ಉಡುಪಿ : ಈ ಹಿಂದಿನ ಸರಕಾರವು ಬ್ರಹ್ಮಾವರ, ಬೈಂದೂರು, ಹೆಬ್ರಿ ಸೇರಿದಂತೆ ರಾಜ್ಯದಲ್ಲಿ 43 ಹೊಸ ತಾಲೂಕುಗಳನ್ನು ಘೋಷಣೆ ಮಾಡಿದ್ದರೂ ಅನಂತರ ಅಧಿಕಾರಕ್ಕೆ ಬಂದ ಸರಕಾರ ತಾಲೂಕು ರಚನೆಯ ವಿಚಾರವನ್ನು ಕೈಬಿಟ್ಟಿರುವುದನ್ನು ವಿರೋಧಿಸಿ, ಕೂಡಲೇ ಮೊದಲ ಹಂತದಲ್ಲಿ ಬ್ರಹ್ಮಾವರ ತಾಲೂಕನ್ನಾಗಿ ಘೋಷಿಸಿ ಆದೇಶ ನೀಡಲು ಆಗ್ರಹಿಸಿ ನ. 21ರಂದು ಅಪರಾಹ್ನ 3 ಗಂಟೆಗೆ ಬ್ರಹ್ಮಾವರ ವಿಶೇಷ ತಹಶೀಲ್ದಾರ್ ಕಚೇರಿ ಬಳಿ ಪ್ರತಿಭಟನೆ ನಡೆಯಲಿದೆ.
್ಜಗದೀಶ್ ಶೆಟ್ಟರ್ ನೇತೃತ್ವದ ಬಿಜೆಪಿ ಸರಕಾರ ಹೊಸ ತಾಲೂಕು ಘೋಷಿಸಿ ಮೊದಲ ಹಂತದ ಚಟುವಟಿಕೆಗಳಿಗಾಗಿ 2 ಕೋ.ರೂ.ಗಳನ್ನು ವಿಂಗಡಿಸಿಟ್ಟಿತ್ತು. ಎಂ.ಬಿ. ಪ್ರಕಾಶ್ ಸಮಿತಿ ಪ್ರಸ್ತಾವಿಸಿದ ತಾಲೂಕುಗಳ ಹೊರತಾಗಿಯೂ ಬ್ರಹ್ಮಾವರ ಮತ್ತು ಬೈಂದೂರು ತಾಲೂಕುಗಳನ್ನು ಹೊಸತಾಗಿ ರಚಿಸಲು ಮಾಡಿದ ಮನವಿಗೆ ಸರಕಾರ ಸ್ಪಂದಿಸಿತ್ತು. ಹೆಬ್ರಿಯೂ ತಾಲೂಕಾಗುವ ಹಂತಕ್ಕೆ ಬಂದಿತ್ತು. ಆದರೆ ಕಾಂಗ್ರೆಸ್ ಸರಕಾರ ಇದನ್ನು ತಿರಸ್ಕರಿಸಿದೆ ಎಂದು ಮಾಜಿ ಶಾಸಕ ಕೆ. ರಘುಪತಿ ಭಟ್ ಮತ್ತು ಬಿಜೆಪಿ ಹಿಂ. ವರ್ಗಗಳ ಮೋರ್ಚಾ ಅಧ್ಯಕ್ಷ ಬಿ.ಎನ್. ಶಂಕರ ಪೂಜಾರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ವಿ. ಸುನಿಲ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಮೊದಲಾದವರು ಪಾಲ್ಗೊಳ್ಳಲಿದ್ದಾರ ಎಂದು ತಿಳಿದುಬಂದಿದೆ.