ಕುಂದಾಪುರ : ಗಂಗೊಳ್ಳಿಯ ಶ್ರೀ ವೀರೇಶ ಮಾಂಗಲ್ಯ ಮಂದಿರದಲ್ಲಿ ಗಂಗೊಳ್ಳಿ ವೀರ ಸಾವರ್ಕರ್ ದೇಶಪ್ರೇಮಿ ಬಳಗದ ವಿಶೇಷ ವಿನ್ಯಾಸದ ಗೋಡೆ ಗಡಿಯಾರ ಬಿಡುಗಡೆ ಸಮಾರಂಭ ನಡೆಯಿತು.
ಪತ್ರಕರ್ತ ಬಿ.ರಾಘವೇಂದ್ರ ಪೈ ಮಾತನಾಡಿ, ದೇಶ, ಧರ್ಮಕ್ಕಾಗಿ ದುಡಿದ, ಮಡಿದ, ತ್ಯಾಗ, ಬಲಿದಾನ ಮಾಡಿದ ಮಹಾತ್ಮರನ್ನು, ವೀರರನ್ನು ವರ್ಷದಲ್ಲೊಮ್ಮೆ ಅವರ ಜನ್ಮದಿನದಂದೊ ಅಥವಾ ಇನ್ನಾವುದೋ ಕಾರ್ಯಕ್ರಮಗಳಲ್ಲಿ ಸ್ಮರಿಸಿಕೊಂಡು, ಉಳಿದ ದಿನಗಳಂದು ಅವರನ್ನು ಮರೆತು ಬಿಡುತ್ತಿದ್ದೇವೆ. ನಿಜವಾಗಿಯೂ ಅವರೆಲ್ಲ ನಿತ್ಯ ಸ್ಮರಣೀಯರು. ಇಂತಹ ಮಹಾತ್ಮರನ್ನು, ವೀರರನ್ನು ಸದಾ ಸ್ಮರಿಸಕೊಳ್ಳಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದ್ದು, ಇದೇ ಉದ್ದೇಶದಿಂದ ವೀರರ, ಮಹಾತ್ಮರ ಭಾವಚಿತ್ರವನ್ನೊಳಗೊಂಡ ವಿಶೇಷ ವಿನ್ಯಾಸದ ಗೋಡೆ ಗಡಿಯಾರ ರಚಿಸಿ ಜನರಲ್ಲಿ ಜಾಗೃತಿ ಮೂಡಿಸುವ ಗಂಗೊಳ್ಳಿ ವೀರ ಸಾವರ್ಕರ್ ದೇಶಪ್ರೇಮಿ ಬಳಗದ ಕಾರ್ಯ ಪ್ರಶಂಸನೀಯವಾದುದು ಎಂದು ಹೇಳಿದರು.
ಗಂಗೊಳ್ಳಿ ಹಿಂದೂ ಜಾಗರಣ ವೇದಿಕೆ ಅಧ್ಯಕ್ಷ ರತ್ನಾಕರ ಗಾಣಿಗ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಶ್ರೀಪತಿ ಗಾಣಿಗ ದಿಕ್ಸೂಚಿ ಭಾಷಣ ಮಾಡಿದರು. ಇದೇ ಸಂದರ್ಭ ಗಡಿಯಾರ ರಚನೆಗೆ ಸಹಾಯ ನೀಡಿದ ಮಹನೀಯರಿಗೆ ಗಡಿಯಾರ ನೀಡಿ ಗೌರವಿಸಲಾಯಿತು. ಗಂಗೊಳ್ಳಿ ವೀರ ಸಾವರ್ಕರ್ ದೇಶಪ್ರೇಮಿ ಬಳಗದ ಪ್ರಮುಖ್ ನವೀನ ದೊಡ್ಡಹಿತ್ಲು ಉಪಸ್ಥಿತರಿದ್ದರು.
ಶಶಿ ಸ್ವಾಗತಿಸಿದರು. ಯೋಗೀಶ ಖಾರ್ವಿ ವರದಿ ವಾಚಿಸಿದರು. ಅನಿಲ್ ಪೂಜಾರಿ, ರಾಮ ಖಾರ್ವಿ ಮತ್ತು ಕಾರ್ತಿಕ್ ಅತಿಥಿಗಳನ್ನು ಗೌರವಿಸಿದರು. ರವಿ ಖಾರ್ವಿ ಕಾರ್ಯಕ್ರಮ ನಿರೂಪಿಸಿದರು. ವಿನಯ ಖಾರ್ವಿ ವಂದಿಸಿದರು.