ಮಂಗಳೂರು, ನ.19 : ಉಪ್ಪಿನಂಗಡಿಯಲ್ಲಿ ಗ್ಯಾಸ್ ಟ್ಯಾಂಕರ್ ಉರುಳಿ ಬಿದ್ದಿದ್ದು, ಅನಿಲ ಸೋರಿಕೆಯಾಗುತ್ತಿದೆ ಎಂಬ ಸುದ್ದಿಯಿಂದ ಸ್ಥಳೀಯರು ಆತಂಕಗೊಂಡಿದ್ದರು. ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಗ್ಯಾಸ್ ಸೋರಿಕೆ ತಡೆಯಲು ಕ್ರಮಗಳನ್ನು ಕೈಗೊಂಡಿದ್ದಾರೆ. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಲಾಗಿದೆ. ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ-ಉಪ್ಪಿನಂಗಡಿ ಮಧ್ಯೆಯ ಕಡಿದಾದ ತಿರುವಿನಲ್ಲಿ ಗ್ಯಾಸ್ ಟ್ಯಾಂಕರ್ ಬುಧವಾರ ಬೆಳಗ್ಗೆ 8 ಗಂಟೆ ಸುಮಾರಿಗೆ ಪಲ್ಟಿ ಹೊಡೆದಿದೆ. ಟ್ಯಾಂಕರ್‌ನಿಂದ ಗ್ಯಾಸ್ ಸೋರಿಕೆಯಾಗುತ್ತಿದೆ ಎಂಬ ಸುದ್ದಿ ಹಬ್ಬಿದ್ದು, ಸ್ಥಳೀಯರು ಆತಂಕಗೊಂಡಿದ್ದರು.
ಪುತ್ತೂರು , ಬಂಟ್ವಾಳ ಅಗ್ನಿಶಾಮಕ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಗ್ಯಾಸ್ ಸೋರಿಕೆಯಾಗದಂತೆ ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಹೆದ್ದಾರಿ ಬಂದ್ ಮಾಡಲಾಗಿದ್ದು, ಉಪ್ಪಿನಂಗಡಿಯಿಂದ ಬರುವ ವಾಹನಗಳನ್ನು ಪುತ್ತೂರು-ಮಾಣಿ ಮಾರ್ಗವಾಗಿ ಕಳುಹಿಸಲಾಗುತ್ತಿದೆ. ಗ್ಯಾಸ್ ಟ್ಯಾಂಕರ್ ಪಲ್ಟಿ ಹೊಡೆದಿದ್ದರಿಂದ ರಸ್ತೆಯಲ್ಲಿ ಕೆಲವು ಗಂಟೆಗಳ ಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ಉಪ್ಪಿನಂಗಡಿಯಿಂದ ಮಾಣಿವರೆಗಿನ ರಸ್ತೆ ಕಡಿದಾದ ತಿರುವುಗಳನ್ನು ಹೊಂದಿದ್ದು, ಇಲ್ಲಿನ ಪೆರ್ನೆ ಎಂಬಲ್ಲಿ ಕಳೆದ ವರ್ಷ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ಬೆಂಕಿ ಹೊತ್ತಿಕೊಂಡು 6 ಜನರು ಸಾವನ್ನಪ್ಪಿ, ಅನೇಕರು ಗಾಯಗೊಂಡಿದ್ದರು