ಪುಣೆ,ನ.22: ಶಾಲಾ ಬಾಲಕಿಯರ ಜತೆ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯೊಬ್ಬನಿಗೆ ಸಾರ್ವಜನಿಕವಾಗಿ ಚಪ್ಪಲಿ ಸೇವೆ ಮಾಡಿದ ಘಟನೆ ಪುಣೆಯ ಸಮೀಪದ ಪಿಂಪ್ರಿಯಲ್ಲಿ ನಡೆದಿದೆ.
ತಮ್ಮದೇ ಶಾಲೆಯಲ್ಲಿ ಕೆಲಸ ಮಾಡುತ್ತಿರುವ ಕ್ಲರ್ಕ್ ತಮ್ಮ ಜತೆ ಅಸಹ್ಯವಾಗಿ ವರ್ತಿಸುತ್ತಿದ್ದಾನೆ ಎಂದು ಬಾಲಕಿಯರು ಮಹಿಳಾ ರಕ್ಷಣಾ ತಂಡ ದಾಮಿನಿ ಬ್ರೀಗೇಡ್‌ಗೆ ದೂರು ನೀಡಿದ್ದರು. ತಕ್ಷಣ ಶಾಲೆಗೆ ಆಗಮಿಸಿದ ಬ್ರಿಗೇಡ್ ಸದಸ್ಯರು ಕ್ಲರ್ಕ್‌ನನ್ನು ಹೊರಗೆಳೆದು ಚಪ್ಪಲಿಯಿಂದ ಥಳಿಸಿದ್ದಾರೆ. ನಂತರ ಆತನನ್ನು ಪೊಲೀಸರಿಗೆ ಒಪ್ಪಿಸಲಾಯಿತು. ಆತನ ಮೇಲೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ.
ನಗರದ ಖಾಸಗಿ ಶಾಲೆಯೊಂದರಲ್ಲಿ ಗುಮಾಸ್ತನಾಗಿ ಕೆಲಸಮಾಡುವ ಶಿವಾನಂದ ಚೌಧರಿ ಕಳೆದ ಕೆಲ ದಿನಗಳಿಂದ ವಿದ್ಯಾರ್ಥಿನಿಯರು ಒಬ್ಬೊಬ್ಬರೆ ಸಿಕ್ಕಾಗ ಅಸಭ್ಯವಾಗಿ ವರ್ತಿಸುತ್ತಿದ್ದ. ಈ ಕುರಿತು ವಿದ್ಯಾರ್ಥಿನಿಯರು ಪ್ರಾಂಶುಪಾಲರ ಬಳಿ ದೂರು ದಾಖಲಿಸಿದ್ದರು. ಆದರೆ ದೂರನ್ನು ಗಂಭೀರವಾಗಿ ಪರಿಗಣಿಸದ ಪ್ರಾಂಶುಪಾಲರು ಯಾವುದೇ ಕ್ರಮವನ್ನು ಕೈಗೊಂಡಿರಲಿಲ್ಲ.
ಆರೋಪಿಯ ಹದ್ದು ಮೀರಿದ ನಡವಳಿಕೆಯಿಂದ ಬೇಸತ್ತ ವಿದ್ಯಾರ್ಥಿನಿಯರು ಮೊದಲು ತಮ್ಮ ತಮ್ಮ ಪಾಲಕರಿಗೆ ಮಾಹಿತಿ ನೀಡಿದರು ಮತ್ತು ನಂತರ ಮಹಿಳೆಯರ ಹಿತಕ್ಕಾಗಿ ಕೆಲಸ ಮಾಡುವ ದಾಮಿನಿ ಬ್ರಿಗೇಡ್‌ನ್ನು ಸಂಪರ್ಕಿಸಿದರು.ತಕ್ಷಣ ಶಾಲೆಗೆ ಆಗಮಿಸಿದ ಬ್ರಿಗೇಡ್ ಅಧ್ಯಕ್ಷೆ ಮತ್ತು ಸದಸ್ಯರು ಆರೋಪಿಯನ್ನು ಶಾಲೆಯ ಮೈದಾನಕ್ಕೆಳೆದು ಚಪ್ಪಲಿಯಿಂದ ಏಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.