ಉಡುಪಿ: ಕಿಸ್ ಆಫ್ ಲವ್ ಬಗ್ಗೆ ರಾಜ್ಯ ಸರಕಾರದ ನಿಲುವನ್ನು ಟೀಕಿಸಿದ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಪ್ರತಿಕ್ರಿಯೆ ನೀಡಿರುವ ರಾಜ್ಯ ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ‘ಶೋಭಾ ಬಗ್ಗೆ ನಾನೇನು ಹೇಳಲಿಕ್ಕಿಲ್ಲ್ ಅದರಲ್ಲಿ ಅವರು ಎಕ್ಸ್‌ಪರ್ಟ್ ‘ಎನ್ನುವ ಮೂಲಕ ವಿವಾದ ಹುಟ್ಟುಹಾಕಿದ್ದಾರೆ.
ಮಾಧ್ಯಮ ಪ್ರತಿನಿಧಿಗಳು ಸಚಿವ ವಿನಯ ಕುಮಾರ್ ಸೊರಕೆ ಅವರಲ್ಲಿ ನೈತಿಕ ಪೊಲೀಸ್ ಗಿರಿಯನ್ನು ವಿರೋಧಿಸಿ ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿರುವ ಕಿಸ್ ಆಫ್ ಲವ್ ಬಗ್ಗೆ ಸರಕಾರದ ನಿಲುವನ್ನು ಪ್ರಶ್ನಿಸಿದಾಗ ಸಚಿವ ವಿನಯ ಕುಮಾರ್ ಸೊರಕೆ ಅವರು ಈ ಬಗ್ಗೆ ಸಿಎಂ ಉತ್ತರ ನೀಡಿದ್ದಾರಲ್ಲ ಎಂದರು. ಆದರೆ ಸಂಸದೆ ಶೋಭಾ ಕರಂದ್ಲಾಜೆ ಅವರು ಸಿಎಂ ಹಾಗೂ ಗೃಹ ಸಚಿವರ ನಿಲುವಿನ ಬಗ್ಗೆ ಟೀಕೆ ವ್ಯಕ್ತಪಡಿಸಿರುವ ಬಗ್ಗೆ ಗಮನಸೆಳೆದಾಗ ಸಚಿವ ಸೊರಕೆ ‘ ಎಕ್ಸ್‌ಪರ್ಟ್’ ಉತ್ತರ ನೀಡಿದರು.
‘ಶೋಭಾ ಅವರ ಬಗ್ಗೆ ನಾನೇನು ಹೇಳಲಿಕ್ಕಿಲ್ಲ. ಅದರಲ್ಲಿ ಅವರು ಎಕ್ಸ್‌ಪರ್ಟ್ ‘ಎನ್ನುತ್ತಾ ವ್ಯಂಗ್ಯ ನಗು ಚೆಲ್ಲಿದರು. ‘ಅದರಲ್ಲಿ ಅಂದರೆ ಯಾವುದರಲ್ಲಿ ? ಎಂದು ಸುದ್ದಿಗಾರರು ಮತ್ತೆ ಕೆದಕಿದಾಗ ‘ನೀವು ಯಾವುದರ ಬಗ್ಗೆ ಕೇಳಿದಿರೋ ಅದರಲ್ಲಿ ‘ಎಂದು ಲಘುವಾಗಿ ಹೇಳಿದರು.
ಕ್ಷಮೆಯಾಚಿಸಬೇಕಾಗಿ ಬಿ.ಜೆ.ಪಿ. ಒತ್ತಾಯ
ಕಿಸ್ಸಿಂಗ್ ಡೇ ವಿಚಾರವಾಗಿ ಮಾಧ್ಯಮದವರು ಸರಕಾರದ ನಿಲುವಿನ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಾದ ವಿನಯ್ ಕುಮಾರ್ ಸೊರಕೆಯವರನ್ನು ಪ್ರಶ್ನಿಸಿದಾಗ, ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಅವರು ನೀಡಿರುವ ತೀರಾ ಲಘುವಾಗಿ ಮತ್ತು ಅವಹೇಳನಕಾರಿ ಹೇಳಿಕೆಯು ಜಿಲ್ಲಾ ಉಸ್ತುವಾರಿ ಸಚಿವರ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ. ಸಂಸದರಾಗಿ ಹಾಗೂ ಸಚಿವರಾಗಿ ಕಾರ್‍ಯನಿರ್ವಹಿಸಿ, ಸಾರ್ವಜನಿಕ ಜೀವನದಲ್ಲಿ ಅನೇಕ ವರ್ಷಗಳ ಅನುಭವ ಇರುವ ಸೊರಕೆಯವರು ತೀರಾ ಅನಾಗರೀಕವಾಗಿ ಮಾತನಾಡಿರುವುದು ತೀರಾ ಖಂಡನೀಯ, ಇಂತಹ ಹೇಳಿಕೆಯನ್ನು ನೀಡುವ ಮೂಲಕ ಸುಸಂಸ್ಕೃತ ಉಡುಪಿ ಜಿಲ್ಲೆಯ ಜನತೆಗೆ ಮಾಡಿದ ಅವಮಾನ, ಕೂಡಲೇ ಸಚಿವರು ಜನತೆ ಮುಂದೆ ಬಹಿರಂಗ ಕ್ಷಮೆಯಾಚಿಸಬೇಕು ಎಂದು ಬಿ.ಜೆ.ಪಿ. ಜಿಲ್ಲಾಧ್ಯಕ್ಷರಾದ ತಿಂಗಳೆ ವಿಕ್ರಮಾರ್ಜುನ ಹೆಗ್ಗಡೆ ಒತ್ತಾಯಿಸಿದ್ದಾರೆ.
ಡಾ. ವಿ. ಎಸ್. ಆಚಾರ್‍ಯ ನಿರ್ವಹಿಸಿದ ಹುದ್ದೆಯಲ್ಲಿ ಸೊರಕೆಯವರು ಈಗ ಕೆಲಸ ಮಾಡುತ್ತಿದ್ದು, ಆ ಹುದ್ದೆಯ ಘನತೆಯನ್ನು ಉಳಿಸುವಂತಹ ಕೆಲಸವನ್ನು ಮಾಡುವಲ್ಲಿ ಗಮನ ಹರಿಸದೇ, ಸಭ್ಯತೆಯ ಎಲ್ಲೆಯನ್ನು ಮೀರಿ, ಸಂಸದೆಯೂ ಆದ ಒಬ್ಬ ದಿಟ್ಟ ಹೆಣ್ಣು ಮಗಳ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವುದು, ಮಹಿಳೆಯರ ಮೇಲಿನ ಅವರ ಅಭಿಪ್ರಾಯವನ್ನು ಎತ್ತಿ ತೋರಿಸುತ್ತದೆ, ಅವರು ಈ ಕೂಡಲೇ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕೆಂದು ತಿಂಗಳೆ ಒತ್ತಾಯಿಸಿದ್ದಾರೆ.