ಮಂಗಳೂರು,ನ. 20 : ರೆಡ್ ಎಫ್‌ಎಂನಿಂದ ನ.22ರಂದು ಸಂಜೆ ಐದು ಗಂಟೆಗೆ ನಗರದ ನೆಹರು ಮೈದಾನದಲ್ಲಿ ನಡೆಯುವ ಪ್ರಥಮ ರೆಡ್ ಎಫ್‌ಎಂ ತುಳು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿಂದಿ ಚಿತ್ರರಂಗದ ಪ್ರಸಿದ್ಧ ನಟ ಸುನಿಲ್ ಶೆಟ್ಟಿ ಆಗಮಿಸುತ್ತಿದ್ದಾರೆ.
ತುಳುನಾಡಿನಲ್ಲಿ ಅತಿ ಹೆಚ್ಚಾಗಿ ಬಳಸುವ ಭಾಷೆಯಾದ ತುಳು ಪಂಚ ದ್ರಾವಿಡ ಭಾಷೆಗಳಲ್ಲಿ ಒಂದು. ಇದು ತನ್ನದೇ ಆದ ವಿಶಿಷ್ಟ ಸಂಪ್ರದಾಯ, ಪರಂಪರೆ, ಸಾಂಸ್ಕೃತಿಕ ವೈಭವದ ಇತಿಹಾಸ ಹೊಂದಿದೆ. ತುಳುನಾಡಿನಲ್ಲಿ ಸಿನಿಮಾ ಪರಂಪರೆ ಆರಂಭ ಕಂಡದ್ದು 1971ರಲ್ಲಿ. 43 ವರ್ಷಗಳ ಇತಿಹಾಸ ಕಂಡಿರುವ ತುಳು ಸಿನಿಮಾದ ಸಾಧಕರನ್ನು ಗುರುತಿಸುವ ಯಾವುದೇ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಇದುವರೆಗೆ ನಡೆದಿರಲಿಲ್ಲ.
ನೂರಾರು ಕಲಾವಿದರ ಬದುಕನ್ನು ಮುನ್ನಡೆಸುತ್ತಿರುವ ತುಳು ಚಿತ್ರರಂಗ ಹಾಗೂ ಲಕ್ಷಾಂತರ ತುಳು ಭಾಷಿಗರ ಮನರಂಜಿಸುತ್ತಿರುವ ಎಲ್ಲ ಗೌರವಾನ್ವಿತ ಕಲಾವಿದರು, ತಂತ್ರಜ್ಞರನ್ನು ಅಭಿನಂದಿಸಿ, ಪ್ರೋತ್ಸಾಹಿಸಿ ಗೌರವಿಸುವ ಒಂದು ಪ್ರಾಮಾಣಿಕ ಪ್ರಯತ್ನವೇ ರೆಡ್ ಎಫ್‌ಎಂ ತುಳು ಫಿಲಂ ಅವಾರ್ಡ್ಸ್. ತುಳು ಭಾಷೆ ಹಾಗೂ ತುಳುನಾಡಿನ ಪ್ರತಿಭೆಗಳನ್ನು ಗೌರವಿಸುವ ಪ್ರಾಮಾಣಿಕ ಪ್ರಯತ್ನವನ್ನು ರೆಡ್ ಎಫ್‌ಎಂ ನಿರಂತರವಾಗಿ ನಡೆಸಿಕೊಂಡು ಬಂದಿದೆ.
ತುಳುನಾಡಿನಲ್ಲಿ ಹುಟ್ಟಿ, ಜಿಲ್ಲೆಯ ಹೆಸರನ್ನು ಬೆಳಗಿಸುತ್ತಿರುವ ಎಲ್ಲ ಕಲಾವಿದರು, ಗಣ್ಯ ವ್ಯಕ್ತಿಗಳ ಸಹಕಾರದಿಂದ ಕಾರ್ಯಕ್ರಮ ನಡೆಯಲಿದ್ದು, ಕನ್ನಡ ಹಾಗೂ ಹಿಂದಿ ಚಲನಚಿತ್ರ ರಂಗದಲ್ಲಿ ಗುರುತಿಸಿಕೊಂಡಿರುವ ತುಳುನಾಡಿನ ಗಣ್ಯರು, ಅಪಾರ ಜನಸ್ತೋಮ ಪಾಲ್ಗೊಳ್ಳಲಿದ್ದು, ಕರಾವಳಿ ಕರ್ನಾಟಕಲ್ಲಿ ಮೊದಲ ಬಾರಿಗೆ ಇಂತಹ ಅಪೂರ್ವ ಕಾರ್ಯಕ್ರಮ ನಡೆಯುತ್ತಿದೆ.
ತುಳು ಚಿತ್ರರಂಗದ ಎಲ್ಲ ಕಲಾವಿದರಿಗೆ ಹೊಸ ಹುಮ್ಮಸ್ಸು ತರುವ ನಿಟ್ಟಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಸಿದ್ಧ ಬಾಲಿವುಡ್ ನಟ ಸುನಿಲ್ ಶೆಟ್ಟಿ ಸಂಪೂರ್ಣ ಸಹಕಾರ ನೀಡುವ ಜತೆಗೆ, ಪ್ರಶಸ್ತಿ ಪ್ರದಾನ ನಡೆಸಲಿದ್ದಾರೆ.
ರೆಡ್ ಎಫ್‌ಎಂ ಕೇಳುಗರು ರೆಡ್ ಎಫ್‌ಎಂನಲ್ಲಿ ನಡೆಯುವ ವಿಶೇಷ ಸ್ಪರ್ಧೆಗಳಲ್ಲಿ ಭಾಗವಹಿಸಿ ಅದೃಷ್ಟಶಾಲಿ ವಿಜೇತರು ಸುನಿಲ್ ಶೆಟ್ಟಿ ಅವರನ್ನು ಭೇಟಿ ಮಾಡುವ ಅಪೂರ್ವ ಅವಕಾಶ ಪಡೆಯಲಿದ್ದಾರೆ. ಈ ಕಾರ್ಯಕ್ರಮದ ಪ್ರವೇಶ ಉಚಿತವಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ರೆಡ್ ಎಫ್‌ಎಂನ ಪತ್ರಿಕಾ ಪ್ರಕಟಣೆ ತಿಳಿಸಿದೆ.