ಮಂಗಳೂರು: ಪ್ರತಿ ತಿಂಗಳು ಡೀಸೆಲ್, ಬಿಡಿಭಾಗಗಳ ದರ, ಸಂಬಳದ ವ್ಯತ್ಯಯಗಳನ್ನು ಪರಿಗಣಿಸಿ ಖಾಸಗಿ ಬಸ್‌ಗಳ ಪ್ರಯಾಣ ದರವನ್ನು ಪ್ರತಿ ಆರು ತಿಂಗಳಿಗೊಮ್ಮೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಪರಿಷ್ಕರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಧಿಕಾರದ ಅಧ್ಯಕ್ಷ ಹಾಗೂ ದ.ಕ. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಾರ್ಯಸೂಚಿಯ ಚರ್ಚೆಯ ಬಳಿಕ ಸಾರ್ವಜನಿಕರ ಅಹವಾಲಿನ ಸಂದರ್ಭ ಡಿವೈಎಫ್‌ಐನ ಕಾರ್ಯಕರ್ತರು ಸೇರಿದಂತೆ ಸಾರ್ವಜನಿಕರು ಮಾತನಾಡಿ, ಡೀಸೆಲ್ ದರ ಇಳಿಕೆಯಾದರೂ, ಬಸ್ ಪ್ರಯಾಣ ದರ ಇಳಿಕೆಯಾಗಿಲ್ಲ , ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದಾಗ, ಜಿಲ್ಲಾಧಿಕಾರಿ ಈ ನಿರ್ಧಾರ ಪ್ರಕಟಿಸಿದರು.
ಕೆನರಾ ಬಸ್‌ಮಾಲೀಕರ ಸಂಘದ ಅಧ್ಯಕ್ಷ ರಾಜವರ್ಮ ಬಳ್ಳಾಲ್ ಮಾತನಾಡಿ, ಡೀಸೆಲ್ ದರವೊಂದೇ ಬಸ್ ಪ್ರಯಾಣ ದರ ನಿಗದಿಗೆ ಮಾನದಂಡವಲ್ಲ. ಪ್ರತಿನಿತ್ಯ ಬಸ್‌ನ ಬಿಡಿ ಭಾಗಗಳ ಬೆಲೆ ಏರಿಕೆಯಾಗುತ್ತವೆ ಎಂದರು.
9 ಕೆಎಸ್‌ಆರ್‌ಟಿಸಿ ಬಸ್‌ಗೆ ಲೈಸನ್ಸ್ ಮಂಜೂರು : ಮಂಗಳೂರು-ಮುಡಿಪು ನಡುವೆ ಮೂರು, ಮಂಗಳೂರು-ಸೋಮೇಶ್ವರ ನಡುವೆ ಒಂದು ಹಾಗೂ ಮಂಗಳೂರು ರೈಲ್ವೆ ನಿಲ್ದಾಣದಿಂದ ಬಜ್ಪೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಮಂಗಳೂರು-ಬಜ್ಪೆ ನಡುವೆ 2 ಬಸ್‌ಗಳಿಗೆ ಪಕ್ಕಾ ಪರವಾನಗಿ ಸೇರಿದಂತೆ ಕೆಎಸ್‌ಆರ್‌ಟಿಸಿಯಿಂದ ಸಲ್ಲಿಸಲಾದ ಒಟ್ಟು 9 ಅರ್ಜಿಗಳಿಗೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಸಭೆಯಲ್ಲಿ ಮಂಜೂರಾತಿ ನೀಡಲಾಯಿತು.
ಮಂಗಳೂರಿನಿಂದ ಮುಡಿಪುವಿಗೆ ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ಪಕ್ಕಾ ಪರವಾನಗಿ ನೀಡುವ ಕುರಿತಂತೆ ಚರ್ಚೆಯ ವೇಳೆ ಖಾಸಗಿ ಬಸ್ ಮಾಲೀಕರ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿದಾಗ, ಸಾರ್ವಜನಿಕರ ಬೇಡಿಕೆಯ ಮೇರೆಗೆ ಕೆಎಸ್‌ಆರ್‌ಟಿಸಿ ಬಸ್‌ಗಳ ಅಗತ್ಯವಿರುವುದರಿಂದ ಪಕ್ಕಾ ಪರವಾನಗಿ ನೀಡಬೇಕೆಂದು ಕೆಎಸ್‌ಆರ್‌ಟಿಸಿ ಪರ ವಕೀಲರು ಪ್ರಾಧಿಕಾರವನ್ನು ವಿನಂತಿಸಿದರು. ಮಂಗಳೂರು- ಮುಡಿಪು ಸೇರಿದಂತೆ ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗವು ಕೋರಿರುವ ಮೂರು ಮಾರ್ಗವನ್ನು ಗೊತ್ತುಪಡಿಸಿ ನವೆಂಬರ್ 30ರೊಳಗೆ ಟೈಮಿಂಗ್ ನೀಡಬೇಕು ಎಂದು ಆರ್‌ಟಿಒಗೆ ಡಿಸಿ ಸೂಚಿಸಿದರು. ಡಿಸೆಂಬರ್ 10ರೊಳಗೆ ಬಸ್ ಸಂಚಾರ ಆರಂಭಿಸಬೇಕು ಎಂದು ಕೆಎಸ್‌ಆರ್‌ಟಿಸಿ ಗೆ ಸೂಚಿಸಿದರು.
ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಿಂದ ಬಜ್ಪೆ ಹಾಗೂ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ಎ.ಬಿ. ಶೆಟ್ಟಿ ಸರ್ಕಲ್, ಲೇಡಿಗೋಶನ್, ಕ್ಲಾಕ್‌ಟವರ್, ಬಾವುಟಗುಡ್ಡೆ, ಜ್ಯೋತಿ, ಬಂಟ್ಸ್‌ಹಾಸ್ಟೆಲ್, ಪಿವಿಎಸ್, ಲಾಲ್‌ಬಾಗ್ ಸರ್ಕಲ್, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಕುಂಟಿಕಾನ, ಮುಲ್ಲಕಾಡು, ಕಾವೂರು ಜಂಕ್ಷನ್, ಮರಕಡ, ಮರವೂರು, ಶ್ರೀದೇವಿ ಕಾಲೇಜು, ಏರ್‌ಪೋರ್ಟ್ ಕ್ರಾಸ್‌ವರೆಗೆ ಕೆಎಸ್‌ಆರ್‌ಟಿಸಿ ಪಕ್ಕಾ ಪರವಾನಗಿಗೆ ಮಂಜೂರು ನೀಡಲಾಯಿತು. ರೈಲ್ವೆ ನಿಲ್ದಾಣದಿಂದ ಏರ್‌ಪೋರ್ಟ್‌ಗೆ ಕೆಎಸ್‌ಆರ್‌ಟಿಸಿ ಎಸಿ ಬಸ್ ಹಾಕುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗದವರು ವಿಟ್ಲದಿಂದ ಪುತ್ತೂರು ಮತ್ತು ವಾಪಸ್ ವಯಾ ಉಕ್ಕುಡ ಗೇಟ್, ಕೇಪು, ಪುಣಚ, ಬುಳೇರಿಕಟ್ಟೆ, ಕುಂಜೂರುಪಂಜ ಮತ್ತು ಮಚ್ಚಿಮಲೆ (10 ಸಿಂಗಲ್ಸ್ ಟ್ರಿಪ್ ಪ್ರತಿದಿನ) ಮಾರ್ಗದಲ್ಲಿ ಪಕ್ಕಾ ಪರವಾನಗಿಗೆ ಮಂಜೂರು ನೀಡಲಾಯಿತು.
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಅಡ್ಯಾರಪದುವು, ವಿಟ್ಲದಿಂದ ಪಕಳಕುಂಜಕ್ಕೆ ಪಕ್ಕಾ ಪರವಾನಗಿ ಹಾಗೂ ಸುಬ್ರಹ್ಮಣ್ಯದಿಂದ ಸಂಪಿಗೆಕಟ್ಟೆ ಮತ್ತು ಪುತ್ತೂರಿನಿಂದ ಶಂಗೇರಿಗೆ ತಾತ್ಕಾಲಿಕ ಪರವಾನಗಿಗೆ ಮಂಜೂರು ಮಾಡಲಾಯಿತು.
ಪ್ರಾದೇಶಿಕ ಸಾರಿಗೆ ಅಧಿಕಾರಿ ವಿರುದ್ಧ ಆಕ್ರೋಶ: ಸಾರಿಗೆ ಪ್ರಾಧಿಕಾರ ಸಭೆಯಲ್ಲಿ ವಿದ್ಯಾರ್ಥಿಗಳು, ಬಸ್ ಮಾಲೀಕರು, ಸಾರ್ವಜನಿಕರು ಪ್ರಾದೇಶಿಕ ಸಾರಿಗೆ ಅಧಿಕಾರಿ ವಿರುದ್ಧ ಆರೋಪ, ಆಕ್ರೋಶ ವ್ಯಕ್ತಪಡಿಸಿದರು.
ಡಿಎಂ ನೋಟಿಫಿಕೇಶನ್ ನಿಯಮ ಉಲ್ಲಂಘಿಸಿ ಸಾರಿಗೆ ಪ್ರಾಧಿಕಾರ ಕಚೇರಿ ಎದುರೇ ವಾಹನಗಳು ಓಡಾಡುತ್ತಿದ್ದರೂ ಸಾರಿಗೆ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ. ಸ್ಟೇಟ್ ಕ್ಯಾರಿಯೇಜ್ ಪರ್ಮಿಟ್ ಪಡೆದು ಬೇಕಾಬಿಟ್ಟಿ ಬಸ್ ಓಡಿಸುತ್ತಾರೆ. ಆದರೆ ಒಂದು ಬಸ್ ಓಡಿಸುವ ಮಾಲೀಕರನ್ನು ಬದುಕಲು ಬಿಡುತ್ತಿಲ್ಲ . ಕೇಸು ಹಾಕಿ ದಂಡ ಕಟ್ಟಿಸುತ್ತಿದ್ದಾರೆ. ಕೆಲವು ಹಿತಾಸಕ್ತಿಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸಿ, ನಮಗೆ ತೊಂದರೆ ನೀಡಲಾಗುತ್ತಿದೆ. ನನ್ನ ಬಸ್‌ನ ಪರ್ಮಿಟ್‌ನ್ನು ನನ್ನ ವಿರುದ್ಧ ದೂರು ನೀಡುವವರಿಗೆ ಐದು ವರ್ಷಗಳ ಕಾಲ ನೀಡುತ್ತೇನೆ. ಅವರೇ ಬಸ್ ಓಡಿಸಲಿ ಎಂದು ಬಸ್ ಮಾಲೀಕರೊಬ್ಬರು ತೀವ್ರ ಹತಾಶೆ ವ್ಯಕ್ತಪಡಿಸಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶರಣಪ್ಪ ಎಸ್.ಡಿ., ನಿಮಗಾಗಿರುವ ಅನ್ಯಾಯದ ಬಗ್ಗೆ ಲಿಖಿತವಾಗಿ ದೂರು ನೀಡಿ ಈ ಬಗ್ಗೆ ಪರಾಮರ್ಶಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಜಿಲ್ಲಾಧಿಕಾರಿ ಯಾಕೆ ಈ ರೀತಿ ಆಗುತ್ತಿದೆ ಎಂದು ಆರ್‌ಟಿಒ ಬಳಿ ವಿವರಣೆ ಕೇಳಿದರು. ಈ ಬಗ್ಗೆ ಲಿಖಿತ ದೂರು ನೀಡಿದಾಗ ಸಮಗ್ರ ತನಿಖೆ ನಡೆಸಬೇಕು ಎಂದರು.
ಬಸ್‌ಗೆ ಹತ್ತಿ ಕುಳಿತಾಕ್ಷಣ ಸೀಟಿನ ಬಳಿ ಬಂದು ಮೈಕೈ ಮುಟ್ಟಿ ಭಿಕ್ಷೆ ಬೇಡಲು ಮೂರ‌್ನಾಲ್ಕು ಮಂದಿ ಒಟ್ಟಾಗಿ ಬರುತ್ತಾರೆ. ಇದರಿಂದ ಬಸ್ಸಿನಲ್ಲಿ ಪ್ರಯಾಣಿಸುವುದೇ ಕಷ್ಟಸಾಧ್ಯವಾಗುತ್ತಿದೆ ಎಂದು ವಿದ್ಯಾರ್ಥಿಯೊಬ್ಬ ಸಭೆಯಲ್ಲಿ ಪ್ರಾಧಿಕಾರದ ಅಧ್ಯಕ್ಷರ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಇಬ್ರಾಹಿಂ ಈ ಬಗ್ಗೆ ಪೊಲೀಸರ ಸಹಕಾರದೊಂದಿಗೆ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಹಿರಿಯ ನಾಗರಿಕರು, ಮಹಿಳೆಯರು ಹಾಗೂ ವಿಕಲಚೇತನರಿಗೆ ಬಸ್‌ಗಳಲ್ಲಿ ಸಂಚರಿಸುವಾಗ ಅವರಿಗೆ ಲಭ್ಯವಿರುವ ಆಸನಗಳನ್ನು ಒದಗಿಸುವ ನಿಟ್ಟಿನಲ್ಲಿ ಚಾಲಕರು ಹಾಗೂ ನಿರ್ವಾಹಕರಿಗೆ ಬಸ್ ಮಾಲೀಕರು ಸೂಕ್ತ ಮಾರ್ಗದರ್ಶನವನ್ನು ಒದಗಿಸಬೇಕು ಎಂದು ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಇಬ್ರಾಹಿಂ ಸಲಹೆ ನೀಡಿದರು.
ಸಮಾಜ ಸೇವಕ ಹನುಮಂತ ಕಾಮತ್ ಮಾತನಾಡಿ, ಯಾವುದೇ ಬಸ್‌ನ ಪರವಾನಗಿ ಬಗ್ಗೆ ಮಾತನಾಡಿದಾಗ ಡಿಎಂ ನೋಟಿಫಿಕೇಶನ್ ಬಗ್ಗೆ ಉಲ್ಲೇಖಿಸುತ್ತಾರೆ. ಜನರ ಅನುಕೂಲಕ್ಕಾಗಿ ಕಾಲ ಕಾಲಕ್ಕೆ ಅದನ್ನು ಪರಿಷ್ಕರಿಸುವ ಹಕ್ಕು ಜಿಲ್ಲಾಧಿಕಾರಿಗೆ ಇದೆ ಎಂದರು.
ಎಕ್ಸ್‌ಪ್ರೆಸ್ ಬಸ್ ನಿಲುಗಡೆಗೆ ಆಗ್ರಹ: ಹಳೆಯಂಗಡಿಯ ಸಾರ್ವಜನಿಕರ ನಿಯೋಗವೊಂದು, ಮಂಗಳೂರು- ಉಡುಪಿ ನಡುವೆ ಸಂಚರಿಸುವ ಎಕ್ಸ್‌ಪ್ರೆಸ್ ಬಸ್‌ಗಳು ಹಳೆಯಂಗಡಿ ಬಳಿ ನಿಲುಗಡೆ ಮಾಡುವಂತೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯ ನಾಗರಿಕರು ಸಭೆಯಲ್ಲಿ ಆಗ್ರಹಿಸಿದರು.
ಮಂಗಳೂರು ಕಾರ್ಕಳ ನಡುವೆ ಸಂಚರಿಸುವ ಎಕ್ಸ್‌ಪ್ರೆಸ್ ಬಸ್‌ಗಳು ನಿಲುಗಡೆ ನೀಡುತ್ತಿವೆ. ಆದರೆ ಹಳೆಯಂಗಡಿಯಿಂದ ಉಡುಪಿಗೆ ಸಂಚರಿಸುವ ವಿದ್ಯಾರ್ಥಿಗಳು, ಉದ್ಯೋಗಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನಿಲುಗಡೆಗೆ ಕೋರಿ ಹಲವಾರು ವರ್ಷಗಳಿಂದ ಬೇಡಿಕೆ ಸಲ್ಲಿಸಲಾಗುತ್ತಿದೆ ಎಂದು ನಿಯೋಗವು ಸಭೆಯಲ್ಲಿ ಒತ್ತಾಯಿಸಿತು. ಹಳೆಯಂಗಡಿಯಲ್ಲಿ ನಿಲುಗಡೆಗೆ ಅಭ್ಯಂತರವಿಲ್ಲದಿದ್ದರೂ ಈಗಾಗಲೇ ಸರ್ವಿಸ್ ಬಸ್ಸುಗಳು ನಿಲುಗಡೆ ಮಾಡುತ್ತಿವೆ. ಎಕ್ಸ್‌ಪ್ರೆಸ್‌ಗಳು ಕೂಡಾ ನಿಲುಗಡೆಗೆ ಮುಂದಾದರೆ ಆ ಬಸ್‌ಗಳು ಶಟಲ್ ಬಸ್‌ಗಳಾಗಲಿವೆ ಎಂದು ಕೆನರಾ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಾಜವರ್ಮ ಬಳ್ಳಾಲ್ ಆಕ್ಷೇಪಿಸಿದರು. ಈ ಬಗ್ಗೆ ಒಂದು ವಾರದಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಇಬ್ರಾಹಿಂ ತಿಳಿಸಿದರು.
ಪರವಾನಗಿ ರದ್ದು: ನಾನಾ ಮಾರ್ಗಗಳಲ್ಲಿ ಪರವಾನಿಗೆ ಪಡೆದಿದ್ದರೂ ಬಸ್ ಸಂಚಾರ ಆರಂಭಿಸದ ಬಸ್ ಮಾಲೀಕರಿಗೆ ನೋಟಿಸ್ ನೀಡಿ ಪರವಾನಗಿ ರದ್ದುಪಡಿಸಲಾಗುವುದು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಅಫ್ಝಲ್ ಅಹ್ಮದ್ ಖಾನ್ ಸಭೆಯಲ್ಲಿ ತಿಳಿಸಿದರು.