ಮಂಗಳೂರು, ನ.21: ಅತ್ಯಾಚಾರಿಗಳ ಕೈ ಕತ್ತರಿಸಿ, ಅದರ ಬಳಿಕ ಬೇಕಾದ ಕಾನೂನು ಸಹಾಯ ಮತ್ತು ಕೋರ್ಟ್ ವೆಚ್ಚವನ್ನು ಶ್ರೀರಾಮಸೇನೆಯಿಂದ ಭರಿಸುತ್ತೇವೆ ಎಂದು ಇತ್ತೀಚೆಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ವಿರುದ್ಧ ಕದ್ರಿ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ನ.16ರಂದು ಮಂಗಳೂರಿಗೆ ಬಂದಿದ್ದ ಮುತಾಲಿಕ್ ಆರ್ಯ ಸಮಾಜದ ಬಳಿ ಸುದ್ದಿಗೋಷ್ಠಿಯ ನ್ನುದ್ದೇಶಿಸಿ ಅತ್ಯಾಚಾರಿಗಳನ್ನು ಕೋರ್ಟ್ ಮತ್ತು ಪೊಲೀಸ್ ಸ್ಟೇಷನ್‌ಗೆ ತೆಗೆದುಕೊಂಡು ಹೋಗುವ ಬದಲು ಪಾಲಕರು ಅಥವಾ ಸಂಬಂಧ ಪಟ್ಟವರು ಅತ್ಯಾಚಾರಿಗಳ ಕೈ ಕಾಲು ಗಳನ್ನು ಕತ್ತರಿಸಬೇಕು. ಇಂತಹ ಪ್ರಕರಣಗಳು ನಡೆದ ಸಂದರ್ಭ ಶ್ರೀರಾಮ ಸೇನೆಯ ವತಿಯಿಂದ ಕೋರ್ಟ್ ಪ್ರಕ್ರಿಯೆಯ ಸಂಪೂರ್ಣ ವೆಚ್ಚ ಭರಿಸಲಾಗುವುದು ಎಂದಿದ್ದರು. ಈ ಹೇಳಿಕೆಯ ಹಿಂದೆ ಹಿಂಸೆಗೆ ದಾರಿ ಮಾಡಿಕೊಡುವ ಮತ್ತು ಶಾಂತಿ ಕದಡುವ ಉದ್ದೇಶ ಇರುವುದರಿಂದ ಐಪಿಸಿ ಸೆಕ್ಷನ್ 505(1)ಬಿಯಂತೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಐಪಿಸಿ ಸೆಕ್ಷನ್ 505(1)ಬಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲು ನ್ಯಾಯಾಲಯದ ಪೂರ್ವ ಅನುಮತಿ ಪಡೆಯಬೇಕಾಗಿರುವುದರಿಂದ ಕಳೆದ ಎರಡು ದಿನಗಳಲ್ಲಿ ನ್ಯಾಯಾಲ ಯದ ಪ್ರಕ್ರಿಯೆಗಳನ್ನು ಪೂರ್ಣ ಗೊಳಿಸಿ ಗುರುವಾರ ಪ್ರಕರಣ ದಾಖಲಿ ಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಪ್ರಮೋದ್ ಮುತಾಲಿಕ್ ಪತ್ರಿಕಾ ಗೋಷ್ಠಿ ನಡೆಸಿ ಹೇಳಿಕೆ ನೀಡಿದ್ದು, ಮಾಧ್ಯಮಗಳಲ್ಲಿ ಬಂದ ವರದಿ ಗಳನ್ನು ಆಧರಿಸಿ ದೂರು ದಾಖಲಿ ಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.