ಮಂಗಳೂರು, ನ.23: ನ.29ರಂದು ನಡೆಯಲಿರುವ ‘ಕಿಸ್ ಆಫ್ ಲವ್’ (ಮುತ್ತು ವಿನಿಮಯ) ಕಾರ್ಯಕ್ರಮವು ನಾಗರಿಕ ಮಾನದಂಡಗಳಿಗೆ ವಿರುದ್ಧವಾದ್ದರಿಂದ ದೇಶದಲ್ಲಿ ಸ್ವಚ್ಛ ನೈತಿಕ ಸಮಾಜವೊಂದನ್ನು ಬಯಸುವ ಜಮಾಅತೆ ಇಸ್ಲಾಮೀ ಹಿಂದ್‌ನ ದ.ಕ. ಜಿಲ್ಲಾ ಘಟಕದ ಮಹಿಳಾ ವಿಭಾಗವು ಅದನ್ನು ತೀವ್ರವಾಗಿ ಖಂಡಿಸಿದೆ.
ನೈತಿಕ ಪೊಲೀಸ್ ಗಿರಿಯ ವಿರುದ್ಧ ಹೋರಾಡುತ್ತಿದ್ದೇವೆ, ಪ್ರತಿಭಟಿಸುತ್ತಿದ್ದೇವೆ ಎಂದು ಘೋಷಿಸಿರುವ ಕಿಸ್ ಆಫ್ ಲವ್ ಕಾರ್ಯಕ್ರಮದ ಆಯೋಜಕರಾದ ಫ್ರೀ ಥಿಂಕರ್ಸ್ ಸಂಘಟನೆಯು ಪಾಶ್ಚಾತ್ಯ ಪ್ರೇರಿತ ದುಷ್ಟ ಸಂಪ್ರದಾಯವೊಂದನ್ನು ಸಮಾಜಮುಖಿಯಾಗಿಸುತ್ತಿದೆ ಎಂದು ಅದು ತಿಳಿಸಿದೆ.
ಈ ಕಾರ್ಯಕ್ರಮವು ನಾಗರಿಕ ಹಿತ, ಸಾಮಾಜಿಕ ಐಕ್ಯ ಮತ್ತು ದೇಶದ ಸಾಂಸ್ಕೃತಿಕ ನೆಲೆಗಟ್ಟಿಗೆ ಮಾರಕವಾಗಿರುವುದರಿಂದ ಎಲ್ಲ ಪ್ರಜ್ಞಾವಂತ ನಾಗರಿಕರು ಇದನ್ನು ಖಂಡಿಸಬೇಕು. ಸರಕಾರ ನೈತಿಕ ಪೊಲೀಸ್‌ಗಿರಿ ಹಾಗೂ ಕಿಸ್ ಆಫ್ ಲವ್‌ಗಳೆರಡನ್ನೂ ತಡೆದು ನಾಗರಿಕ ಸಮಾಜದ ಛಿದ್ರತೆ ಮತ್ತು ನೈತಿಕ ಅರಾಜಕತೆಯಿಂದಲೂ ತಡೆಯಬೇಕೆಂದು ಜಮಾಅತೆ ಇಸ್ಲಾಮೀ ಹಿಂದ್ ದ.ಕ. ಮಹಿಳಾ ವಿಭಾಗವು ಆಗ್ರಹಿಸಿದೆ.
ಸರಕಾರ, ಸಮಾಜದ ಪ್ರಜ್ಞ್ಞಾವಂತರು ಎಚ್ಚರಿಕೆಯಿಂದ ವರ್ತಿಸಿ ಸಮಾಜ ಮತ್ತು ನೈತಿಕ ಸಂಸ್ಕೃತಿಯ ರಕ್ಷಣೆಗೆ ಮುಂದಾಗಬೇಕು ಎಂದು ಜಮಾಅತೆ ಇಸ್ಲಾಮೀ ಹಿಂದ್ ದ.ಕ. ಜಿಲ್ಲಾ ಮಹಿಳಾ ವಿಭಾಗದ ಸಂಚಾಲಕಿ ಝೀನತ್ ಹಸನ್ ಆಗ್ರಹಿಸಿದ್ದಾರೆ.