ಮುಂಬೈ, ನ.19 : ಹಿಂದಿ ಚಿತ್ರರಂಗದ ಖ್ಯಾತ ನಿರ್ಮಾಪಕ, ನಿರ್ದೇಶಕ ಮಹೇಶ್ ಭಟ್ ಹಾಗೂ ಅವರ ಇಡೀ ಕುಟುಂಬದ ನಾಶಕ್ಕೆ ಮೂಂದಾಗಿದ್ದ ಭೂಗತ ಪಾತಕಿಗಳು ಡಾನ್ ರವಿ ಪೂಜಾರಿ ಗ್ಯಾಂಗಿನವರು ಎಂದು ವಿಚಾರಣೆಯಿಂದ ತಿಳಿದು ಬಂದಿದೆ. ಮುಂಬೈನ ಕ್ರೈಂ ಬ್ರ್ಯಾಂಚ್ ಪೊಲೀಸರು ಪಾತಕಿಗಳ ಸಂಚು ವಿಫಲಗೊಳಿಸಿ ಎಲ್ಲಾ 13 ಮಂದಿಯನ್ನು ವಿಚಾರಣೆಗೊಳಪಡಿಸಿದ್ದರು. ಪೊಲೀಸರ ಮುಂದೆ ಸತ್ಯ ಹೊರ ಹಾಕಿದ್ದ ಪಾತಕಿಗಳು ಮಹೇಶ್ ಭಟ್ ಅಲ್ಲದೆ ಖ್ಯಾತ ಕೊರಿಯಾಗ್ರಾಫರ್ ಹಾಗೂ ನಿರ್ದೇಶಕಿ ಫರ್ಹಾ ಖಾನ್, ಶಾರುಖ್ ಖಾನ್ ಅವರ ರೆಡ್ ಚಿಲ್ಲಿಸ್ ಕಚೇರಿ ಮೇಲೆ ಕಣ್ಣಿಡುವಂತೆ ಸೂಚನೆ ಸಿಕ್ಕಿತ್ತು ಎಂದಿದ್ದಾರೆ. ಕಳೆದ ಆಗಸ್ಟ್ ತಿಂಗಳಿನಲ್ಲಿ ಕಿಂಗ್ ಖಾನ್ ಶಾರುಖ್ ಅವರ ಗೆಳೆಯ ಚಿತ್ರ ನಿರ್ಮಾಪಕ ಕರೀಮ್ ಹಾಗೂ ಆಲಿ ಮೊರಾನಿ ಅವರ ಬಂಗಲೆಯ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಇದೇ ವೇಳೆಗೆ ಶಾರುಖ್ ಅವರ ರೆಡ್ ಚಿಲ್ಲೀಸ್ ಕಚೇರಿ ಮೇಲೆ ದಾಳಿ ವಿಫಲವಾಗಿತ್ತು. ಕಳೆದ 2 ತಿಂಗಳಿಂದ ನಿರ್ದೇಶಕ ಮಹೇಶ್ ಭಟ್ ಅವರ ಮನೆ ಹಾಗೂ ಕಚೇರಿ ಮೇಲೆ ಕಣ್ಣಿಟ್ಟಿದ್ದೆವು. ಅವರ ಮನೆಯಲ್ಲಿ ವಾಚ್ ಮನ್ ಕೆಲಸ ಗಿಟ್ಟಿಸಿಕೊಳ್ಳಲು ಯತ್ನಿಸಿದ್ದು ವಿಫಲವಾಗಿತ್ತು.
ಹೀಗಾಗಿ ಶಾರುಖ್ ಖಾನ್, ಫರ್ಹಾಖಾನ್, ಮಹೇಶ್ ಭಟ್ ಸೇರಿದಂತೆ ಪ್ರಮುಖ ಬಾಲಿವುಡ್ ಗಣ್ಯರ ಕೊಲೆಗೆ ಸ್ಕೆಚ್ ರೆಡಿ ಮಾಡಿದ್ದೆವು, ಅದರೆ, ಖಾರ್ ಪ್ರದೇಶದಲ್ಲಿ ನಮ್ಮ ಚಲನವಲನದ ಬಗ್ಗೆ ಮಾಹಿತಿ ಸೋರಿಕೆಯಾಗಿದ್ದರಿಂದ ಸಿಕ್ಕಿಬಿದ್ದಿದ್ದೇವೆ ಎಂದು ಆರೋಪಿಗಳು ಹೇಳಿಕೆ ನೀಡಿದ್ದಾರೆ. ಮುಂಬೈನ ಅಂಧೇರಿಯನ್ನು ಅಡ್ಡಾ ಮಾಡಿಕೊಂಡಿದ್ದ ಡಾನ್ ರವಿ ಪೂಜಾರಿ ಛೋಟಾರಾಜನ್ ಗ್ಯಾಂಗಿನ ಪ್ರಮುಖ ಪಂಟರ್, 90ರ ದಶಕದಲ್ಲೇ ದುಬೈಗೆ ಹಾರಿದ ರವಿ, ಮುಂಬೈನ ರಿಯಲ್ ಎಸ್ಟೇಟ್ ಹಾಗೂ ಹೋಟೆಲ್ ಮಾಲೀಕರನ್ನು ಬೆದರಿಸಿ ಹಣ ಗಳಿಸುತ್ತಿದ್ದ. ಆದರೆ, 2000 ಇಸವಿಯಲ್ಲಿ ದಾವೂದ್ ಇಬ್ರಾಹಿಂ ಗ್ಯಾಂಗ್ ರವಿ ಪೂಜಾರಿ ಹತ್ಯೆಗೆ ಯತ್ನ ನಡೆಸಿ ವಿಫಲವಾಗಿತ್ತು. [ಪಾತಕಿಗಳ ಸ್ಕೆಚ್ ಮಿಸ್, ಮಹೇಶ್ ಭಟ್ ಸುರಕ್ಷಿತ] ನಂತರ ಅಲ್ಲಿಂದ ಆಸ್ಟ್ರೇಲಿಯಾಕ್ಕೆ ಹಾರಿದ ರವಿ ಪೂಜಾರಿ ಆಗಾಗ ಮಾಧ್ಯಮಗಳ ಜೊತೆ ಫೋನ್ ಕರೆ ಮೂಲಕ ಸಂಪರ್ಕಿಸುತ್ತಿದ್ದ. ದಾವೂದ್ ಇಬ್ರಾಹಿಂ ಹಾಗೂ ಛೋಟಾ ಶಕೀಲ್ ಅವರ ಆಪ್ತರು ಹಾಗೂ ಬೆಂಬಲಿಗರನ್ನು ಮುಗಿಸುವ ಕಾರ್ಯ ಕೈಗೊಂಡಿರುವುದಾಗಿ ಹೇಳುತ್ತಾ ಬಂದಿದ್ದಾನೆ. ಸಹಾಯಕ ಪೊಲೀಸ್ ಆಯುಕ್ತ ಸುನೀಲ್ ದೇಶ್ ಮುಖ್ ಅವರ ತಂಡ ಪಾತಕಿಗಳ ವಿಚಾರಣೆ ಮುಂದುವರೆಸಿದ್ದು,ಇನ್ನಷ್ಟು ಮಾಹಿತಿ ಹೊರಬೀಳುವ ನಿರೀಕ್ಷೆಯಿದೆ.