ಕಾಸರಗೋಡು, ನ.20: ಕಳೆದ ಐದು ದಿನಗಳ ಹಿಂದೆ ಹೊಸದುರ್ಗದಲ್ಲಿ ನಡೆದ 10ನೆ ತರಗತಿಯ ವಿದ್ಯಾರ್ಥಿ ಯೊಬ್ಬನ ನಿಗೂಢ ಸಾವಿನ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಇಬ್ಬರು ಸಹಪಾಠಿಗಳೇ ಆತನನ್ನು ಕೆರೆ ನೀರಲ್ಲಿ ಮುಳುಗಿಸಿ ಕೊಲೆಗೈದಿರುವುದು ಪೊಲೀಸ್ ವಿಚಾರಣೆಯಿಂದ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ 15 ಮತ್ತು 17 ವರ್ಷದ ಇಬ್ಬರು ವಿದ್ಯಾರ್ಥಿಗಳನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ.
ನ.15ರಂದು ನಾಪತ್ತೆಯಾಗಿದ್ದ ಹೊಸದುರ್ಗ ಹೈಯರ್ ಸೆಕಂಡರಿ ಶಾಲೆಯ 10ನೆ ತರಗತಿಯ ವಿದ್ಯಾರ್ಥಿ ಅಭಿಲಾಶ್(15)ನ ಮೃತದೇಹ ನ.16ರಂದು ಇಲ್ಲಿಗೆ ಸಮೀಪದ ಕುಶಾಲ ನಗರ ಎಂಬಲ್ಲಿನ ಕೆರೆಯೊಂದರಲ್ಲಿ ಪತ್ತೆಯಾಗಿತ್ತು. ತೀವ್ರ ಕುತೂಹಲ ಕೆರಳಿಸಿದ್ದ ಬಾಲಕನ ನಿಗೂಢ ಸಾವು ಪ್ರಕರಣ ಇದೀಗ ಬಯಲಿಗೆ ಬಂದಿದ್ದು, ಇದೊಂದು ವ್ಯವಸ್ಥಿತ ಕೊಲೆಯಾಗಿದ್ದು, ಆತನ ಸಹಪಾಠಿಗಳಿಬ್ಬರು ಕೆರೆ ನೀರಲ್ಲಿ ಮುಳುಗಿಸಿ ಕೊಲೆಗೈದಿರುವುದನ್ನು ವಿಚಾರಣೆಯ ವೇಳೆ ಒಪ್ಪಿಕೊಂಡಿದ್ದು, ಕೊಲೆ ಕೃತ್ಯಕ್ಕೆ ಪ್ರೇಮ ಪ್ರಕರಣವೇ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
15 ಮತ್ತು 17 ವರ್ಷದ ಬಾಲಕರಿಬ್ಬರ ಈ ಬರ್ಬರ ಕೃತ್ಯಕ್ಕೆ ಹೊಸದುರ್ಗ ಪರಿಸರ ಬೆಚ್ಚಿಬಿದ್ದಿದೆ. ಕಳೆದ ಶುಕ್ರವಾರ ಶಾಲೆ ಬಿಟ್ಟು ಬಂದಿದ್ದ ಅಭಿಲಾಶ್ ಮನೆ ತಲುಪದೆ ಕಾಣೆಯಾಗಿದ್ದನು. ರಾತ್ರಿಯಾದರೂ ಈತ ಹಿಂದಿರುಗದ ಕಾರಣ ಮನೆಯವರು ಹೊಸದುರ್ಗ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಶನಿವಾರ ಅಭಿಲಾಶ್‌ಗಾಗಿ ಮನೆಯವರು ಹುಡುಕಾಟ ಮುಂದುವರಿಸಿದಾಗ ಹೊಸದುರ್ಗ ಕುಶಾಲ ನಗರದ ಕೆರೆಯೊಂದರ ಬಳಿ ಶಾಲಾ ಬ್ಯಾಗ್ ಪತ್ತೆಯಾಗಿತ್ತು. ಇದರಿಂದ ಸಂಶಯಗೊಂಡು ಕೆರೆಯಲ್ಲಿ ಶೋಧ ನಡೆಸಿದಾಗ ಅಭಿಲಾಶ್‌ನ ಮೃತದೇಹ ಪತ್ತೆಯಾಗಿತ್ತು.
ಅಭಿಲಾಶ್ ಸಹಪಾಠಿ ವಿದ್ಯಾರ್ಥಿನಿ ಯೊಬ್ಬಳನ್ನು ಪ್ರೀತಿಸುತ್ತಿದ್ದನೆನ್ನಲಾಗಿದೆ. ಇದೇ ವಿದ್ಯಾರ್ಥಿನಿ ಯರನ್ನು ಕೊಲೆ ಆರೋಪಿ ವಿದ್ಯಾರ್ಥಿಗಳಿಬ್ಬರೂ ಪ್ರೀತಿ ಸುತ್ತಿದ್ದು, ಈ ವಿಚಾರ ವಾಗಿ ಈ ಮೂವ ರೊಳಗೆ ಆಗಾಗ್ಗೆ ಜಗಳವಾಗುತ್ತಿತ್ತು. ಕಳೆದ ಶುಕ್ರವಾರವೂ ಇವರೊಳಗೆ ಜಗಳ ಉಂಟಾಗಿತ್ತು. ಈ ವೇಳೆ ಬಂಧಿತ ವಿದ್ಯಾರ್ಥಿಗಳಿಬ್ಬರು ಅಭಿಲಾಶ್‌ನ ಕೊಲೆಗೆ ಸಂಚು ರೂಪಿಸಿದ್ದರೆನ್ನಲಾಗಿದೆ.
ಅಂದು ಸಂಜೆ ಶಾಲೆಬಿಟ್ಟು ಮೂವರು ಒಟ್ಟಿಗೆ ಒಂದೇ ಆಟೋರಿಕ್ಷಾದಲ್ಲಿ ಮನೆಗೆಂದು ಹೊರಟಿದ್ದರು. ಹೊಸದುರ್ಗ ಕುಶಾಲ ನಗರದಲ್ಲಿ ರಿಕ್ಷಾದಿಂದಿಳಿದು ಮೂವರೂ ನಡೆದು ಕೊಂಡು ಹೋಗುತ್ತಿದ್ದ ವೇಳೆ ಪ್ರೀತಿಯ ವಿಷಯದಲ್ಲಿ ಮತ್ತೆ ಜಗಳವಾಗಿತ್ತು. ಈ ವೇಳೆೆ 17ರ ಹರೆಯದ ವಿದ್ಯಾರ್ಥಿ ಹೊಡೆದ ರಭಸಕ್ಕೆ ಅಭಿಲಾಶ್‌ನ ಮುಖದಲ್ಲಿ ಗಾಯವಾಗಿತ್ತು. ಗಾಯದಿಂದ ವಸರುತ್ತಿದ್ದ ರಕ್ತವನ್ನು ಸಮೀಪದ ತೊಳೆಯಲೆಂದು ಅಭಿಲಾಶ್ ಸಮೀಪದ ಕೆರೆ ಹತ್ತಿರ ಹೋಗಿದ್ದನು. ಕೆರೆ ನೀರಲ್ಲಿ ತೊಳೆಯುತ್ತಿದ್ದಾಗ 17 ವರ್ಷದ ಸಹಪಾಠಿ ಹಿಂದಿನಿಂದ ಆತನನ್ನು ಕೆರೆಗೆ ದೂಡಿ ಹಾಕಿದನೆನ್ನಲಾಗಿದೆ. ಈ ವೇಳೆ ಈಜಿ ಕೆರೆಯಿಂದ ಮೇಲೆ ಬಂದ ಅಭಿಲಾಶ್‌ನನ್ನು ಮತ್ತೆ ಕೆರೆಗೆ ತಳ್ಳಿ ಮೃತಪಟ್ಟಿರುವುದು ಖಚಿತಗೊಂಡ ಬಳಿಕ ಆತನ ಬ್ಯಾಗನ್ನು ಕೆರೆಯಿಂದ ಅಲ್ಪ ದೂರ ಎಸೆದು ಅಲ್ಲಿಂದ ತೆರಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮರುದಿನ ಅಭಿಲಾಶ್‌ನ ಮೃತದೇಹ ಪತ್ತೆಯಾದ ವೇಳೆ ಆತನ ಸಹಪಾಠಿಗಳನ್ನು ಪೊಲೀಸರು ವಿಚಾರಣೆಗೊಳಪಡಿ ಸಿದ್ದರು. ಆದರೆ ಅವರು ಏನೂ ಅರಿಯದಂತೆ ವರ್ತಿಸಿದ್ದರು. ಈ ನಡುವೆ ಅಭಿಲಾಶ್‌ನ ಸಾವಿನ ಕುರಿತು ಶಂಕೆ ವ್ಯಕ್ತಪಡಿಸಿದ್ದ ಕುಟುಂಬಸ್ಥರು ಹಾಗೂ ಸ್ಥಳೀಯರು ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ತೀವ್ರಗೊಳಿಸಿದ ಪೊಲೀಸರು ಸಹಪಾಠಿ ವಿದ್ಯಾರ್ಥಿಗಳನ್ನು ಮತ್ತೊಮ್ಮೆ ತೀವ್ರ ವಿಚಾರಣೆಗೆ ಒಳಪಡಿಸಿದಾಗ ಈ ಭೀಕರ ಕೃತ್ಯ ಬಯಲಿಗೆ ಬಂದಿದೆ.
ಅಮಾಯಕರಂತೆ ನಟಿಸಿದ್ದ ಆರೋಪಿಗಳು…
ಸಹಪಾಠಿಯ ಕೊಲೆ ನಡೆಸಿದರೂ ಹಂತಕ ವಿದ್ಯಾರ್ಥಿ ಗಳಿಬ್ಬರು ಯಾವುದೇ ರೀತಿಯ ಸಂಶಯ ಬಾರದಂತೆ ವರ್ತಿಸುತ್ತಿದ್ದರು. ಅಭಿಲಾಶ್‌ನ ಮೃತದೇಹವನ್ನು ಶಾಲೆ ಹಾಗೂ ಮನೆಯಲ್ಲಿ ಅಂತಿಮ ದರ್ಶನಕ್ಕೆ ಇರಿಸಿದ್ದ ಸಂದರ್ಭದಲ್ಲಿ ಇವರಿಬ್ಬರು ಸಕ್ರಿಯರಾಗಿದ್ದರು. ಅಲ್ಲದೇ ಮೃತನ ಅಂತ್ಯಕ್ರಿಯೆಯಲ್ಲೂ ಪಾಲ್ಗೊಂಡಿದ್ದರು. ಪೊಲೀಸರು ಇವರಿಬ್ಬರನ್ನು ಸಂಶಯದ ಮೇರೆಗೆ ಒಂದೊಮ್ಮೆ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿ ದರೂ ತಮಗೇನೂ ತಿಳಿದಿಲ್ಲ ಎಂದು ಸಂಶಯ ಬಾರದಂತೆ ಉತ್ತರಿಸಿದ್ದರು.
ಈ ನಡುವೆ ಅಭಿಲಾಶ್ ಸಾವಿನ ಕುರಿತು ಕುಟುಂಬಸ್ಥರು ಹಾಗೂ ಸಾರ್ವಜನಿಕರು ಆರಂಭದಲ್ಲೇ ಸಂಶಯ ವ್ಯಕ್ತಪಡಿಸಿದ್ದರು. ನಿಗೂಢ ಸಾವಿನ ಕುರಿತು ಸಮಗ್ರ ತನಿಖೆ ನಡೆಸುವಂತೆ ಆಗ್ರಹಿಸಿ ನಾಗರಿಕರು ಕ್ರಿಯಾ ಸಮಿತಿ ರಚಿಸಿ ಮಂಗಳವಾರ ಹೊಸದುರ್ಗದಲ್ಲಿ ತೀವ್ರ ಧರಣಿ ನಡೆಸಿದ್ದರು. ಒತ್ತಡಕ್ಕೆ ಮಣಿದ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದರು.
ಅಭಿಲಾಶ್ ಜತೆಗಿದ್ದ ಇಬ್ಬರು ಸಹಪಾಠಿಗಳನ್ನು ಮತ್ತೆ ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದರು. ಈ ವೇಳೆ ಮೊದಲ ವಿಚಾರಣೆ ವೇಳೆ ನೀಡಿದ್ದ ಹೇಳಿಕೆಗೆ ತದ್ವಿರುದ್ಧ ಉತ್ತರ ನೀಡಿ ದರೆನ್ನಲಾಗಿದೆ. ಇದರಿಂದ ಸಂಶಯಗೊಂಡು ಹೆಚ್ಚಿನ ವಿಚಾರಣೆ ನಡೆಸಿದಾಗ ಸಾವಿನ ಹಿಂದಿನ ರಹಸ್ಯ ಬಯಲಾಗಿದೆ.