ಮಂಗಳೂರು, ನ.16: ಸವಾಲುಗಳನ್ನು ಸ್ವೀಕರಿಸುವ ಮನೋಭಾವ ಮತ್ತು ಸ್ವಯಂ ಚಿಂತನೆ, ಯೋಜನೆಯಿಂದ ಯಶಸ್ಸು ಸಾಧ್ಯ. ಶಿಕ್ಷಣ ಹೊಸ ಸಂಶೋಧನೆ ತೆರೆದುಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಈ ಅವಕಾಶವನ್ನು ಯುವ ತಂತ್ರಜ್ಞರು ಬಳಸಿಕೊಳ್ಳಬೇಕೆಂದು ನ್ಯೂಯಾರ್ಕ್ ಬಫ್‌ಲೋ ವಿಶ್ವ ವಿದ್ಯಾನಿಲಯದ ಅಧ್ಯಕ್ಷ ಡಾ.ಸತೀಶ್ ಕೆ. ತ್ರಿಪಾಠಿ ಕರೆ ನೀಡಿದ್ದಾರೆ.
ಅವರು ಇಂದು ಕರ್ನಾಟಕದ ರಾಷ್ಟ್ರೀಯ ತಂತ್ರಜ್ಞಾನ ಶಿಕ್ಷಣ ಸಂಸ್ಥೆಯ (ಎನ್‌ಐಟಿಕೆ)ಯ 12ನೆ ಘಟಿಕೋತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಘಟಿಕೋತ್ಸವ ಭಾಷಣ ಮಾಡುತ್ತಿದ್ದರು.
ಭಾರತದ ಹಲವು ಶೈಕ್ಷಣಿಕ ಸಂಸ್ಥೆಗಳು ಉದ್ಯಮ, ತಂತ್ರಜ್ಞ್ಞಾನ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಶ್ರೇಷ್ಠ ನಾಯಕರನ್ನು ಜಗತ್ತಿಗೆ ನೀಡಿದೆ. ಎನ್‌ಐಟಿಕೆಯೂ ಈ ಸಾಲಿನಲ್ಲಿ ನಿಲ್ಲುತ್ತದೆ. ಜಗತ್ತು ಭಾರತದ ಮೂಲಕ ಹೊಸ ಹೊಸ ಸಂಶೋಧನೆಗಳ ಕೊಡುಗೆಗಳನ್ನು ಎದುರು ನೋಡುತ್ತಿದೆ.
ಭಾರತದ ಶೈಕ್ಷಣಿಕ ಸಂಸ್ಥೆಗಳಿಂದ ಈ ಸಾಧನೆಯಾಗಬೇಕಾಗಿದೆ. ಜ್ಞ್ಞಾನ ವೃದ್ಧಿಗೆ ವಿಚಾರಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಬೇಕು ಇದರಿಂದ ಹೆಚ್ಚಿನ ಅನುಭವ ಪಡೆದುಕೊಳ್ಳಲು ಸಾಧ್ಯ. ಯುವ ತಂತ್ರಜ್ಞರು ತಮ್ಮ ಶೈಕ್ಷಣಿಕ ಜ್ಞಾನ ದೊಂದಿಗೆ ವಾಸ್ತವ ಪ್ರಪಂಚದ ಆವಶ್ಯಕತೆಗಳ ಕಡೆ ಗಮನಹರಿಸಬೇಕು. ಆ ಮೂಲಕ ಜ್ಞ್ಞಾನವೃದ್ಧಿಸಿಕೊಳ್ಳಬೇಕು. ಹಿಂದಿನವರ ಅನುಭವಗಳು ನಮಗೆ ಮುಂದೆ ಸಾಗಲು ಧೈರ್ಯ ನೀಡುತ್ತದೆ ಮತ್ತು ಸವಾಲುಗಳನ್ನು ಎದುರಿಸಲು ಸಹಕಾರಿಯಾಗುತ್ತದೆ ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ನಮ್ಮದೇ ಆದ ದಾರಿಯನ್ನು ನಾವು ಕಂಡುಕೊಳ್ಳಬೇಕಾಗಿದೆ ಎಂದು ತ್ರಿಪಾಠಿ ತಿಳಿಸಿದರು.
ಪ್ರಸಕ್ತ ಜಾಗತೀಕರಣದ ಯುಗದಲ್ಲಿ ಯುವ ತಂತ್ರಜ್ಞರು ಅಂತಾರಾಷ್ಟ್ರೀಯ ಕಾರ್ಮಿಕ ಮಾರುಕಟ್ಟೆಯ ಸ್ಪರ್ಧೆಯನ್ನು ಎದುರಿಸಬೇಕಾಗಿದೆ. ನಮಗೆ ಎದುರಾಗುವ ಸವಾಲುಗಳನ್ನು ಎದುರಿಸಿದ ಸಂದರ್ಭದಲ್ಲಿ ಸೋಲುಂಟಾದರೂ ಹಿಂಜರಿಯಬಾರದು.ಯಶಸ್ಸು ಒಂದು ಕ್ಷಣದ ಮಾಯಾಜಾಲದಿಂದ ಸೃಷ್ಟಿಸುವ ಕೆಲಸವಲ್ಲ, ಸೋಲಿನಿಂದ ಪಾಠ ಕಲಿತಾಗ ಮುಂದಿನ ದಿನಗಳಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯ. ಸಮಸ್ತ ಜಗತ್ತಿಗೆ ಶ್ರೆಯಸ್ಸನ್ನು ಮಾಡುವ ಉದ್ದೇಶದಿಂದ ಶೈಕ್ಷಣಿಕ ಸಂಸ್ಥೆಗಳು ತಾಂತ್ರಿಕ ಶಿಕ್ಷಣವನ್ನು ನೀಡುತ್ತಿವೆ ಎನ್ನುವುದನ್ನು ವಿದ್ಯಾರ್ಥಿಗಳು ಅರ್ಥೈಸಿಕೊಂಡು ಸಿಕ್ಕಿರುವ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತ್ರಿಪಾಠಿ ತಿಳಿಸಿದರು.
ಘಟಿಕೋತ್ಸವದಲ್ಲಿ ಒಟ್ಟು 1,529 ವಿದ್ಯಾರ್ಥಿಗಳಲ್ಲಿ 860 ಪದವೀಧರರಿಗೆ ಘಟಿಕೋತ್ಸವದಲ್ಲಿ ಪದವಿ ಪ್ರಧಾನ ಮಾಡಲಾಯಿತು. ವಿವಿಧ ತಾಂತ್ರಿಕ ಶಿಕ್ಷಣ ವಿಭಾಗದಲ್ಲಿ ಸಾಧನೆ ಮಾಡಿದ 38 ವಿದ್ಯಾರ್ಥಿಗಳಿಗೆ ಅತಿಥಿಗಳು ಚಿನ್ನದ ಪದಕ ನೀಡಿ ಗೌರವಿಸಿದರು. ಸಂಸ್ಥೆಯ ಮುಖ್ಯಸ್ಥೆ ವನಿತಾ ನಾರಾಯಣನ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿದ್ದರು. ಎನ್‌ಐಟಿಕೆಯ ನಿರ್ದೇಶಕ ಪ್ರೊ.ಎಸ್.ಭಟ್ಟಾಚಾರ್ಯ ಸ್ವಾಗತಿಸಿದರು.