ಕನ್ನಡ ವಾರ್ತೆಗಳು

61 ನೇ ಅಖಿಲ ಭಾರತ ಸಹಕಾರ ಸಪ್ತಾಹಕ್ಕೆ ಯು.ಟಿ. ಖಾದರ್ ಚಾಲನೆ

Pinterest LinkedIn Tumblr

scdc_bank_photo_1

ಮಂಗಳೂರು, ನ.19 ಸಾಮಾನ್ಯ ಜನರಿಗೂ ಸ್ವಾಭಿಮಾನದ ಬದುಕು ಕಲ್ಪಿಸುವಲ್ಲಿ ಸಹಕಾರ ಕ್ಷೇತ್ರದ ಕೊಡುಗೆ ಮಹತ್ತರ ವಾಗಿದ್ದು, ಈ ಕ್ಷೇತ್ರಕ್ಕೆ ಸೋಲು ಇಲ್ಲ ಎಂದು ರಾಜ್ಯದ ಆರೋಗ್ಯ ಸಚಿವ ಯು.ಟಿ.ಖಾದರ್ ಅಭಿಪ್ರಾಯಿಸಿದ್ದಾರೆ. ಅವರು  ಬಲ್ಮಠದ ಶಾಂತಿ ನಿಲಯದಲ್ಲಿ 61ನೆ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಆಯೋಜಿಸಲಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

scdc_bank_photo_2 scdc_bank_photo_3 scdc_bank_photo_4

ದೇಶಕ್ಕೆ ಸ್ವಾತಂತ್ರ ದೊರೆತ ಸಂದರ್ಭ 33 ಕೋಟಿ ಜನಸಂಖ್ಯೆಯನ್ನು ಹೊಂದಿದ್ದ ಭಾರತದಲ್ಲಿ ಆಹಾರದ ಕೊರತೆ ಅಗಾಧವಾಗಿದ್ದು, ಅಮೆರಿಕದಲ್ಲಿ ಬಿಸಾಕಿದ ಕೆಂಪು ಗೋಧಿಯನ್ನು ತರಿಸಿಕೊಂಡು ಒಂದು ಹೊತ್ತಿನ ಊಟದ ವ್ಯವಸ್ಥೆ ಕಲ್ಪಿಸುವ ಪರಿಸ್ಥಿತಿ ಇತ್ತು. ಆರು ದಶಕಗಳ ಬಳಿಕ ಇದೀಗ ದೇಶದ ಜನಸಂಖ್ಯೆ 125 ಕೋಟಿಗಳಿಗೆ ಏರಿಕೆಯಾಗಿದ್ದರೂ ನಮ್ಮ ರೈತರ ಶ್ರಮದಿಂದ ನಮ್ಮ ದೇಶದ ಬಹುತೇಕರು ಮೂರು ಹೊತ್ತು ಊಟ ಮಾಡಿ ವಿದೇಶಗಳಿಗೆ ರಫ್ತು ಮಾಡಿ ಸ್ವಾವಲಂಬಿಯಾಗಲು ಸಾಧ್ಯವಾಗಿದೆ. ರೈತರು ಸೇರಿದಂತೆ ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಸಹಕಾರಿ ಕ್ಷೇತ್ರ ನೀಡಿರುವ ಕೊಡುಗೆ ಮಹತ್ತರ ಎಂದು ಸಚಿವ ಖಾದರ್ ನುಡಿದರು. ಸಭಾ ಕಾರ್ಯಕ್ರಮಕ್ಕೆ ಮೊದಲು ಕೊಡಿಯಾಲ್‌ಬೈಲ್‌ನ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಆವರಣದಿಂದ ಶಾಂತಿ ನಿಲಯದವರೆಗೆ ನಡೆದ ‘ಸ್ವಚ್ಛ ಸಹಕಾರ್- ಸ್ವಸ್ಥ ಸಹಕಾರ್’ ಸಹಕಾರಿ ನಡಿಗೆಗೆ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಸ್ವಚ್ಛ ಹಾಗೂ ಸ್ವಸ್ಥ ಸಹಕಾರಿ ಕ್ಷೇತ್ರದೆಡೆಗೆ ಯುವ ಜನಾಂಗವನ್ನು ಸೆಳೆಯುವ ನಿಟ್ಟಿನಲ್ಲಿ ನಡಿಗೆಯನ್ನು ಆಯೋಜಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ‘ಸಹಕಾರ ರಂಗದ ಅವಕಾಶಗಳು’ ಎಂಬ ವಿಚಾರದಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿರ್ದೇಶಕ ಎಸ್.ಆರ್.ಸತೀಶ್ಚಂದ್ರ ವಿಚಾರ ಮಂಡಿಸಿದರು. ದ.ಕ.ಜಿಲ್ಲಾ ಸಹಕಾರಿ ಯೂನಿಯನ್‌ನ ಅಧ್ಯಕ್ಷ ಹರೀಶ್ ಅಚಾರ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ರಾಜು, ಪ್ರಫುಲ್ಲಾ ಉಪಸ್ಥಿತರಿದ್ದರು. ಭಗವತಿ ಸಹಕಾರ ಬ್ಯಾಂಕ್‌ನ ಅಧ್ಯಕ್ಷ ಸದಾಶಿವ ಉಳ್ಳಾಲ್ ಸ್ವಾಗತಿಸಿದರು.

scdc_bank_photo_5 scdc_bank_photo_6 scdc_bank_photo_7

ವಾಣಿಜ್ಯ ಬ್ಯಾಂಕ್‌ಗಳ ಲಾಬಿಗೆ ಮಣಿದ ರಿಸರ್ವ್ ಬ್ಯಾಂಕ್ -ಡಾ.ರಾಜೇಂದ್ರಕುಮಾರ್
ರಿಸರ್ವ್ ಬ್ಯಾಂಕ್ ವಾಣಿಜ್ಯ ಬ್ಯಾಂಕ್‌ಗಳಿಗೆ ಮಣಿದಿದ್ದು, ಸಹಕಾರಿ ಬ್ಯಾಂಕ್‌ಗಳನ್ನು ಬೆಳೆಯಲು ಬಿಡುವುದಿಲ್ಲ ಎಂದು ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಆರೋಪಿಸಿದರು. ವಾಣಿಜ್ಯ ಬ್ಯಾಂಕ್‌ಗಳು ಬಂಗಾರ, ವಾಹನದ ಮೇಲಿನ ಸಾಲವನ್ನು ಕೃಷಿ ಸಾಲವನ್ನಾಗಿ ಲೀಡ್ ಬ್ಯಾಂಕ್‌ಗೆ ಸುಳ್ಳು ಲೆಕ್ಕ ತೋರಿಸುತ್ತವೆ. ಅಧಿಕಾರಿಗಳೂ ಕಣ್ಣು ಮುಚ್ಚಿ ರೆಕಾರ್ಡ್ ಮಾಡುತ್ತಾರೆ. ಸರಕಾರದಿಂದ ಸಹಕಾರಿ ಬ್ಯಾಂಕ್‌ಗಳಲ್ಲಿ ಯಾವುದೇ ನಿಧಿ ಇಲ್ಲದಿದ್ದರೂ ಸರಕಾರದ ಯೋಜನೆಗಳನ್ನು ಜಾರಿಗೊಳಿಸುವ ಜವಾಬ್ದಾರಿ ಮಾತ್ರ ಸಹಕಾರಿ ಬ್ಯಾಂಕ್‌ಗಳ ಮೇಲೆ ಹೊರಿಸಲಾಗುತ್ತದೆ.

ವೈದ್ಯನಾಥನ್ ವರದಿಯ ಬಳಿಕ ಸಹಕಾರಿ ಬ್ಯಾಂಕ್‌ಗಳಿಗೆ ಕೊಂಚ ಸ್ವಾಯತ್ತೆ ನೀಡಿದ್ದರೂ ಸರಕಾರದ ಅಧೀನದಲ್ಲೇ ಸಹಕಾರಿ ಬ್ಯಾಂಕ್‌ಗಳು ಕಾರ್ಯನಿರ್ವಹಿಸಬೇಕು. ಸಹಕಾರಿ ಬ್ಯಾಂಕ್‌ಗಳು ಸ್ಥಳೀಯ ವಿದ್ಯಾ ಸಂಸ್ಥೆಗಳಿಗೆ ದೇಣಿಗೆ, ನೆರವು ನೀಡುತ್ತಿದ್ದರೂ ಸಹಕಾರಿ ಬ್ಯಾಂಕ್‌ಗಳಲ್ಲಿ ಠೇವಣಿ ಇರಿಸಬಾರದೆಂಬ ಸುತ್ತೋಲೆಯನ್ನು ಶಿಕ್ಷಣ ಇಲಾಖೆ ನೀಡುತ್ತದೆ. ಹಾಗಿದ್ದರೂ ಕ್ಯಾಂಪ್ಕೊ, ಕ್ಯಾಡ್ಸ್, ಜನತಾ ಬಜಾರ್ ಸೇರಿದಂತೆ ಸಹಕಾರಿ ಬ್ಯಾಂಕ್‌ಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಸರಕಾರದ ಕಿರುಕುಳಗಳನ್ನು ತಡೆದುಕೊಂಡು ಈ ಎಲ್ಲಾ ಸವಾಲುಗಳ ನಡುವೆ ಸಹಕಾರಿ ಬ್ಯಾಂಕ್‌ಗಳು ಕೆಲಸ ಮಾಡುತ್ತಿವೆ ಎಂದು ಸರಕಾರ ಹಾಗೂ ರಿಸರ್ವ್ ಬ್ಯಾಂಕ್ ವಿರುದ್ಧ ಡಾ.ರಾಜೇಂದ್ರ ಕುಮಾರ್ ಬೇಸರ ವ್ಯಕ್ತಪಡಿಸಿದರು.

scdc_bank_photo_8 scdc_bank_photo_9 scdc_bank_photo_10

ಸಹಕಾರಿ ಕಾಯ್ದೆ ವಿರುದ್ಧ ಕೋರ್ಟ್‌ಗೆ ಹೊಸತಾಗಿ ರೂಪಿಸಲಾಗಿರುವ ಸಹಕಾರಿ ಕಾಯ್ದೆಯನ್ನು ರಾಜ್ಯ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು ಎಂದು ಅಧ್ಯಕ್ಷತೆ ವಹಿಸಿದ್ದ ದ.ಕ.ಜಿಲ್ಲಾ ಸಹಕಾರಿ ಯೂನಿ ಯನ್‌ನ ಅಧ್ಯಕ್ಷ ಹರೀಶ್ ಅಚಾರ್ ಹೇಳಿದರು. ಸದ್ಯದಲ್ಲೇ ಸಹಕಾರಿ ಯೂನಿಯನ್ ಡೇಟಾಬ್ಯಾಂಕ್ ಮಾಡಲಾಗುವುದು ಹಾಗೂ ಹೊಸತಾಗಿ ಸಹಕಾರಿ ಕ್ಷೇತ್ರ ಪ್ರವೇಶಿಸುವವರಿಗೆ ಈ ಕ್ಷೇತ್ರದ ಬಗ್ಗೆ ಪರಿಚಯ ಮಾಡಲು ಸರ್ಟಿಫಿಕೇಟ್ ಕೋರ್ಸ್ ಆರಂಭಿಸಲಾಗುವುದು ಎಂದವರು ಹೇಳಿದರು.

Write A Comment