ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಬುಧವಾರ ನಡೆಸಿದ ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಒಳ ಉಡುಪಿನಲ್ಲಿ ಅಕ್ರಮ ಚಿನ್ನ ಸಾಗಾಟ ಮಾಡುತ್ತಿದ್ದ ಇಬ್ಬರು ಮಹಿಳೆಯರನ್ನು ಬಂಧಿಸಿ ಅವರಿಂದ ಸುಮಾರು 48.32 ಲಕ್ಷ ರೂ. ಮೌಲ್ಯದ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.
ದುಬೈಯಿಂದ ಬೆಳಗ್ಗೆ 7.45ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಬಂದ ಗುಜರಾತ್ ಜುನಾಗಡ್ ಮೂಲದ ಖೈರುನ್ ಗುಲಾಮ್ ಮೊಹಮ್ಮದ್ ಶೇಖ್ (48) ಎಂಬಾಕೆ ಬಳಿಯಿಂದ 21.72 ಲಕ್ಷ ರೂ. ಮೌಲ್ಯದ 816.550 ಗ್ರಾಂ ಚಿನ್ನದ ಬಿಲ್ಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಈಕೆ ಒಳ ಉಡುಪು ಮೂಲಕ ಈ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂತದ್ದೇ ಇನ್ನೊಂದು ಪ್ರಕರಣದಲ್ಲಿ ಬೆಳಗ್ಗೆ 8.45ಕ್ಕೆ ದುಬೈಯಿಂದ ಬಂದ ಜೆಟ್ ಏರ್‌ವೇಸ್‌ನಲ್ಲಿ ಬಂದಿಳಿದ ಕೇರಳದ ಕೋಯಿಕ್ಕೋಡ್ ನಿವಾಸಿ ಮರಿಯೊಮ್ಮ ಒಟ್ಟಪೋಕಿ (48) ಎಂಬಾಕೆ ಬಳಿಯಿಂದ 26.60 ಲಕ್ಷ ರೂ. ಮೌಲ್ಯದ ಒಂದು ಕೆಜಿ ಚಿನ್ನದ ಬಿಲ್ಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಈಕೆ ಕೂಡಾ ತನ್ನ ಒಳ ಉಡುಪಿನಲ್ಲಿ ಚಿನ್ನವನ್ನು ಅಕ್ರಮವಾಗಿ ಚಿನ್ನವನ್ನು ಸಾಗಿಸುತ್ತಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಬ್ಬರನ್ನೂ ಬಂಧಿಸಿದ ಕಸ್ಟಮ್ಸ್ ಅಧಿಕಾರಿಗಳು ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪ್ರಕರಣದ ಕುರಿತ ಮುಂದಿನ ತನಿಖೆ ನಡೆಯುತ್ತಿದೆ.