಾತನಾಡುತ್ತಾ ಸುಲಲಿತವಾಗಿ ಕನ್ನಡವನ್ನು ಈಕೆ ಕಲಿತುಕೊಂಡಿದ್ದಾಳೆ.
ಮಾನಸ ಜ್ಯೋತಿಯ ಆಡಳಿತಾಧಿಕಾರಿ ಶೋಭಾ ಮದ್ಯಸ್ಥ, ಶಿಕ್ಷಕಿಯರಾದ ರೂಪಾ, ಚೇತನಾ, ವಿದೇಶಿ ಶಿಕ್ಷಕಾರದ ಮಾರ್ಚೆ, ರೋಸಿ, ಸಿಲ್ಲಿನ್, ಕಾರ್ಯಕರ್ತರಾದ ಜಯಂತಿ, ಲೀಲಾ, ಶಾರದಾ, ಈರವ್ವ ಈ ಸಂಸ್ಥೆಯಲ್ಲಿ ಮಕ್ಕಳನ್ನು ಫೋಷಿಸುತ್ತಾರೆ.
ವಿಕಲಾಂಗ ಮಕ್ಕಳಿಗೆ ಆಶ್ರಯ ನೀಡಿ, ಸಮಾಜದಲ್ಲಿ ಅವರಿಗೆ ಉತ್ತಮ ಬದುಕು ಕಟ್ಟಿಕೊಡುವುದು ನಮ್ಮ ಗುರಿ ಎನ್ನುತ್ತಾರೆ ಶೋಭಾ ಮಧ್ಯಸ್ಥ.
ದಾನಿಗಳ ಸಹಕಾರ: ಸಂಸ್ಥೆಗೆ ಬರುವ ಹೆಚ್ಚಿನ ಮಕ್ಕಳು ಬಡವರು, ಇನ್ನು ಕೆಲವರು ತಂದೆ-ತಾಯಿ, ಪೋಷಕರನ್ನು ಕಳೆದುಕೊಂದವರು. ಆದ್ದರಿಂದಲೇ ಮಕ್ಕಳ ಪೋಷಕರ ಬಳಿ ಯಾವುದೇ ಹಣವನ್ನು ತೆಗೆದುಕೊಳ್ಳದೇ ಸಾರ್ವಜನಿಕರು ಮತ್ತು ದಾನಿಗಳ ಸಹಕಾರದಲ್ಲಿ ಸಂಸ್ಥೆಯನ್ನು ನಡೆಸಲಾಗುತ್ತಿದೆ. ದಿನವೊಂದಕ್ಕೆ ಇಲ್ಲಿನ ಖರ್ಚು 2,500ಕ್ಕೂ ಅಧಿಕ. ಈ ಸಂಸ್ಥೆಗೆ ಸರಕಾರದ ಯಾವುದೇ ಸೌಲಭ್ಯ ಕೂಡ ಇಲ್ಲ.
ಮಾನಸ ಜ್ಯೋತಿ ಟ್ರಸ್ಟಿಗೆ ಸಹಾಯ ಮಾಡಲು ಇಚ್ಚಿಸುವ ದಾನಿಗಳು- ಮಾನಸಜ್ಯೋತಿ ವಿಕಲಾಂಗ ಮಕ್ಕಳ ವಸತಿ ಶಾಲೆ, ಕೋಣಿ-ಕುಂದಾಪುರ. ಸಂಪರ್ಕ- 08254-201730 ಅಥವಾ ಕಾರ್ಫೋರೇಷನ್ ಬ್ಯಾಂಕ್ ಕುಂದಾಪುರ ಶಾಖೆಯ ಖಾತೆ ಸಂಖ್ಯೆ- SB 01016723. IFSC code- CORP0000002 ಈ ಖಾತೆಗೆ ಜಮಾ ಮಾಡಬಹುದು.
ವರದಿ- ಯೋಗೀಶ್ ಕುಂಭಾಸಿ